ಗ್ಯಾರೆಂಟಿ ಮುಂದುವರೆಸುತ್ತೇವೆ, ಕರ್ನಾಟಕ ಮಾದರಿ ಸೃಷ್ಟಿಸುತ್ತೇವೆ: ಸಿದ್ಧರಾಮಯ್ಯ ಸ್ವಾತಂತ್ರ್ಯ ದಿನಾಚರಣೆ ಭಾಷಣದ ಪೂರ್ಣಪಾಠ

Most read

ಬೆಂಗಳೂರು: ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ.‌ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗೆ ವಿಶೇಷವಾದ ಆದ್ಯತೆ ನೀಡಿ ರಾಜ್ಯದ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವ ಮತ್ತು ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಕಾರ್ಯವನ್ನು ಕರ್ನಾಟಕದಲ್ಲಿ ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಅವರು ಆಡಿದ ಮಾತುಗಳ ಪೂರ್ಣಪಾಠ ಇಲ್ಲಿದೆ.

ಪ್ರೀತಿಯ ನಾಡ ಬಾಂಧವರೆ,

  1. ಭಾರತದ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಬಯಸುತ್ತೇನೆ.
  2. ಎರಡು ಶತಮಾನಗಳ ಬ್ರಿಟಿಷರ ಕ್ರೂರ ದಾಸ್ಯದಿಂದ ಬಿಡುಗಡೆ ಹೊಂದಿ, ನಮ್ಮ ದೇಶ ಸ್ವಾತಂತ್ರ್ಯದ ಬೆಳಕನ್ನು ಕಂಡ ಸುದಿನವಿದು. ಇಡೀ ಜಗತ್ತೇ ಒಪ್ಪಿಕೊಂಡಂತೆ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ಪ್ರಾಮಾಣಿಕವಾದ ಮತ್ತು ಅಹಿಂಸಾತ್ಮಕವಾದ ಇನ್ನೊಂದು ಸ್ವಾತಂತ್ರ್ಯ ಹೋರಾಟ ಚರಿತ್ರೆಯಲ್ಲಿ ನಡೆದಿಲ್ಲ. ಇಂತಹ ಅಭೂತಪೂರ್ವ ಹೋರಾಟಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಹಾಗೂ ಅಮೂಲ್ಯವಾದ ಪ್ರಾಣವನ್ನೇ ಬಲಿದಾನ ಮಾಡಿದ ಎಲ್ಲ ಮಹಾನ್ ಚೇತನಗಳಿಗೆ ಈ ಸಂದರ್ಭದಲ್ಲಿ ಶ್ರದ್ಧಾಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.
  3. ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟವನ್ನು ಮೆಲುಕು ಹಾಕುವಾಗ ಈ ವರ್ಷ ಅಂದರೆ 2024ನೇ ಇಸವಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಮುಖ್ಯವಾಗಿ 1924ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಚಾರಿತ್ರಿಕ ಬೆಳಗಾವಿ ಅಧಿವೇಶನ ನಡೆದು ನೂರು ವರ್ಷಗಳಾಗಿವೆ. ಅದೇ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1924ರಲ್ಲಿ “ಬಹಿಷ್ಕೃತ ಹಿತಕಾರಿಣಿ ಸಭಾ” ಎನ್ನುವ ಮಹತ್ವದ ಸಂಘಟನೆಯನ್ನು ಸ್ಥಾಪಿಸಿದ ಚಾರಿತ್ರಿಕ ಘಟನೆಗೂ ಈ ವರ್ಷ ನೂರು ತುಂಬುತ್ತದೆ.
  4. ಬೆಳಗಾವಿ ಅಧಿವೇಶನ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಗಾಂಧೀಜಿ ಈ ಅಧಿವೇಶನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ವಿವಿಧ ಭಾಷೆಳನ್ನಾಡುವ ಜನರ ನಡುವಣ ಸೌಹಾರ್ದಯುತ ಸಂಬಂಧಕ್ಕೆ ಒತ್ತು ನೀಡಿ ಮಾತನಾಡಿದ್ದರು. ಸಮಾಜದ ದಮನಿತ ವರ್ಗಗಳ ಅಭ್ಯುದಯಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ದ್ವೇಷ, ಅಸಹನೆಗಳಲ್ಲಿ ಜಗತ್ತು ಕುದಿಯುತ್ತಿರುವ ವಿಷಕಾರಿಯಾದ ಈ ಸಂದರ್ಭದಲ್ಲಿ ಗಾಂಧೀಜಿಯವರ ಮಾತುಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವವಿದೆ.
  5. ಬಾಬಾಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ “ಬಹಿಷ್ಕøತ ಹಿತಕಾರಿಣಿ ಸಭಾ” ದಮನಿತ ವರ್ಗಗಳ ಪರವಾದ ಅವರ ಹೋರಾಟದ ಒಂದು ಪ್ರಮುಖ ಘಟನೆ. ಈ ಸಂಸ್ಥೆಯ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತ ವರ್ಗಗಳಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಅರಿವು ಮೂಡಿಸಲು ಶ್ರಮಿಸಿದರು. ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ತತ್ವದ ಸಾಕ್ಷಾತ್ಕಾರಕ್ಕಾಗಿ ಅಂಬೇಡ್ಕರ್ ಅವರು “ಬಹಿಷ್ಕೃತ ಹಿತಕಾರಿಣಿ ಸಭಾ”ದ ಮೂಲಕ ಶ್ರಮಿಸಿದರು.
