ಬೆಂಗಳೂರು: ಯುದ್ಧ ಕುರಿತು ನಾನು ನೀಡಿದ ಹೇಳಿಕೆಯ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು ಎಂದು ತಾವು ಹೇಳಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಯುದ್ಧ ಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಬಿಜೆಪಿಯಿಂದ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಇದೀಗ ಅವರು ಎಕ್ಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ. ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ.
ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಅವುಗಳನ್ನೆಲ್ಲ ಬಹಿರಂಗ ಪಡಿಸುವ ಅಗತ್ಯವಿಲ್ಲ. ಅಂತಹ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ.
ಇದೇ ವೇಳೆ ಕೆಲವು ಕಿಡಿಗೇಡಿಗಳು ಯುದ್ಧೋನ್ಮಾದವನ್ನು ಸೃಷ್ಟಿಸಿ ದೇಶದೊಳಗಿನ ಸೌಹಾರ್ದತೆಯನ್ನು ಕಲಕುವ ಪ್ರಯತ್ನ ಮಾಡುತ್ತಿದ್ದು ಇಂತಹವರ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಂದು ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಾಹ್ಯ ಶತ್ರುವನ್ನು ಎದುರಿಸಬೇಕಾದರೆ ಆಂತರಿಕವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾಗುತ್ತದೆ.
ಪಾಕಿಸ್ತಾನ ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ರೋಗಗ್ರಸ್ತ ದೇಶವಾಗಿದೆ. ಅವರು ಕಳೆದುಕೊಳ್ಳುವುದೇನೂ ಇಲ್ಲ, ಈ ಕಾರಣದಿಂದಾಗಿಯೇ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಖಂಡಿಸಿ ಭಾರತದ ಪರವಾಗಿ ನಿಂತಿವೆ. ಈ ಬೆಳವಣಿಗೆಯನ್ನು ಭಾರತ ಸದುಪಯೋಗಪಡಿಸಿಕೊಂಡು ಪಾಕಿಸ್ತಾನ ಮುಂದೆಂದೂ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ತಕ್ಕ ಪಾಠ ಕಲಿಸಬೇಕಾಗಿದೆ.
ದೇವನಹಳ್ಳಿಯಲ್ಲಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತಾಕಬೇಕು: ದೇಶದ ಸಾರ್ವಭೌಮತೆ ಧಕ್ಕೆ ಬಂದಾಗ ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ. ಇದನ್ನು ಪ್ರತೀ ಸಂದರ್ಭದಲ್ಲೂ ಭಾರತ ಸಾಭೀತು ಮಾಡಿದೆ ಎಂದು ಗುಡುಗಿದ್ದಾರೆ.
ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧ, ಸದಾ ಸನ್ನದ್ಧ ಆಗಿರುತ್ತದೆ. ಅನಿವಾರ್ಯತೆ ಆದಾಗ ಯುದ್ಧಕ್ಕೆ ಮುಂದಡಿ ಇಟ್ಟು ನಮ್ಮ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮಗೆ ಗೊತ್ತಿದೆ. ಇದನ್ನು ಭಾರತ ಪ್ರತೀ ಸಂದರ್ಭದಲ್ಲೂ ಸಾಭೀತು ಪಡಿಸಿದೆ. ಇತಿಗಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದಕ್ಕೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದರು.
ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವುದು, ಪ್ರತಿಯೊಬ್ಬ ಭಾರತೀಯರಿಗೆ ಸೂಕ್ತ ರಕ್ಷಣೆ ಕೊಡುವುದು ನಮ್ಮ ಈ ಕ್ಷಣದ ಆಧ್ಯತೆಯಾಗಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಭಾರತ ಬುದ್ದ, ಬಸವರ, ಗಾಂಧಿ, ಅಂಬೇಡ್ಕರ್ ಅವರ ನಾಡು. ಇಲ್ಲಿ ಭಯೋತ್ಪಾದನೆಗೆ, ಅಶಾಂತಿಗೆ ಅವಕಾಶ ಇಲ್ಲ. ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ದ ಎನ್ನುವ ಮಾತನ್ನು ನೆನ್ನೆ ನಾನು ಹೇಳಿದ್ದೆ. ಆದರೆ ಭಯೋತ್ಪಾದಕರ ವಿರುದ್ಧ, ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಡ ಎಂದು ಹೇಳಿದ್ದೇನೆ ಎಂದು ಸುಳ್ಳು ಸುಳ್ಳೇ ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ ನನ್ನ ಮಾತನ್ನು ತಿರುಚಿ ಯುದ್ದವೇ ಬೇಡ ಎಂದು ಹೇಳಿದ್ದೇನೆ ಎಂದು ನನ್ನದಲ್ಲದ ಅಭಿಪ್ರಾಯವನ್ನು ತಿರುಚಿ ತೋರಿಸುತ್ತಿದ್ದಾರೆ. ಇದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.