ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಿಲಿಟರಿ ಮತ್ತು ಆರ್ಥಿಕವಾಗಿ ಆ ದೇಶವನ್ನು ನಾಶಪಡಿಸುತ್ತಿರುವುದಾಗಿ ತಮ್ಮ ಟ್ರುಥ್ (Truth) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ಈಗ ಅಸ್ತಿತ್ವದಲ್ಲಿಲ್ಲ. ಅವರ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಅವರ ನಾಯಕರು ಭೂಮುಖದಿಂದಲೇ ಅಳಿಸಿಹೋಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಕಳೆದ 47 ವರ್ಷಗಳಿಂದ ಇರಾನ್ ಜಗತ್ತಿನಾದ್ಯಂತ ಮುಗ್ಧ ಜನರನ್ನು ಕೊಲ್ಲುತ್ತಿದೆ. ಅಮೆರಿಕದ 47ನೇ ಅಧ್ಯಕ್ಷನಾಗಿ ಅಂತಹವರನ್ನು ನಿರ್ಮೂಲನೆ ಮಾಡುವುದು ನನಗೆ ದೊರೆತ ದೊಡ್ಡ ಗೌರವ ಎಂದು ಅವರು ಬಣ್ಣಿಸಿದ್ದಾರೆ. ಯುದ್ಧದಲ್ಲಿ ಅಮೆರಿಕ ಗೆಲ್ಲುತ್ತಿಲ್ಲ ಎಂಬಂತೆ ವರದಿ ಮಾಡುತ್ತಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವಿರುದ್ಧ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸಮಯವಿದೆ ಎಂದು ಅವರು ಎಚ್ಚರಿಸಿದ್ದಾರೆ. “ಇಂದು ಆ ಉನ್ಮಾದಿತ ಶಕ್ತಿಗಳಿಗೆ ಏನಾಗಲಿದೆ ಎಂಬುದನ್ನು ಕಾದು ನೋಡಿ” ಎಂದು ಹೇಳುವ ಮೂಲಕ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸುವ ಮುನ್ಸೂಚನೆಯನ್ನು ಟ್ರಂಪ್ ನೀಡಿದ್ದಾರೆ.
ಸುದೀರ್ಘವಾಗಿ ಸಾಗುತ್ತಿರುವ ಈ ಯುದ್ಧದಿಂದಾಗಿ ಅಮೆರಿಕದ ಬೊಕ್ಕಸಕ್ಕೆ ಸಾವಿರಾರು ಕೋಟಿ ಡಾಲರ್ ಹೊರೆಯಾಗುತ್ತಿದೆ. ಇದರ ಜೊತೆಗೆ ಇರಾನ್ ಸಂಘರ್ಷದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ತೈಲ ಬೆಲೆ ಗಗನಕ್ಕೇರುತ್ತಿದೆ. ಇದು ಅಮೆರಿಕದ ಆಂತರಿಕ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ . ಹಾಗಾಗಿ ಒಂದೆ ಬಾರಿ ಇರಾನ್ ಮೇಲೆ ದೊಡ್ಡ ಮಡ್ಡದ ದಾಳಿ ಮಾಡುತ್ತಾರಾ ? ಟ್ರಂಪ್ ಅವರ ಮುಂದಿನ ನಡೆಯನ್ನು ಕುತೂಹಲದಿಂದ ಗಮನಿಸಲಾಗುತ್ತಿದೆ.