  6. ಬೆಳಗಾವಿ ಅಧಿವೇಶನ ಮತ್ತು “ಬಹಿಷ್ಕøತ ಹಿತಕಾರಿಣಿ ಸಭಾ’’ದ ಸ್ಥಾಪನೆಯ ಶತಮಾನೋತ್ಸವಗಳನ್ನು ಸ್ಮರಣೀಯವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಈ ವರ್ಷ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.
  7. ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳೆಂದು ಕರೆಸಿಕೊಳ್ಳುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಅಂದಿನ ಪ್ರಧಾನಮಂತ್ರಿ ಡಾ: ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371ಜೆ ಸೇರ್ಪಡೆ ಮಾಡುವ ಮೂಲಕ ಆ ಭಾಗಕ್ಕೆ ಭರವಸೆ ತುಂಬಿದರು. ಈ 10 ವರ್ಷಗಳಲ್ಲಿ ಉದ್ಯೋಗ, ಶಿಕ್ಷಣ, ಮೂಲಭೂತ ಸೌಕರ್ಯ, ನೀರಾವರಿ, ಕೈಗಾರಿಕೆ ಅಭಿವೃದ್ಧಿ ಮುಂತಾದವುಗಳ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಾಗಿದೆ. 10 ವರ್ಷಗಳ ಹಿಂದೆ ಪ್ರಾರಂಭವಾದ ಈ ಭರವಸೆಯ ಬೆಳಕಿಗೆ ಈಗ ದಶಮಾನೋತ್ಸವದ ಸಂದರ್ಭ. ಆದ್ದರಿಂದ ಸರ್ಕಾರವು ದಶಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
  8. ಅನ್ನ, ನೀರು ಮತ್ತು ಪ್ರಾಣಕ್ಕಿಂತ ಸ್ವಾತಂತ್ರ್ಯ ಎನ್ನುವುದು ಬಹಳ ದೊಡ್ಡದು ಎಂದು ಹೋರಾಡಿದ ಎಲ್ಲಾ ಮಹನೀಯರು ಕಂಡ ಕನಸಿನ ಹಾದಿಯಲ್ಲಿ ದೇಶವನ್ನು ಮುನ್ನಡೆಸುವುದಕ್ಕಾಗಿ ಮತ್ತು ಅಭಿವೃದ್ಧಿ ಸಾಧಿಸುವುದಕ್ಕಾಗಿ ಕಳೆದ 77 ವರ್ಷಗಳಲ್ಲಿ ಕರ್ನಾಟಕ ರಾಜ್ಯವು ಅತ್ಯಂತ ಮಹತ್ತರವಾದ ಕೊಡುಗೆಗಳನ್ನು ನೀಡಿದೆ. ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಭ್ರಾತೃತ್ವದ ಆಧಾರದಲ್ಲಿ ದೇಶವನ್ನು ಕಟ್ಟುವ ಸ್ವಾತಂತ್ರ್ಯ ಚಳವಳಿಗಾರರ ಆಶಯವನ್ನು ನಮ್ಮ ಸಂವಿಧಾನ ಪ್ರತಿಪಾದಿಸಿದೆ. ಕರ್ನಾಟಕದ ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ, ದಾಸೋಹ ಮತ್ತು ಸಮ-ಸಮಾಜ ನಿರ್ಮಾಣದ ತತ್ವಗಳು ಸಂವಿಧಾನದ ಮೂಲಭೂತ ಆಶಯಗಳಿಗೆ ಸಮೀಪವಾಗಿವೆ.
  9. ಈ ಮೌಲ್ಯಗಳನ್ನು ಆಧಾರವಾಗಿರಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗೆ ವಿಶೇಷವಾದ ಆದ್ಯತೆ ನೀಡಿ ರಾಜ್ಯದ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವ ಮತ್ತು ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಕಾರ್ಯವನ್ನು ಕರ್ನಾಟಕದಲ್ಲಿ ನಾವು ಮಾಡುತ್ತಿದ್ದೇವೆ. ಇದು ಅಭಿವೃದ್ಧಿಯ ಕರ್ನಾಟಕ ಮಾದರಿ.

2023 ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಕಳೆದ ಹದಿನೈದು ತಿಂಗಳುಗಳ ಅವಧಿಯಲ್ಲಿ ಈ ನಿಟ್ಟಿನಲ್ಲಿ ಸ್ಪಷ್ಟ ಹೆಜ್ಜೆಗಳನ್ನು ಇರಿಸಿದೆ.

  1. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸಮಸ್ತ ಜನರ ಬದುಕಿಗೆ ಒಂದು ಆರ್ಥಿಕ ಭದ್ರತೆಯನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದು ಹೋಗಿರುವ ಜನರ ಬದುಕಿಗೆ ಈ ಯೋಜನೆಗಳು ನೆಮ್ಮದಿ ತಂದಿವೆ. ಈ ಯೋಜನೆಗಳ ಮೂಲಕ ಸಂಪತ್ತಿನ ಮರುಹಂಚಿಕೆಗೆ ಒತ್ತು ನೀಡುತ್ತಲೇ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರವಾದ ರೀತಿಯಲ್ಲಿ ಹೆಚ್ಚಿಸಲು ಕೂಡಾ ಅಷ್ಟೇ ಬದ್ಧತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವುದರ ಜೊತೆಜೊತೆಗೆ ಈ ನೆಲದ ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಮುಂದುವರಿಸಿ ಕರ್ನಾಟಕವನ್ನು ನಿಜ ಅರ್ಥದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ರೂಪಿಸಲು ನಾವು ಕಾರ್ಯತತ್ಪರರಾಗಿದ್ದೇವೆ.
