ವಯನಾಡು: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಭರ್ಜರಿ ಜಯ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅಣ್ಣ ಪಡೆದಿದ್ದ ಮತಗಳ ದಾಖಲೆಯನ್ನೇ ಮುರಿದ ತಂಗಿ ಪ್ರಿಯಾಂಕಾ, 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಬೀಗಿದ್ದಾರೆ. ಪ್ರಿಯಾಂಕಾ ತಮ್ಮ ಚೊಚ್ಚಲ ಚುನಾವಣೆಯಲ್ಲಿ ಜಯ ಸಾಧಿಸಿ ಲೋಕಸಭೆ ಪ್ರವೇಶಿಸಿದ್ದಾರೆ. ಕಳೆದ 2 ಲೋಕಸಭಾ ಚುನಾವಣೆ ಮತ್ತು ಉಪಚುನಾವಣೆಯಲ್ಲೂ ನೆಹರು ಕುಟುಂಬದ ಕುಡಿಗಳಿಗೆ ವಯನಾಡು ಕ್ಷೇತ್ರದ ಜನತೆ ಬೆಂಬಲ ನೀಡಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಇದೇ ಕ್ಷೇತ್ರದಿಂದ 3.5 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಆರಂಭಿಕ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಪ್ರಿಯಾಂಕಾ ಅವರು ಮತ ಎಣಿಕೆ ಮುಗಿಯುವವರೆಗೆ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದರು. 1..2..3.. 4 ಲಕ್ಷದವರೆಗೆ ಅಂತರ ಹೆಚ್ಚುತ್ತಲೇ ಹೋಯಿತು.. ಪ್ರತಿಸ್ಪರ್ಧಿಗಳಾದ ಎಲ್ಡಿಎಫ್ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನೇವಿ ಹರಿದಾಸ್ ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ.
2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಯ್ಬರೇಲಿ ಜೊತೆಗೆ ವಯನಾಡಿನಲ್ಲಿದ್ದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲೂ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ಪ್ರಿಯಾಂಕಾ ಗಾಂಧಿ ಅವರಿಗೆ ಬಿಟ್ಟುಕೊಟ್ಟಿದ್ದರು. ಪ್ರಿಯಾಂಕಾ ಪರವಾಗಿ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು.
2024ರ ಲೋಕಸಭಾ ಚುನಾವಣೆ ಫಲಿತಾಂಶ:
ರಾಹುಲ್ ಗಾಂಧಿ (ಕಾಂಗ್ರೆಸ್) – 647,445 ಮತ (ಶೇ 59.69)
ಅನ್ನಿ ರಾಜ (ಸಿಪಿಐ ಪಕ್ಷ) – 283,023 ಮತ (ಶೇ 25.24)
ಕೆ ಸುರೇಂದ್ರನ್ (ಬಿಜೆಪಿ) – 141,045 (ಶೇ 13)
2019ರ ಲೋಕಸಭಾ ಚುನಾವಣೆ ಫಲಿತಾಂಶ:
ರಾಹುಲ್ ಗಾಂಧಿ (ಕಾಂಗ್ರೆಸ್) – 706,367 ಮತ (ಶೇ 64.94)
ಪಿಪಿ ಸುನೀರ್ (ಸಿಪಿಐ ಪಕ್ಷ) – 274,597 ಮತ (ಶೇ 25.24)
ತುಷಾರ್ ವೆಲ್ಲಪಲ್ಲಿ (ಬಿಡಿಜೆಎಸ್) – 78,816 (ಶೇ 7.25)