Thursday, July 25, 2024

ಮೆಟ್ರೋ ಸಿಟಿಯಿಂದ ಅಮ್ಮನಿಗೊಂದು ಪತ್ರ

Most read

ಈ ಮೆಟ್ರೋ ಸಿಟಿ ನಂಗೆ ಧೈರ್ಯವಾಗಿ, ಸ್ವಾವಲಂಬಿಯಾಗಿ ಬದುಕೋದು ಹೇಗೆ ಅಂತ ಕಲಿಸಿದೆ. ಅದಕ್ಕಿಂತ ಹೆಚ್ಚಾಗಿ ಪಿತೃ ಪ್ರಧಾನ ವ್ಯವಸ್ಥೆಯ ಕಪಿಮುಷ್ಟಿಯಿಂದ ಹೊರಗ್ ಬಂದು ನನ್ನ ಬದುಕನ್ನ ನಾನೇ ಬದುಕೋಕೆ ಅವಕಾಶ ಕೊಟ್ಟಿದೆ. ಅವತ್ತು ನೀನ್ ಧೈರ್ಯ ಮಾಡಿ ನನ್ನ ಇಲ್ಲಿಗೆ ಕಳಿಸಿಲ್ಲ ಅಂದಿದ್ರೆ, ನಂಗೆ ಇವತ್ತು ಈ ಹೊಸ ಜಗತ್ತು ಸಿಕ್ತಾನೆ ಇರ್ಲಿಲ್ಲ…ಹೀಗೊಂದು ಅಮ್ಮನಿಗೆ ಪತ್ರ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ ದಿವ್ಯಶ್ರೀ ಅದರಂತೆ ಅವರಿಂದ.

ಅಮ್ಮಾ…

ನಾನು ಬೆಂಗಳೂರಿಗೆ ಬಂದು ಒಂದ್ ವರ್ಷನೇ ಆಗೋಯ್ತು. ಅದೇ ನೀನ್ ಅವತ್ತು, ಮನೆಯವರನ್ನೆಲ್ಲ ಎದುರು ಹಾಕಿಕೊಂಡು, ನನ್ನಾಸೆಯಂತೆ ಇಲ್ಲಿಗೆ ಕಳಿಸಿಕೊಟ್ಟೆಯಲ್ಲ, ಅವತ್ತು ಬೆನ್ನಿಂದೆ ಒಂದ್ ಬ್ಯಾಗ್, ಕೈಯಲ್ಲಿ ಒಂದ್ ಬ್ಯಾಗ್ ಹಿಡ್ಕೊಂಡ್ ಮೆಜೆಸ್ಟಿಕ್ ಲ್ಲಿ ನಿಂತಿದ್ದ ನಂಗೆ, ಯಾವ ಬಸ್ ಹತ್ತಬೇಕು ಅನ್ನೋದು ಗೊತ್ತಿರ್ಲಿಲ್ಲ. ಹೊಟ್ಟೆಗೂ ಏನೂ ಇಲ್ದೇ, ಆ ಬಿಸಿಲಲ್ಲಿ ಕಣ್ ಕಣ್ ಬಿಡ್ತಿದ್ದೆ ಅದ್ರು ಜೊತೆಗೆ ಕಣ್ಣಲ್ಲಿ ನೀರು ಸಹ ತುಂಬಿಕೊಂಡಿದ್ವು. ನನ್ನ ನೋಡಿದ್ ಆಟೋ ಡ್ರೈವರ್ ಒಬ್ಬ, “ಬನ್ನಿ ಮೇಡಂ ನಾನು ಕರ್ಕೊಂಡು ಹೋಗ್ತೀನಿ 300 ರೂಪಾಯಿ ಕೊಡಿ ಅಷ್ಟೇ” ಅಂದ. ಅದಿಕ್ ನಾನು 300 km ದೂರಕ್ಕೆ ಬರೀ 140 ರೂಪಾಯಿ ಕೊಟ್ಟು ಬಂದೀನಿ. ಬರೀ 6 km ಗೆ 300 ರೂಪಾಯಿ ಕೊಡ್ಬೇಕಾ ಅಂತ ಹೇಳಿ, ಯಾರ್ಯಾರನೋ ಕೇಳ್ಕೊಂಡು ಶಾಂತಿನಗರ ಬಸ್ ಹತ್ತಿ ಪಿಜಿ ಗೆ ಹೋಗಿದ್ದೆ. ಅವತ್ತು ಏನನ್ನೋ ಸಾಧಿಸಿದೆ ಅನ್ನೋವಷ್ಟು ಖುಷಿಯಾಗಿತ್ತು.