  2. ನಮ್ಮ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದಾಗಿ ಮಾಸಿಕ ಸರಾಸರಿ 4,000-5,000 ರೂ.ಗಳಷ್ಟು ಪ್ರತಿ ಫಲಾನುಭವಿ ಕುಟುಂಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಭಿಸುತ್ತಿದೆ. ಇದು ಹಲವು ಕಾರಣಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೇರ ಆರ್ಥಿಕ ನೆರವು ನೀಡುವ Universal Basic Income ಪರಿಕಲ್ಪನೆ. ಮುಂದುವರಿದ ರಾಷ್ಟ್ರಗಳಲ್ಲಿ ಆರ್ಥಿಕವಾಗಿ ಅಶಕ್ತ ವರ್ಗಗಳಿಗೆ ನೆರವಾಗಲು ಜಾರಿಗೊಳಿಸಲಾಗುತ್ತಿರುವ ಇಂತಹ ಯೋಜನೆಯೊಂದನ್ನು ಅತೀ ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸುತ್ತಿರುವ ರಾಜ್ಯ ಕರ್ನಾಟಕ. ಈ ಬಗ್ಗೆ ನಮಗೆ ಹೆಮ್ಮೆ ಇದೆ.
  3. ಈ ಯೋಜನೆಗಳು ಮುಂದುವರಿಯಲಿವೆ. ಮಾತ್ರವಲ್ಲ,
    ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ತೋರಿಸುವ ಮೂಲಕ ನಾವು ಉತ್ತರಿಸಲಿದ್ದೇವೆ.
    ಈ ಯೋಜನೆಗಳ ವ್ಯಾಪ್ತಿಯೊಳಗೆ ಹೊಸ ಆವಿಷ್ಕಾರಗಳನ್ನು ನಡೆಸಿ ಅವುಗಳು ಫಲಾನುಭವಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲು ನಾವು ಉದ್ಯುಕ್ತರಾಗಿದ್ದೇವೆ. ಉದಾಹರಣೆಗೆ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಈಗ ಮಾಸಿಕ 2,000 ರೂ. ನೆರವು ನೀಡುತ್ತಿದ್ದೇವೆ. ಈ ಫಲಾನುಭವಿಗಳನ್ನು ಸ್ತ್ರೀ-ಶಕ್ತಿ ಮಹಿಳಾ ಸ್ವಸಹಾಯ ಸಂಘಗಳಾಗಿ ಸಂಘಟಿಸುವ ಮೂಲಕ ಅವರಿಗೆ ವಿವಿಧ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಒದಗಿಸಿ ವರಮಾನ ತರುವ ವಿವಿಧ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಯೋಚನೆ ಇದೆ. ಅದೇ ರೀತಿ ಯುವನಿಧಿಯ ಫಲಾನುಭವಿಗಳಿಗೆ ಕೌಶಾಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಕ್ರಮ ವಹಿಸಲಾಗುತ್ತಿದೆ.
  4. “ಶಕ್ತಿ ಯೋಜನೆ”ಯಡಿ ಮಹಿಳೆಯರು 270 ಕೋಟಿ ಟ್ರಿಪ್ ಉಚಿತ ಪ್ರಯಾಣ ಸೌಲಭ್ಯ ಪಡೆಯುವ ಮೂಲಕ 6,541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದಾರೆ. ‘ಗೃಹಲಕ್ಷ್ಮಿ ಯೋಜನೆ’ಯಡಿ 1.20 ಕೋಟಿ ಮಹಿಳೆಯರಿಗೆ ಈ ವರೆಗೆ 25,259 ಕೋಟಿ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ.

‘ಅನ್ನಭಾಗ್ಯ ಯೋಜನೆ’ಯಡಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ವರೆಗೆ
1.16 ಕೋಟಿ ಪಡಿತರ ಚೀಟಿಗಳ 4.08 ಕೋಟಿ ಫಲಾನುಭವಿಗಳಿಗೆ 7,763 ಕೋಟಿ ರೂ. ನೆರವನ್ನು ನೇರವಾಗಿ ವರ್ಗಾಯಿಸಲಾಗಿದೆ. ಉಚಿತವಾಗಿ 200 ಯೂನಿಟ್ ವರೆಗೆ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯ ಸೌಲಭ್ಯವನ್ನು 1.60 ಕೋಟಿ ಕುಟುಂಬಗಳು ಪಡೆದುಕೊಳ್ಳುತ್ತಿವೆ. ಈ ಯೋಜನೆಗಾಗಿ 8,844 ಕೋಟಿ ರೂ. ವೆಚ್ಚ ಮಾಡಲಾಗಿದೆ. ‘ಯುವನಿಧಿ ಯೋಜನೆ’ಯಡಿ 1.31 ಲಕ್ಷ ಪದವಿ/ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ ನೆರವು ನೀಡಲಾಗುತ್ತಿದ್ದು ಇದಕ್ಕಾಗಿ 91 ಕೋಟಿ ರೂ.ಗಳನ್ನು ಭರಿಸಲಾಗಿದೆ.

