ಉಪ ಚುನಾವಣೆ ನಡೆಯುವ ಮೂರೂ ಕ್ಷೇತ್ರ ಗೆಲ್ಲುತ್ತೇವೆ; ಬಿಎಸ್ ವೈ ವಿಶ್ವಾಸ

Most read

ಬೆಂಗಳೂರು: ಲೋಕಾಯುಕ್ತ ತನಿಖೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಒತ್ತಾಯಿಸಿದ್ದಾರೆ.


ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ನಿಜಕ್ಕೂ ಪ್ರಾಮಾಣಿಕತೆ ಇದ್ದರೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಆಗ ಮಾತ್ರ ವಾಸ್ತವಿಕ ವಿಚಾರಗಳು ಹೊರಕ್ಕೆ ಬರಲು ಸಾಧ್ಯ ಎಂದರು.


ಮುಖ್ಯಮಂತ್ರಿಗಳು ತಮ್ಮ ಜೀವನ ತೆರೆದ ಪುಸ್ತಕ ಎನ್ನುತ್ತಿದ್ದಾರೆ. ಲೋಕಾಯುಕ್ತದ ಬದಲಾಗಿ ತಮ್ಮ ಕುಟುಂಬದ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಪ್ರಾಮಾಣಿಕತೆಯನ್ನು ತೋರಿಸಲಿ ಎಂದು ಸವಾಲು ಹಾಕಿದರು.. ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು 3ಕ್ಕೆ 3 ಕ್ಷೇತ್ರಗಳನ್ನು ಎನ್‌ಡಿಎ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.


ಅಬಕಾರಿ ಇಲಾಖೆಯಲ್ಲಿ ಸಾವಿರಾರು ಕೋಟಿಯ ಹಗರಣ ನಡೆದಿದ್ದು, ಆ ಇಲಾಖೆಯ ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಅವರು ಒತ್ತಾಯಿಸಿದರು. ರಾಜ್ಯದೆಲ್ಲೆಡೆ ವಕ್ಫ್ ಒತ್ತುವರಿ ನಡೆದಿದೆ. ಇದರ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ. ಅಲ್ಲದೇ, ಸಂಬಂಧಿತ ಸಚಿವ ರಾಜೀನಾಮೆ ಕೊಡಬೇಕು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

More articles

Latest article