ಮತ್ತೇ ಅವತ್ತು ನೀನ್ ಯಾವಾಗ್ಲೂ ತಲೆ ಮೇಲೆ ದೊಡ್ಡ ಅನ್ನದ ಬುಟ್ಟಿ, ಕೈಯಲ್ಲಿ ಸಾಂಬಾರಿನ ಜಗ್ಗು ಹಿಡ್ಕೊಂಡು ಹೋಗೋ ದೃಶ್ಯ ನೆನಪಾಗಿತ್ತು. ನಿಂಗೊತ್ತಾ ಬೆಂಗಳೂರಿನ ನನ್ನ ಮೊದಲ ದಿನಗಳು ಹೇಗಿದ್ವು ಅಂತ? ಕಾಲೇಜಿಗೆ ಹೋದ್ರೆ, ಅಲ್ಲಿ ಯಾರೂ ಕನ್ನಡ ಮಾತಾಡೋರು ಇರ್ಲಿಲ್ಲ, ನಂಗೆ ಸರ್ಯಾಗಿ ಇಂಗ್ಲೀಷ್ ಮಾತಾಡೋಕೆ ಬರ್ತಿರ್ಲಿಲ್ಲ. ಕ್ಲಾಸ್ ಲ್ಲಿ ಫರ್ಸ್ಟ್ ಅಥವಾ ಮದ್ಯ ಬೆಂಚ್ ಲ್ಲಿ ಕೂತು ಬಿಟ್ರೆ, ಯಾರಾದ್ರೂ ಮಾತಾಡ್ಸಿ ಬಿಡ್ತಾರೋ ಅಂತ ಕೊನೆ ಬೆಂಚಲ್ಲಿ ಮೂಲೇಲಿ ಕೂರ್ತಿದ್ದೆ. ಕ್ಯಾಂಟೀನ್ ಗೆ ಹೋದ್ರೆ, ಅಲ್ಲಿದ್ದ ತಿಂಡಿಗಳ ಹೆಸರೇ ಗೊತ್ತಿರ್ಲಿಲ್ಲ, ಕಾಲೇಜ್ ಮುಗ್ಸಿ ಪಿಜಿ ಗೆ ಬಂದ್ರೆ, ಅವರ್ ಕೊಡ್ತಿದ್ದ ಊಟ ನನ್ನ ನೀರಿಕ್ಷೆಗೂ ಮೀರಿದ್ದಾಗಿರ್ತಿತ್ತು. ಹೊರಗ್ ತಿನ್ನೋಣ ಅಂದ್ರೆ, ಅಲ್ಲಿ ನೀ ಕಲಿಸಿದ ದುಡ್ಡಿನ ಲೆಕ್ಕಾಚಾರ ನೆನಪಾಗ್ತಿತ್ತು. ಕೊನೆ ಕೊನೆಗೆ ಹಸಿವು ಕಟ್ಟೋದು ಕಷ್ಟನೇ ಆಗ್ಲಿಲ್ಲ ಕಣೇ ಅಮ್ಮಾ..

ನನ್ನ ಕಾಲೇಜ್ ಲ್ಲಿ ಮತ್ತೇ ಬೆಂಗಳೂರು ಸಿಟಿಯಲ್ಲಿ ಯಾವಾಗ್ಲೂ ನನ್ನನ್ನ ಅಚ್ಚರಿಗೊಳಿಸೋ ಒಂದಿಷ್ಟು ವಿಚಾರಗಳನ್ನ ನಿಂಗ್ ಹೇಳ್ಬೇಕು. ಏನ್ ಗೊತ್ತಾ, ನಮ್ ಕಾಲೇಜ್ ಲ್ಲಿ ನಂಗ್ ಪಾಠ ಮಾಡೋ ಮೇಡಂಗಳು ಜೀನ್ಸ್ ಟೀ ಶರ್ಟ್ ಹಾಕೊಂಡ್ ಬರ್ತಾರೆ, ಅವ್ರೆಲ್ಲ ಸ್ಟೂಡೆಂಟ್ಸ್ ಗಳ ಜೊತೆಗೆ ಎಷ್ಟು ಫ್ರೆಂಡ್ಲಿ ಆಗಿರ್ತಾರೆ ಗೊತ್ತಾ? ನಮ್ ಲಂಚ್ ಬಾಕ್ಸ್ ಲ್ಲಿ ಇರೋ ತಿಂಡಿನ ಅವರೂ ಸಹ ತಿಂತಾರೆ. ಕೆಲವು ಸಲ ಟೀಚರ್ ಯಾರೂ ಸ್ಟೂಡೆಂಟ್ ಯಾರೂ ಅಂತ ಗೊತ್ತೇ ಆಗಲ್ಲ. ಟೀಚರ್ ಅಂದ ತಕ್ಷಣ ಯಾವಾಗ್ಲೂ ಸೀರೆ ಉಟ್ಕೊಂಡ್, ಮುಖ ಗಂಟು ಹಾಕೊಂಡು, ಸ್ಟೂಡೆಂಟ್ಸ್ಗಳನ್ನ ಹೆದರಿಸ್ತಾ, ಸ್ಟೂಡೆಂಟ್ಸ್ ಮತ್ತೇ ತಮ್ಮ ನಡುವೆ ಯಾವಾಗ್ಲೂ ಅಂತರ ಕಾಯ್ಕೊಂಡು ಅದನ್ನೇ ಸಾಧನೆ ಅನ್ಕೊಳೋರ್ನ ನೋಡಿದ್ದ ನಂಗೆ, ಇಲ್ಲಿನ ಟೀಚರ್ಸ್ ಗಳನ್ನ ನೋಡಿ ಅಚ್ಚರಿನೇ ಆಗ್ತಿತ್ತು.