  1. ನಮ್ಮ ಸರಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ. ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ಒದಗಿಸುವ ವಿವಿಧ ಮಾಸಿಕ ಪಿಂಚಣಿಗಳಡಿ 78.64 ಲಕ್ಷ ಫಲಾನುಭವಿಗಳು ನೇರ ನಗದು ವರ್ಗಾವಣೆಯ ರೂಪದಲ್ಲಿ ನೆರವು ಪಡೆಯುತ್ತಿದ್ದಾರೆ. ಮೈತ್ರಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ ಪಿಂಚಣಿ ಮೊತ್ತವನ್ನು 800 ರೂ. ಗಳಿಂದ 1,200 ರೂ.ಗಳಿಗೆ ಹಾಗೂ ಮಾಜಿ ದೇವದಾಸಿಯರಿಗೆ ನೀಡಲಾಗುತ್ತಿರುವ ಮಾಸಾಶನವನ್ನು 1,500 ರೂ. ಗಳಿಂದ 2,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಮೊದಲಾದ ಸಾಮಾಜಿಕ ಭದ್ರತೆ ಯೋಜನೆಗಳಡಿ 13,027 ಕೋಟಿ ರೂ. ವೆಚ್ಚ ಮಾಡಲಾಗಿದೆ.
  2. ಇದರ ಜೊತೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲು ಉತ್ಪಾದಕರ ಖಾತೆಗಳಿಗೆ 1,822.28 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ಡಿ.ಬಿ.ಟಿ. ಮೂಲಕ ವರ್ಗಾವಣೆ ಮಾಡಲಾಗಿದೆ. ಸಹಕಾರ ಸಂಸ್ಥೆಗಳಿಂದ ನೀಡಲಾದ ಬೆಳೆಸಾಲ, ಸ್ವ-ಸಹಾಯ ಸಂಘಗಳ ಸಾಲ ಹಾಗೂ ಮತ್ತಿತರ ಸಾಲಗಳಿಗೆ 1,642 ಕೋಟಿ ರೂ. ಬಡ್ಡಿ ಸಹಾಯಧನ ನೀಡಲಾಗಿದೆ ಹಾಗೂ 20,029 ಕೋಟಿ ರೂ. ವೆಚ್ಚ ಭರಿಸಿ ನೀರಾವರಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗಿದೆ.
  3. ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಹೆಚ್ಚುವರಿಯಾಗಿ 1,500 ರೂ. ಪ್ರೋತ್ಸಾಹಧನ ಘೋಷಿಸಿದ್ದಲ್ಲದೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರದ ನಾಫೆಡ್‍ನಿಂದ ಬರಬೇಕಾದ ಪೂರ್ಣ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರ ಘೋಷಿಸಿದ ನೆರವೂ ಸೇರಿದಂತೆ ಒಟ್ಟು 870 ಕೋಟಿ ರೂ. ಗಳನ್ನು ನೇರವಾಗಿ 58,893 ರೈತರ ಖಾತೆಗಳಿಗೆ ವರ್ಗಾಯಿಸಿದೆ.
  4. ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮೋಟಾರು ಮತ್ತು ಇತರ ಸಂಬಂಧಿತ ಕಾರ್ಮಿಕರಿಗೆ ಹಾಗೂ ಸಿನೆಮಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಕಲ್ಯಾಣಕ್ಕೆ ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಇದರೊಂದಿಗೆ ಗಿಗ್ ಕಾರ್ಮಿಕರ ವಿಮಾ ಸೌಲಭ್ಯ ಯೋಜನೆ ಮತ್ತು ಪತ್ರಿಕಾ ವಿತರಕರಿಗೆ ಅಪಘಾತ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
  5. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭ್ಯುದಯಕ್ಕಾಗಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ. ಕಾಯ್ದೆ 2013ರ ಸೆಕ್ಷನ್ 7(ಡಿ) ಯನ್ನು ಕೈ ಬಿಡುವ ಮೂಲಕ ಅನುದಾನ ಪರಿಶಿಷ್ಟ ಸಮುದಾಯಗಳಿಗಾಗಿಯೇ ಬಳಕೆಯಾಗುವುದನ್ನು ಖಾತರಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರಿಗೆ ಒಂದು ಕೋಟಿ ರೂ. ವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ, ಸರ್ಕಾರಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮೀಸಲಾತಿ, ಮಹಿಳಾ ಉದ್ಯಮಿಗಳಿಗೆ ಕೆ.ಎಸ್.ಎಫ್.ಸಿಯಲ್ಲಿ ಶೇ. 4ರ ಬಡ್ಡಿ ದರದಲ್ಲಿ ನೀಡುವ ಸಾಲದ ಮಿತಿ 5 ಕೋಟಿ ರೂ.ಗಳಿಗೆ ಹೆಚ್ಚಳ, ಮುಂತಾದ ಉಪಕ್ರಮಗಳು ದುರ್ಬಲ ವರ್ಗಗಳ ಕುರಿತ ನಮ್ಮ ಕಾಳಜಿಗೆ ಸಾಕ್ಷಿಯಾಗಿವೆ.
  6. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಡಿ ಹೋಬಳಿಗೊಂದು ವಸತಿ ಶಾಲೆ ಪ್ರಾರಂಭಿಸುವ ಗುರಿಯನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 20 ಹೊಸ ವಸತಿ ಶಾಲೆಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಪೂರಕವಾಗಿ ಹೊಸದಾಗಿ ಒಟ್ಟು 295 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ.
  7. ಪರಿಶಿಷ್ಟ ಪಂಗಡದ ಅತಿ ಹಿಂದುಳಿದ 23 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಶೇ. 20 ರಷ್ಟು ಮೀಸಲಾತಿ ಹಾಗೂ ನೇರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯಾಬಲವನ್ನು 25 ರಿಂದ 40 ಕ್ಕೆ ಹೆಚ್ಚಿಸಲಾಗಿದೆ.
