ಬೆಂಗಳೂರು: ಹಾಸನ ಸಂಸದ ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಿ, ತಾನೇ ಸ್ವತಃ ವಿಡಿಯೋ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗ ಹೊಸ ತಿರುವು ಬಂದಿದ್ದು, ತಾಯಿ-ಮಗಳು ಇಬ್ಬರ ಮೇಲೂ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೂರುದಾರ ಮಹಿಳೆಯರೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಗಳೊಂದಿಗೂ ಪ್ರಜ್ವಲ್ ರೇವಣ್ಣ ದೌರ್ಜನ್ಯವೆಸಗಿರುವ ಕುರಿತು ಖಾಸಗಿ ಟಿವಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ SIT ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಈ ಸಂಬಂಧ ತನಿಖೆ ಮುಂದುವರೆದಿದ್ದು, ಈಗಾಗಲೇ ತನ್ನ ವಿರುದ್ಧ ನಡೆದಿರುವ ದೌರ್ಜನ್ಯದ ಕುರಿತು ಹೇಳಿಕೆ ನೀಡಿರುವ ಸಂತ್ರಸ್ಥೆ ಇಂದು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೂ SIT ಮುಂದೆ ಹಾಜರುಪಡಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾದಲ್ಲಿ ಪ್ರಜ್ವಲ್ ಗೆ ಜಾಮೀನು ಸಿಗುವ ಸಾಧ್ಯತೆ ಕ್ಷೀಣಿಸಲಿದೆ.
ಸಂತ್ರಸ್ತೆ ಒಬ್ಬರು ತನ್ನ ಮಗಳ ಜೊತೆ ಕೂಡ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಬಳಸಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಇದೆ. ಹಾಗಾಗಿ ಪ್ರಕರಣದಲ್ಲಿ ಆರೋಪಿಯಿಂದ ಅಪ್ರಾಪ್ತ ಹೆಣ್ಣು ಮಕ್ಕಳ ಬಳಕೆ ಪತ್ತೆಯಾದಲ್ಲಿ ಈ ಬಗ್ಗೆ ವರದಿ ನೀಡುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಎಸ್ಐಟಿಗೆ ಪತ್ರ ಬರೆದಿದ್ದರು.