ಆಮೇಲೆ ನಿಂಗೊತ್ತಾ, ಈ ಬೆಂಗಳೂರಲ್ಲಿ ಹುಡುಗೀರು ಮತ್ತೇ ಹೆಂಗಸರು ಎಷ್ಟು ಧೈರ್ಯವಾಗಿ ಇರ್ತಾರೆ ಅಂತ. ಎಲ್ಲದನ್ನು ಪ್ರಶ್ನೆ ಮಾಡೋದ್ ಅವರ ರಕ್ತ ದಲ್ಲೇ ಬಂದಿದೆ ಅನ್ಸತ್ತೆ. ಗಂಡನ ಮಾತೇ ವೇದವಾಕ್ಯ ಅಂತ ಅದನ್ನ ಪಾಲಿಸೋ ನನ್ನೂರಿನ ಹೆಂಗಸರನ್ನ ಒಂದ್ ಸಾರೀನಾದ್ರೂ ಈ ಬೆಂಗಳೂರಿನ ಹೆಣ್ಣುಗಳ ಮದ್ಯೆ ಬದುಕೋಕೆ ಬಿಡಬೇಕು. ಆಗ ನಿಜ್ವಾಗ್ಲೂ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಅಂದ್ರೆ ಏನು ಅಂತ ಅರ್ಥ ಮಾಡ್ಕೋತಾರೆ.


ಇನ್ನೊಂದ್ ವಿಷಯ ಏನ್ ಗೊತ್ತಾ? ನಮ್ಮೂರಲ್ಲಿ ಇರೋ ಹಂಗೇ, ಹೆಣ್ಣು ಮತ್ತೆ ಗಂಡುಮಕ್ಕಳ ನಡುವೆ ಇರೋ ಲಕ್ಷ್ಮಣ ರೇಖೆ ಇಲ್ಲಿ ಇಲ್ವೇ ಇಲ್ಲಾ. ಇಬ್ಬರನ್ನು ಸಮಾನವಾಗಿನೇ ನೋಡ್ತಾರೆ. ನಮ್ ಕಾಲೇಜ್ ಲ್ಲೂ ಸಹ ಹುಡುಗ ಹುಡುಗಿ ಇಬ್ಬರೂ ಒಟ್ಟಿಗೆ ಕೂತು ಪಾಠ ಕೇಳೋಕೆ ಅವಕಾಶ ಇದೆ. ನಂಗೊತ್ತು ಇದೆಲ್ಲಾ ಚರ್ಚಿಸೊ ವಿಷಯಗಳೇ ಅಲ್ಲ. ಆದ್ರೆ ನಾನು 15 ವರ್ಷ ಓದಿದ ಸ್ಕೂಲ್ ಕಾಲೇಜ್ ಲ್ಲಿ ಹೆಣ್ಣುಮಕ್ಕಳನ್ನು ಗಂಡುಮಕ್ಕಳ ಜೊತೆಗೆ ಬೆರೆಯೋದಕ್ಕೆ, ಒಂದಾಗಿ ಕಲಿಯೋದಕ್ಕೆ ಅವಕಾಶನೇ ಕೊಡದೇ ಇದ್ದ ವ್ಯವಸ್ಥೆ ಬಗ್ಗೆ ಈಗ ಆಶ್ಚರ್ಯ ಆಗ್ತಿದೆ. ಅಕಸ್ಮಾತ್ ಒಂದ್ ಹುಡುಗಿ ಹುಡುಗನ ಜೊತೆಗೆ ಖುಷಿಯಿಂದ ಮಾತಾಡಿದ್ರೆ, ಅದು ಇಡೀ ಕಾಲೇಜ್ ತುಂಬಾ ಹರಡಿ ಅದು ಯಾವ್ಯಾವ್ದೋ ತಿರುವುಗಳನ್ನ ಕಾಣೋದು. ಅಂತದ್ರಲ್ಲಿ ಈಗ ನಾನ್ ಕಲಿತಿರೋ ಕಾಲೇಜು ಹೊಸ ಆಲೋಚನೆಗಳಿಗೆ ದಾರಿ ಮಾಡಿ ಕೊಡ್ತಾ ಇದೆ.