  8. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಬಾಡಿಗೆ ಕಟ್ಟಡದಲ್ಲಿರುವ 30 ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
  9. ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗಾಗಿ 100 ಹೊಸ ಮೌಲಾನಾ ಆಜಾದ್ ಶಾಲೆಗಳ ಪ್ರಾರಂಭ ಹಾಗೂ 50 ಸಂಖ್ಯಾ ಬಲವುಳ್ಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಂತ ಕಟ್ಟಡ ಹೊಂದಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ.
  10. ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಟ್ಟೆ ಅಥವಾ ಚಿಕ್ಕಿ ಮತ್ತು ಬಾಳೆಹಣ್ಣಿನ ವಿತರಣೆಯನ್ನು ವಾರದಲ್ಲಿ ಎರಡು ದಿನಗಳಿಂದ ಆರು ದಿನಗಳಿಗೆ ಹೆಚ್ಚಿಸಲಾಗಿದೆ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ ಇವರ ಸಹಭಾಗಿತ್ವದಲ್ಲಿ ವಾರದಲ್ಲಿ 3 ದಿನ ರಾಗಿಮಾಲ್ಟನ್ನು ನೀಡಲಾಗುತ್ತಿದೆ.
  11. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 11,494 ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಬಾಕಿ ಇರುವ ಹುದ್ದೆಗಳನ್ನೂ ಹಂತ ಹಂತವಾಗಿ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭಿಸುತ್ತೇವೆ.
  12. ಮುಕ್ತ, ನಿರ್ಭೀತ ಸಮಾಜದ ನಿರ್ಮಾಣ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ಉನ್ನತ ಶಿಕ್ಷಣ ವ್ಯವಸ್ಥೆ ರೂಪಿಸಲು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ರಚಿಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಆಧಾರದಲ್ಲಿ ಪದವಿ ಶಿಕ್ಷಣದ ಅವಧಿ ಹಾಗೂ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ.
  13. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಎರಡು ಮುಂಗಾರು ಹಂಗಾಮುಗಳಲ್ಲಿ ರಾಜ್ಯ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದೆ. ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾದರೆ, ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ. ಕೇಂದ್ರ ಸರ್ಕಾರವು ಬರ ಪರಿಹಾರದ ಮೊತ್ತವನ್ನು ತಡವಾಗಿ ನೀಡಿದರೂ, ರಾಜ್ಯದಲ್ಲಿ ಬರದಿಂದಾಗಿ ಜನರಿಗೆ ಹೆಚ್ಚಿನ ಅನಾನುಕೂಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಯಿತು. ಎನ್‍ಡಿಆರ್‍ಎಫ್ ಅಡಿ ಪರಿಹಾರ ಬಿಡುಗಡೆಯಾಗುವ ಮೊದಲೇ ರಾಜ್ಯ ಸರ್ಕಾರ ಬರಗಾಲದಿಂದ ಬಾಧಿತರಾದ ಪ್ರತಿ ರೈತರಿಗೆ 2,000 ರೂ. ವರೆಗೆ ಒಟ್ಟು 636.45 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ವಿತರಿಸಿತು. ಒಟ್ಟಾರೆಯಾಗಿ ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ 3454.66 ಕೋಟಿ ರೂ. ಬೆಳೆಹಾನಿ ಪರಿಹಾರವನ್ನು ಎನ್.ಡಿ.ಆರ್.ಎಫ್. ಅಡಿ ವಿತರಿಸಲಾಗಿದೆ. ಇದರೊಂದಿಗೆ 17.88 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಒಟ್ಟು 512.83 ಕೋಟಿ ರೂ. ಗಳಷ್ಟು ಜೀವನೋಪಾಯ ಪರಿಹಾರ ವಿತರಿಸಲಾಗಿದೆ.
  14. ಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾನು ಸ್ವತಃ ಭೇಟಿ ನೀಡಿದ್ದೇನೆ. ನಮ್ಮ ಸಚಿವರುಗಳೂ ಜಿಲ್ಲೆಗಳಲ್ಲಿದ್ದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೀವಹಾನಿ, ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ. ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮ ವಹಿಸುತ್ತಿದ್ದೇವೆ.
  15. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸುವುದು ಅತಿ ಅಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭೂ-ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯು ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಡುವ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿನ 250 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂ-ಕುಸಿತ ಸಂಭವಿಸಬಹುದಾದ 1,351 ಗ್ರಾಮಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಭೂ-ಕುಸಿತ ತಡೆಗಟ್ಟಲು ಭೂ-ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಮತ್ತು National Institute of Rock Mechanics (NIRM) ಸಹಯೋಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಉಪಶಮನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
  16. ಮಾನವ-ವನ್ಯ ಪ್ರಾಣಿ ಸಂಘರ್ಷ ನಾವು ಎದುರಿಸುವ ಪ್ರಮುಖ ಸವಾಲಾಗಿದೆ. ಇದನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 120 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ 7 ಆನೆ ಟಾಸ್ಕ್ ಫೋರ್ಸ್ ಹಾಗೂ 2 ಚಿರತೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇತ್ತೀಚೆಗೆ ಮಾನವ-ಆನೆ ಸಂಘರ್ಷ ತಡೆಗಟ್ಟುವ ಕುರಿತು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
  17. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿವಿಧ ವಸತಿ ಯೋಜನೆಗಳಡಿ ಒಟ್ಟು 3,690 ಕೋಟಿ ರೂ. ವೆಚ್ಚದಲ್ಲಿ 2.38 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ.
