ಬೆಂಗಳೂರು: ರಾಮೇಶ್ವರಂ ಹೋಟೆಲ್ ನಲ್ಲಿ ಇಂದು ಮಧ್ಯಾಹ್ನ ನಡೆದ ಬಾಂಬ್ ಸ್ಫೋಟದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಈಗಾಗಲೇ ಏಳೆಂಟು ತಂಡಗಳು ಹೋಟೆಲ್ನಲ್ಲಿ ಬಾಂಬ್ ಇದ್ದ ಬ್ಯಾಗ್ ಇಟ್ಟು ಹೋದ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಅತಿ ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದರು.
ಕೆಫೆಯಲ್ಲಿ ಟೈಮರ್ ಇಟ್ಟು ಬಾಂಬ್ ಬ್ಲಾಸ್ಟ್ ಮಾಡಲಾಗಿದೆ. ಒಬ್ಬ ಯುವಕ ಬಾಂಬ್ ಇದ್ದ ಬ್ಯಾಗ್ ಇಟ್ಟು ಹೋಗಿದ್ದಾನೆ. ಹೋಟೆಲ್ ಸಿಸಿಟಿವಿಯಲ್ಲಿ ಶಂಕಿತನ ಚಹರೆ ಸೆರೆಯಾಗಿದೆ. ಆತನನ್ನು ಬಂಧಿಸಲು ಬೆಂಗಳೂರು ಪೊಲೀಸರು ಸಫಲರಾಗುತ್ತಾರೆ ಎಂದು ಹೇಳಿದರು.
ಬಾಂಬ್ ಇಟ್ಟಿರುವ ವ್ಯಕ್ತಿ ಬಸ್ ನಿಂದ ಬಂದು ಇಳಿದಿದ್ದಾನೆ. ಹೋಟೆಲ್ ಗೆ ಬಂದು ರವೆ ಇಡ್ಲಿ ತಿಂದಿದ್ದಾನೆ.. ಬ್ಯಾಗ್ ಇಟ್ಟು ಹೋದ ಒಂದು ಗಂಟೆಗಳ ಬಳಿಕ ಸ್ಪೋಟ ಸಂಭವಿಸಿದೆ. ತನಿಖೆಗಾಗಿ ಪೊಲೀಸರ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಜೊತೆಗೆ ಸಿಸಿಬಿ ತಂಡವೂ ತನಿಖೆ ನಡೆಸುತ್ತಿದೆ. ತನಿಖೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಏಳೆಂಟು ತಂಡಗಳ ಮೂಲಕ ತನಿಖೆ ಮಾಡಲಾಗುತ್ತಿದೆ. ಬೆಂಗಳೂರಿನ ಜನತೆ ಆತಂಕ ಗೊಳ್ಳುವುದು ಬೇಡ. ಕೆಲವೇ ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯುತ್ತೇವೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯನ್ನು ಗುರುತಿಸಿದ್ದೇವೆ. ಸುಮಾರು 30 ವರ್ಷದ ವ್ಯಕ್ತಿ ಬ್ಯಾಗಿಟ್ಟು ಹೋಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಅವರು ಹೇಳಿದರು.