ಆ ಮೊದಲ ದಿನಗಳಲ್ಲಿ, ನನ್ನ ಹಳ್ಳಿತನ, ಅದ್ರು ಜೊತೆಗೆ ನಾನು ಹುಡುಗಿ ಅನ್ನೋ ಎಚ್ಚರಿಕೆ ನನ್ನೊಳಗೆ ಸದಾ ಯುದ್ಧ ನಡೆಸ್ತಾ ಇದ್ವು. ಸಿಟಿ ಹುಡುಗಿಯರ ಜೊತೆಗೆ ಹೊಂದಿಕೊಳ್ಳಲಾಗದೇ ಒದ್ದಾಡ್ತಿದ್ದೆ. ಕೊನೆಗೂ ಹಠಕ್ಕೆ ಬಿದ್ದು, ಅವರಿಂದ ಒಂದೊಂದನ್ನೇ ಕಲಿಯೋಕೆ ಶುರು ಮಾಡಿದೆ.

ನಿಂಗೊತ್ತಾ ಸುಮಾರು ಆರು ತಿಂಗಳು, ನನ್ನ ಫ್ರೆಂಡ್ಸ್ ಜೊತೆಗೆ ಕೂತು ಹರಟೆ ಹೊಡೆಯುವಾಗ ಅವ್ರೆಲ್ಲ ಏನ್ ಮಾತಾಡ್ತಿದಾರೆ ಅಂತಾನೆ ಅರ್ಥ ಆಗ್ತಿರಲಿಲ್ಲ. ಅವರೆಲ್ಲ ಮಾತಾಡ್ತಿದ್ದ ವಿಚಾರಗಳು ನನ್ನ ಊಹೆಗೂ ನಿಲುಕ್ಕದ್ದಾಗಿತ್ತು. ಆ ವಿಷಯಗಳು ಮುಟ್ಟು, ಲೈಂಗಿಕತೆ, ಧರ್ಮ, ರಾಜಕಾರಣ, LGBTQ, ಸೆಕ್ಸ್ ವರ್ಕರ್ ಹೀಗೇ ಕೊನೆಯಿರದ ಪಟ್ಟಿ.. ನಂಗೆ ಆ ಹದಿನೈದು ವರ್ಷ ಯಾವುದರ ಬಗ್ಗೆ ಮಾತಾಡೋದು ಅಪರಾಧ ಅನ್ನೋ ಭಾವನೆ ಬೆಳೆಸಲಾಗಿತ್ತೋ ಅದೇ ವಿಚಾರಗಳ ಬಗ್ಗೆ ಮುಚ್ಚು ಮರೆ ಇಲ್ದೇ, ಹೆಣ್ಣು ಗಂಡು ಅನ್ನೋ ಭೇದ ಭಾವ ಇಲ್ದೇ ಚರ್ಚೆ ಮಾಡ್ತಿದ್ರು. ನಿಜ್ವಾಗ್ಲೂ ಈ ಮೆಟ್ರೋ ಸಿಟಿ ನಂಗೆ ಒಂದ್ ಅದ್ಭುತ ಜಗತ್ತು ಅನ್ನಿಸೋಕೆ ಶುರುವಾಗಿದೆ.