  18. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಫಲಾನುಭವಿಗಳಿಗೆ ಆರ್ಥಿಕವಾಗಿ ಹೊರೆಯಾಗಿದ್ದ ವಂತಿಗೆಯಲ್ಲಿ ತಲಾ 4 ಲಕ್ಷ ರೂ.ಗಳಂತೆ ರಾಜ್ಯ ಸರ್ಕಾರವೇ ಭರಿಸಲು ತೀರ್ಮಾನಿಸಿ, ಅರ್ಧಕ್ಕೆ ನಿಂತಿದ್ದ ಮನೆಗಳ ನಿರ್ಮಾಣ ಮತ್ತೆ ಪ್ರಾರಂಭವಾಗಿದೆ. ಈಗಾಗಲೇ 36,781 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ಬಡ ಜನರ ಸ್ವಂತ ಸೂರಿನ ಕನಸನ್ನು ಸಾಕಾರಗೊಳಿಸಿದ್ದೇವೆ. ಹಾಗೆಯೇ ಇನ್ನುಳಿದ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದ್ದೇವೆ.
  19. ಜನರಿಗೆ ಸರಳವಾಗಿ, ಪಾರದರ್ಶಕವಾಗಿ ನಾಗರಿಕ ಸೇವೆಗಳನ್ನು ದೊರಕಿಸಲು ನಮ್ಮ ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪಹಣಿಗೆ ಆಧಾರ್ ಜೋಡಣೆ, ಆಟೋಮ್ಯುಟೇಷನ್ ಸೌಲಭ್ಯ, ಬಗರ್‍ಹುಕುಂ ಸಾಗುವಳಿ ತಂತ್ರಾಂಶ, ಕಂದಾಯ ದಾಖಲೆಗಳ ಡಿಜಿಟಲೀಕರಣ, ನಗರಾಸ್ತಿ ಮಾಲೀಕತ್ವದ ಹಕ್ಕು ದಾಖಲೆಗಳ ಯೋಜನೆ ಮೊದಲಾದವುಗಳು ರೈತರ, ಜನ ಸಾಮಾನ್ಯರ ಸಮಯ ಹಾಗೂ ಶ್ರಮ ಉಳಿತಾಯ ಮಾಡುವತ್ತ ಮಹತ್ವದ ಕ್ರಮಗಳಾಗಿವೆ.
  20. ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮ ಪಂಚಾಯಿತಿಯಲ್ಲಿಯೇ ಸಕಾಲದಲ್ಲಿ ಜನನ ಮರಣ ನೋಂದಣಿ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ 5,950 ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
  21. ನೋಂದಣಿ ಮತ್ತು ಮುದ್ರಾಂಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸೆಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
  22. ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ತಾಯಂದಿರ ಅನುಕೂಲಕ್ಕಾಗಿ 4,000 ಪಂಚಾಯಿತಿಗಳಲ್ಲಿ ‘ಕೂಸಿನ ಮನೆʼ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
  23. ಈಗಾಗಲೇ ಹೇಳಿದಂತೆ ಕಲ್ಯಾಣ ಯೋಜನೆಗಳ ಜೊತೆಜೊತೆಗೆ ಅರ್ಥಿಕ ಅಭಿವೃದ್ಧಿ ದರದ ವೇಗ ಹೆಚ್ಚಿಸಲು ಉದ್ಯಮ, ಕೃಷಿ, ಮೂಲಭೂತ ಸೌಕರ್ಯ ಮುಂತಾದ ಕ್ಷೇತ್ರಗಳಲ್ಲಿ ಬಹುಮುಖಿ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯೆ ನಮ್ಮ ಗುರಿ ಮತ್ತು ಧ್ಯೇಯವಾಗಿದೆ.
  24. 2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವು 54,427 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವುದರೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
  25. 2023-24ನೇ ಸಾಲಿನಲ್ಲಿ ವಿವಿಧ ಉದ್ಯಮ ಸಂಸ್ಥೆಗಳೊಂದಿಗೆ 13 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇವುಗಳಡಿಯಲ್ಲಿ ರಾಜ್ಯದಲ್ಲಿ 42,915 ಕೋಟಿ ರೂ. ಹೂಡಿಕೆಯಾಗಿ ಸುಮಾರು 22,600 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
  26. 2023-24ನೇ ಸಾಲಿನಲ್ಲಿ ರಾಜ್ಯ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 591 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ಇವುಗಳಿಂದ ಸುಮಾರು 84,232 ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, 1,56,986 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.
  27. 2023-24ನೇ ಸಾಲಿನಲ್ಲಿ ರಾಜ್ಯವು 1,66,545 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ರಫ್ತು ಮಾಡಿ ಮೊದಲ ಸ್ಥಾನದಲ್ಲಿದೆ. ಕಳೆದ ಸಾಲಿಗೆ ಹೋಲಿಸಿದರೆ ರಾಜ್ಯವು ಶೇ. 5.20 ರಷ್ಟು ಪ್ರಗತಿಯನ್ನು ಸಾಧಿಸಿದೆ.
  28. ರಾಜ್ಯಕ್ಕೆ, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸುವ ಸಂಬಂಧ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ – Invest Karnataka 2025 ರನ್ನು ಫೆಬ್ರವರಿ 2025ರಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ದೇಶ-ವಿದೇಶಗಳಲ್ಲಿ ರೋಡ್ ಶೋಗಳನ್ನು ನಡೆಸಿ ಹೂಡಿಕೆದಾರರನ್ನು ಆಹ್ವಾನಿಸಲಾಗುವುದು.
