ಕನ್ನಡ ಪ್ಲಾನೆಟ್ ಸಂವಿಧಾನ ಉಳಿಸುವ ಕೆಲಸ ಮಾಡಲಿದೆ ಎಂಬ ವಿಶ್ವಾಸ ಇದೆ: ನ್ಯಾ ವಿ.ಗೋಪಾಲಗೌಡ ವಿಶ್ವಾಸ

Most read

ಬೆಂಗಳೂರು: ದೇಶ ಉಳಿಸುವ ತುರ್ತು ಕೆಲಸ ಆಗಬೇಕಿದೆ. ಅದಕ್ಕಾಗಿ ಸಂವಿಧಾನ ಉಳಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತಹ ಹೋರಾಟ ನಡೆಸುವ ಅಗತ್ಯವಿದೆ. ಆ ಕೆಲಸವನ್ನು ನಾಡಿನ ಹೆಮ್ಮೆಯ ಬದ್ಧತೆಯುಳ್ಳ ಮಾಧ್ಯಮಗಳಲ್ಲಿ ಒಂದಾದ ಕನ್ನಡ ಪ್ಲಾನೆಟ್ ಮಾಡಲಿದೆ
ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಪ್ಲಾನೆಟ್ ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಭಾರತ ಸಂವಿದಾನ ಸಂಭ್ರಮ-75, ಕನ್ನಡ ಪ್ಲಾನೆಟ್ ಕಾನ್ ಕ್ಲೇವ್- 2025 ಎಂಬ ವಿನೂತನ ಕಾರ್ಯಕ್ರಮದಲ್ಲಿ ಸಂವಿಧಾನ-ಬಹುತ್ವ- ಒಕ್ಕೂಟ ವ್ಯವಸ್ಥೆ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಭಾರತ ಬಹುತ್ವ ಹೊಂದಿರುವ ರಾಷ್ಟ್ರ. ಧರ್ಮ ನಿರಪೇಕ್ಷತೆ ಮತ್ತು ಸಂಸದೀಯ ಪ್ರಜಾಪ್ರಭುತ್ವ ಮಾದರಿಯನ್ನು ಅಳವಡಿಸಿಕೊಂಡಿದ್ದೇವೆ. ಭಾರತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಒಂದು ಭಾಷೆಯ ಪಾರಮ್ಯ ಸ್ಥಾಪನೆ ಅಸಾಧ್ಯ. ಒಂದು ದೇಶ ಒಂದು ಚುನಾವಣೆ ನಿಯಮ ಜಾರಿಗೊಳಿಸುವುದು ಇನ್ನೂ ಅಸಾಧ್ಯ. ಇಂತಹ ಅಪಾಯಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ಸಂವಿಧಾನವನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಅನಿವಾರ್ಯತೆ ಎದುರಾಗಿದ್ದು ಕನ್ನಡ ಪ್ಲಾನೆಟ್ ಈ ಕೆಲಸ ಮಾಡಲಿದೆ ಎಂಬ ವಿಶ್ವಾಸ ತಮಗಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇಂತಹ ಯೋಜನೆಗಳನ್ನು ಜಾರಿಗೊಳಿಸುವುದು ಅಸಾಧ್ಯ ಎನ್ನುವುದು ತಿಳಿದಿದ್ದರೂ ಸರ್ಕಾರ ಪ್ರಯತ್ನ ನಡೆಸುತ್ತಿದೆ. ನಮ್ಮನ್ನು ಆಳುವ ಮಂದಿಗೆ ಇದು ಏಕೆ ಅರ್ಥವಾಗುತ್ತಿಲ್ಲ. ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದು ಸಾಧ್ಯವೇ ಇಲ್ಲ. ಜನ ತಿರುಗಿ ಬಿದ್ದರೆ ಯಾವುದೇ ಪಕ್ಷ ಅಥವಾ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ ಎನ್ನುವುದನ್ನು ಮರೆಯಬಾರದು ಎಂದರು.

ಸ್ವತಃ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಆಗಿದ್ದ ಗೋಪಾಲಗೌಡರು ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ನಿವೃತ್ತಿ ನಂತರ ವಿವಿಧ ಹುದ್ದೆಗಳ ಮೇಲೆ ಕಣ್ಣಿಟ್ಟು ತೀರ್ಪುಗಳನ್ನು ಬರೆಯುವ ಪ್ರವೃತ್ತಿಯನ್ನು
ಬಲವಾಗಿ ಖಂಡಿಸಿದರು. ರಾಜ್ಯಪಾಲರಾಗಲು ತೀರ್ಪು ಬರೆಯುವುದು ಸರಿಯೇ ಎನ್ನುವುದನ್ನು ಮನಗಾಣಬೇಕು. ಜನ ಅಧಿಕಾರ ನೀಡುವುದು ಅವರ ಸೇವೆಗಾಗಿಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಅಲ್ಲ ಎಂದರು.