ಊರಲ್ಲಿ ಮನೆಯಿಂದ ಹೊರಗೆ ಕಾಲಿಡಬೇಕು ಅಂದಾಗೆಲ್ಲ ಅಪ್ಪನೋ, ಇಲ್ಲಾ ಅಣ್ಣನೋ ಇರ್ಬೇಕು ಅಂತ ಕಾಯ್ತಿವಲ್ಲ ಆ ತರ ಸ್ಥಿತಿ ಗೆ ಇಲ್ಲಿ ಅವಕಾಶನೇ ಇಲ್ಲಾ. ಹೆಣ್ಮಕ್ಕಳು ತಮಗೆ ಬೇಕಾದಾಗ, ಎಲ್ಲಿಗ್ ಬೇಕಾದ್ರು ತಾವೊಬ್ಬರೇ ಒಂಟಿಯಾಗಿ ಹೋಗೋ ಸ್ವಾತಂತ್ರ್ಯ ಮತ್ತು ಧೈರ್ಯ ಎರಡನ್ನೂ ಪಡ್ಕೊಂಡಿದಾರೆ. ಅವರನ್ನ ನೋಡಿದ್ರೇನೇ ಖುಷಿ ಮತ್ತು ಆಶ್ಚರ್ಯ ಎರಡೂ ಒಟ್ಟಿಗೆ ಆಗತ್ತೆ.
ಹಳ್ಳಿಲಿ ಇರೋ ಜನ ಯಾವಾಗ್ಲೂ ಹೇಳ್ತಾ ಇರ್ತಾರಲ್ಲ, ಬೆಂಗಳೂರಿಗೆ ಹೋದ ಹುಡ್ಗಿರು ಹಾಳಾಗ್ತಾರೆ, ಗಂಡುಬೀರಿಯರು ಆಗ್ತಾರೆ ಅಂತ. ಅದೆಲ್ಲಾ ನಿಜಕ್ಕೂ ಅರ್ಥನೇ ಇಲ್ದೇ ಇರೋ ಮಾತುಗಳು. ನಿಜ್ವಾಗ್ಲೂ ಇಲ್ಲಿ ಹೆಣ್ಣಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಸಿಗತ್ತೆ, ಅವ್ರ್ ಇಷ್ಟ ಪಟ್ಟ ಹಾಗೇ ಬದುಕುವ ಅವಕಾಶ ಸಿಗತ್ತೆ , ಎಲ್ಲಕಿಂತ ಮುಖ್ಯವಾಗಿ ಸಮಾನತೆಯ ಗಾಳಿಯನ್ನ ಉಸಿರಾಡೋಕೆ ಶುರು ಮಾಡ್ತಾರೆ. ವೈಚಾರಿಕತೆ ತಾನಾಗಿಯೇ ಮೈ ಗೂಡತ್ತೆ. ಈ ತರಹದ ಬದುಕು ನಮ್ಮ ಹಳ್ಳಿಲು ಇದ್ರೆ ಎಷ್ಟು ಚಂದ ಅಲ್ವಾ..


ಈ ಮೆಟ್ರೋ ಸಿಟಿ ನಂಗೆ ಧೈರ್ಯವಾಗಿ, ಸ್ವಾವಲಂಬಿಯಾಗಿ ಬದುಕೋದು ಹೇಗೆ ಅಂತ ಕಲಿಸಿದೆ. ಅದಕ್ಕಿಂತ ಹೆಚ್ಚಾಗಿ ಪಿತೃ ಪ್ರಧಾನ ವ್ಯವಸ್ಥೆಯ ಕಪಿಮುಷ್ಟಿಯಿಂದ ಹೊರಗ್ ಬಂದು ನನ್ನ ಬದುಕನ್ನ ನಾನೇ ಬದುಕೋಕೆ ಅವಕಾಶ ಕೊಟ್ಟಿದೆ. ಅವತ್ತು ನೀನ್ ಧೈರ್ಯ ಮಾಡಿ ನನ್ನ ಇಲ್ಲಿಗೆ ಕಳಿಸಿಲ್ಲ ಅಂದಿದ್ರೆ, ನಂಗೆ ಇವತ್ತು ಈ ಹೊಸ ಜಗತ್ತು ಸಿಕ್ತಾನೆ ಇರ್ಲಿಲ್ಲ.


ಎಲ್ಲಕಿಂತ ಹೆಚ್ಚಾಗಿ, ನನ್ನ ವಿಚಾರ ಮತ್ತೆ ಆಲೋಚನೆಗಳನ್ನ, ಬದಲಾಗ್ತಾ ಇರೋ ಜೀವನ ಶೈಲಿ ಯನ್ನ ನನ್ನಷ್ಟೇ ವೇಗವಾಗಿ, ನೀನೂ ಒಪ್ಪಿಕೊಂಡು ನಿನ್ನಿಷ್ಟದ ಬದುಕನ್ನೇ ಬದುಕು ಅಂತಿಯಲ್ಲ ಅದಕ್ಕೆ ನನ್ನಿ.

ಪ್ರೀತಿಯಿಂದ ಅಮ್ಮನಿಗೆ,

ದಿವ್ಯಾ


ದಿವ್ಯಶ್ರೀ ಅದರಂತೆ

ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ

More articles

Latest article