  29. ರಾಜ್ಯ ಸರ್ಕಾರವು ಸಂಪೂರ್ಣ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ 50,000 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ಹಾಗೂ ಸರಿಸುಮಾರು 1,00,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ Karnataka Clean Mobility Policy 2024-29 ಕರಡು ನೀತಿಯನ್ನು ಸಿದ್ಧಪಡಿಸಿದ್ದು, ಅನುಮೋದನೆಯ ಅಂತಿಮ ಹಂತದಲ್ಲಿರುತ್ತದೆ.
  30. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿ ನವೋದ್ಯಮ ಯೋಜನೆಯಡಿ 40 ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ.
  31. ಐಟಿ-ಬಿಟಿ ವಲಯದಲ್ಲಿ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿಯನ್ನು ಒದಗಿಸಲು ಕೌಶಲ್ಯ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಉದ್ಯಮಗಳ ಬೇಡಿಕೆಗೆ ಅನುಗುಣವಾದ ಕೋರ್ಸ್‍ಗಳ ವಿವರವಾದ ಯೋಜನೆ ಕುರಿತು ವರದಿ ನೀಡಿದ್ದು, ಈ ಕೌಶಲ್ಯಗಳ ತರಬೇತಿಯನ್ನು ನೀಡಲು ಕ್ರಮ ವಹಿಸಲಾಗುವುದು.
  32. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಇರುವ ಹುದ್ದೆ ಭರ್ತಿಗೆ ಒತ್ತು ನೀಡಲಾಗಿದ್ದು, 15,428 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆಯಾಗಿ ಬಾಕಿ ಉಳಿದಿದ್ದ 670 ಹುದ್ದೆಗಳೂ ಸೇರಿದಂತೆ ಒಟ್ಟು 11,512 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.
  33. ಉತ್ತಮ ಮೂಲಸೌಕರ್ಯಗಳು, ಸಾರಿಗೆ ಸಂಪರ್ಕ ಸೌಲಭ್ಯಗಳು ಆರ್ಥಿಕತೆಯ ಬೆಳವಣಿಗೆಗೆ ವೇಗವರ್ಧಕವಿದ್ದಂತೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 1,917 ಕಿ.ಮೀ. ರಾಜ್ಯ ಹೆದ್ದಾರಿ, 2,502 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಮತ್ತು 150 ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು. ಎಸ್.ಹೆಚ್.ಡಿ.ಪಿ. ಹಂತ-5 ರಡಿಯಲ್ಲಿ ಒಟ್ಟು 9,000 ಕೋಟಿ ರೂ. ಮೊತ್ತದಲ್ಲಿ 2,500 ಕಿ.ಮೀ ಹೆದ್ದಾರಿಗಳ ಅಭಿವೃದ್ಧಿಯನ್ನು 2 ಘಟ್ಟಗಳಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಘಟ್ಟ-1 ರ 4,000 ಕೋಟಿ ರೂ. ಮೊತ್ತದಲ್ಲಿ 1,467 ಕಿ.ಮೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
  34. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಪಿ.ಎಂ.ಜಿ.ಎಸ್.ವೈ, ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳಡಿ ಒಟ್ಟು 803.32 ಕಿ.ಮೀ. ಉದ್ದದ ರಸ್ತೆಯನ್ನು 463.11 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಯಡಿ ಒಟ್ಟು 8,260 ಕಿಮೀ ಉದ್ದದ ರಸ್ತೆಯನ್ನು 6,190 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
  35. ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿ ಪಡಿಸಲು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ. ನಗರದಲ್ಲಿ ವಿನೂತನ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾದರಿ ಅಡಿಯಲ್ಲಿ (Intergrated Financial Model) ಕನಿಷ್ಠ 48,686 ಕೋಟಿ ರೂ. ವೆಚ್ಚದಲ್ಲಿ ದೀರ್ಘಾವಧಿಯ ಮೂಲಭೂತ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.
  36. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯ ಉದ್ದೇಶದಿಂದ ಫೆರಿಫೆರಲ್ ರಿಂಗ್ ರೋಡ್ ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ದೃಢ ಸಂಕಲ್ಪ ಮಾಡಿದೆ.
  37. ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಬಾರಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ ಎತ್ತಿನಹೊಳೆ ಯೋಜನೆಯಡಿ 855.02 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮತ್ತು ಭೂ-ಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ವಿಭಾಗ ಕಚೇರಿ ಮತ್ತು ಉಪವಿಭಾಗ ಕಚೇರಿ ಸ್ಥಳಾಂತರ ಮಾಡಲಾಗಿದೆ. ಕೇಂದ್ರ ರಾಜ್ಯ ಸಂಬಂಧದ ಸವಾಲುಗಳು
  38. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಜನಕಲ್ಯಾಣ ಕಾರ್ಯಗಳನ್ನು ಅನುಷ್ಠಾನಗೊಳಿಸುವುದು ರಾಜ್ಯಗಳ ಜವಾಬ್ದಾರಿಯಾಗಿದ್ದು, ಅವುಗಳಿಗೆ ಪೂರಕವಾಗಿ ಸಂಪನ್ಮೂಲ ಒದಗಿಸುವುದು ಕೇಂದ್ರದ ಹೊಣೆಗಾರಿಕೆ.
  39. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ, ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸಲಾಗುತ್ತಿದೆ. ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಪರಿಹಾರದ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿರುವುದು ಜನಹಿತಕ್ಕೆ ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರವು, ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ರಾಜ್ಯಗಳ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸಮಸ್ತ ನಾಡ ಬಂಧುಗಳ ಪರವಾಗಿ ಒತ್ತಾಯಿಸುತ್ತೇನೆ.