ಈ ಬೆಳವಣಿಗೆಗಳು ಜನರಿಗೆ ಅರಿವಿಲ್ಲ ಎಂದು ಭಾವಿಸಬಾರದು. ದೇಶದ ಉದ್ದಗಲಕ್ಕೂ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿ ಕೃತ್ಯಗಳ ಅರಿವು ಇದ್ದೇ ಇದೆ. ಈ ಮೂರು ಆಧಾರ ಸ್ತಂಭ ಅಂತಿಮ ಅಲ್ಲ. ಜನರು ಸುಪ್ರೀಂ
ಎನ್ನುವುದನ್ನು ಮರೆಯಬಾರದು. ಅವರಲ್ಲಿ ಆಕ್ರೋಶ ಮಡುಗಟ್ಟುತ್ತಿದ್ದು, ಸ್ಪೋಟಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹೇಳಿದರು.

ಇಸ್ಲಾಮೋಫೋಬಿಯಾ ಮತ್ತು ಸಧ್ಯದ ರಾಜಕಾರಣ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಬಿಜೆಪಿ ಹೇಗೆ ಧರ್ಮದ ಆಧಾರದಲ್ಲಿ ದೇಶದ ವಿಭಜನೆ ಮಾಡುತ್ತಿದೆ ಎಂದು ವಿಶ್ಲೇಷಿಸಿದರು.

ಧರ್ಮದ ಆಧಾರದ ಮೇಲೆ ಬಿಜೆಪಿ ಸದಾ ಚುನಾವಣಾ ರಾಜಕೀಯ ನಡೆಸುತ್ತಾ ಬಂದಿದೆ. ರಾಜ್ಯ ಮತ್ತು ದೇಶದ ಮತದಾರರಿಗೆ ಇವರ ಸಂಚಿನ ಅರಿವಿದೆ. ಹಾಗಾಗಿಯೇ ಕರ್ನಾಟಕದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಸಂವಿಧಾನ
ಬದಲಿಸುತ್ತಾರೆ ಎಂಬ ಸಂಶಯದಿಂದಲೇ ಇವರಿಗೆ 400 ಸ್ಥಾನ ನೀಡಿಲ್ಲ. ರಾಜ್ಯ ಮತ್ತು ದೇಶದಲ್ಲಿ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ಜನರು ಅನೋನ್ಯತೆಯಿಂದ ಇದ್ದಾರೆ ಎಂದರು.

ಪ್ರತಿ ಏರಿಯಾದಲ್ಲೂ ಮಸೀದಿ ದರ್ಶನ ನಡೆಯುತ್ತದೆ. ಎಲ್ಲ ಧರ್ಮೀಯರೂ ಪಾಲ್ಗೊಳ್ಳುತ್ತಾರೆ. ಜತೆಯಾಗಿ ಮಸೀದಿಯಲ್ಲಿ ಊಟ ಮಾಡುತ್ತೇವೆ. ಬಡವರಿಗೆ ಸಹಾಯ ಮಾಡುತ್ತೇವೆ. ಆಯಾ ಮಸೀದಿ ವ್ಯಾಪ್ತಿಯ ಬಡವ ದುರ್ಬಲರ ಪಟ್ಟಿ ತಯಾರಿಸಿ ಸಹಾಯ ಮಾಡುತ್ತೇವೆ ಎಂದು ಭ್ರಾತೃತ್ವಕ್ಕೆ ಉದಾಹರಣೆ ನೀಡಿದರು

ಇಸ್ಲಾಮೋಫೋಬಿಯಾ ಎನ್ನುವುದು ಅಮೆರಿಕಾ ರೂಪಿಸಿದ ಪದ. ಸಂಘ ಪರಿವಾರ ಅದನ್ನು ಮುಂದುವರೆಸಿದೆ ಅಷ್ಟೇ. ಇಸ್ಲಾಂನಲ್ಲಿ ಯಾರೂ ಮೂಲಭೂತವಾದಿಗಳು ಇಲ್ಲ. ಇಸ್ಲಾಂ ಅಂದರೆ ಸೋದರತ್ವ. ನಾವೆಲ್ಲರೂ ಹಾಗೆಯೇ ಬದುಕುತ್ತಿದ್ದೇವೆ ಎಂದು ನಸೀರ್ ಅಹಮದ್ ಹೇಳಿದರು.

ಈ ಸಂವಿಧಾನ ಸಂಭ್ರಮ ಮತ್ತು ಕನ್ನಡ ಪ್ಲಾನೆಟ್ ಕಾನ್ ಕ್ಲೇವ್ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಯೂತ್ ಫೆಡರೇಷನ್ ಸಹಯೋಗ ನೀಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಪ್ಲಾನೆಟ್ ಪ್ರಧಾನ ಸಂಪಾದಕರಾದ ದಿನೇಶ್ ಕುಮಾರ್ ಎಸ್.ಸಿ, ಹರ್ಷಕುಮಾರ್ ಕುಗ್ವೆ ಮತ್ತು ಅಂಬೇಡ್ಕರ್ ಯೂತ್ ಫೆಡರೇಷನ್ ಸಂಚಾಲಕ ರುದ್ರು ಪುನೀತ್ ಉಪಸ್ಥಿತರಿದ್ದರು.

More articles

Latest article