  40. ಅಂತೆಯೇ ಜನತೆಯ ತೀರ್ಪನ್ನು ಧಿಕ್ಕರಿಸಿ ನಡೆಸುವ ಹಿಂಬಾಗಿಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾಡಿನ ಮಹಾ ಜನತೆ ನೀಡಿದ ತೀರ್ಪನ್ನು ಗೌರವಿಸಿ, ಸಂವಿಧಾನದ ಆಶಯಗಳ ಪ್ರಕಾರ ವಿರೋಧಪಕ್ಷಗಳು ಜವಾಬ್ದಾರಿಯುತವಾಗಿ ನಡೆಯಬೇಕೆಂಬುದನ್ನು ಎಲ್ಲರೂ ನಿರೀಕ್ಷಿಸುತ್ತಾರೆ.
  41. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿರುವ ಮತದಾರರು, ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.
  42. ದೇಶದ ಚಲನಶೀಲ, ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ನಮ್ಮ ಸಂವಿಧಾನವೇ ಶ್ರೀರಕ್ಷೆಯಾಗಿದೆ. ದೇಶದಲ್ಲಿ ನಮ್ಮ ಪ್ರಜಾಪ್ರಭುತ್ವವು ಕ್ರಿಯಾಶೀಲವಾಗಲು, ಜನ ಜೀವನದ ಸಹಜ ಮತ್ತು ಅವಿಭಾಜ್ಯ ಭಾಗವಾಗಿರಲು ಎದುರಾಗಬಹುದಾದ ಅಡ್ಡಿ-ಆತಂಕಗಳ ಕುರಿತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದೇ ಮುನ್ನೆಚ್ಚರಿಕೆ ನೀಡಿದ್ದರು. ಮೊದಲನೆಯದಾಗಿ, ಜಾತಿ-ಮತದ ಆಧಾರದ ವಿಭಜನೆಯ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು. ಎರಡನೆಯದಾಗಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಆಶಯಗಳನ್ನು ಬುಡಮೇಲು ಮಾಡುವ ಮನಸ್ಥಿತಿಯ ವ್ಯಕ್ತಿಗಳನ್ನು ಅಧಿಕಾರದಿಂದ ಮುಲಾಜಿಲ್ಲದೆ ದೂರ ಇಡಬೇಕು. ಅಂತಿಮವಾಗಿ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದ ರಾಜಕೀಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದರು.
  43. ನಾಡಿನ ಸಮಸ್ತ ಜನರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮೂಲ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿರುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಮತ್ತು ಹುತಾತ್ಮರಾದ ಅವರ ಕ್ರಾಂತಿಕಾರಿ ಸ್ನೇಹಿತರು, ನಮಗೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಡಾ: ಬಿ.ಆರ್.ಅಂಬೇಡ್ಕರ್, ವೈಜ್ಞಾನಿಕ ಹಾಗೂ ಜ್ಯಾತ್ಯಾತೀತ ತಳಹದಿಯಲ್ಲಿ ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಜವಾಹರ್‍ಲಾಲ್ ನೆಹರು ಮುಂತಾದ ಮಹನೀಯರನ್ನು ನಾವು ಸ್ಮರಿಸಬೇಕು ಹಾಗೂ ಅವರ ಆಶಯಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ನೆರೆಹೊರೆಯ ದೇಶಗಳಲ್ಲಿ ತಲೆದೋರಿರುವ ಪ್ರಕ್ಷುಬ್ಧ ಪರಿಸ್ಥಿತಿ ಇಲ್ಲಿಯೂ ಎದುರಾಗಿ ಬಿಡಬಹುದು ಎಂಬ ಎಚ್ಚರಿಕೆ ನಮ್ಮೆಲ್ಲರಲ್ಲಿ ಇರಬೇಕಾಗುತ್ತದೆ.
  44. ಎಲ್ಲ ಜಾತಿ ಹಾಗೂ ಮತಗಳ ಜನರು ಒಟ್ಟುಗೂಡಿ ಸ್ವಾತಂತ್ರ್ಯ ಗಳಿಸಿದ್ದೇವೆ. ಎಲ್ಲರೂ ಒಟ್ಟುಗೂಡಿ ಈ ಅಮೂಲ್ಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ.

ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ
ಸ್ವಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಿಲು

  1. ರಾಷ್ಟ್ರಕವಿ ಕುವೆಂಪು ಅವರ ಕವನದ ಈ ಸಾಲುಗಳಂತೆ ಜಾತಿ, ಮತ, ಧರ್ಮ, ಭಾಷೆಯ ಆಧಾರದ ಭೇದ-ಭಾವಗಳನ್ನು ಮರೆತು ದೇಶದ ವೈವಿಧ್ಯತೆಯನ್ನು ಗೌರವಿಸುತ್ತ, ಅಖಂಡತೆಯನ್ನು ಪಾಲಿಸುತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾಗಿದೆ. ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರಕಿಸುವ ಮೂಲಕ ರಾಜಕೀಯ ಸ್ವಾತಂತ್ರ್ಯ ಅಬಾಧಿತವಾಗುವಂತೆ ಶ್ರಮಿಸಬೇಕಾಗಿದೆ. ಈ ಗುರಿ ಸಾಧನೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಸ್ವಸ್ಥ, ಸಮೃದ್ಧ, ಸಮ-ಸಮಾಜದ ನಾಡು ಕಟ್ಟೋಣ ಎಂದು ಆಶಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್ ಜೈ ಕರ್ನಾಟಕ!

More articles

Latest article