ನವದೆಹಲಿ: ಕರ್ನಾಟಕದಲ್ಲಿ ರಾಜಕೀಯ ನಾಯಕರು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಲೋಕಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.
ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿಯ ಅನುರಾಗ್ ಸಿಂಗ್ ಠಾಕೂರ್, ಕರ್ನಾಟಕದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ವಕ್ಫ್ ಕಾನೂನುಗಳ ಮೂಲಕ ವರ್ಷಕ್ಕೆ ರೂ. 440 ಕೋಟಿ ವರಮಾನ ಗಳಿಸುತ್ತಿದೆ ಎಂದು ಹೇಳಿದರು.
ಅವರ ಪಕ್ಷದ ನಾಯಕರ ಹೆಸರು ವಕ್ಫ್ ಹಗರಣದಲ್ಲಿ ಉಲ್ಲೇಖವಾಗಿದೆ ಎಂದು ಠಾಕೂರ್ ಹೇಳಿದಾಗ, ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿನ ಕೆ.ಸಿ. ವೇಣುಗೋಪಾಲ್, ಠಾಕೂರ್ ಅವರು ಸದನವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ, ನಮ್ಮ ಪಕ್ಷದ ಮುಖ್ಯಸ್ಥರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅವರು ಜಾತಿವಾದ ತೋರಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಆರೋಪಕ್ಕೆ ತಿರುಗೇಟು ನೀಡಿದ ಅನುರಾಗ್, ನಾನು ಯಾವುದೇ ಜಾತಿಯ ಹೆಸರನ್ನು ಹೇಳಿಯೇ ಇಲ್ಲ. ಆದರೂ ನೀವು ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ. ನಿಮಗೆ ಪಾರದರ್ಶಕತೆ ಬೇಕಿಲ್ಲ. ಏಕೆಂದರೆ ನೀವು ವಕ್ಫ್ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಕರ್ನಾಟಕದ ಬಗ್ಗೆ ಉಲ್ಲೇಖಿಸಿ, ಕಲಬುರ್ಗಿ ಮತ್ತು ವಿಜಯಪುರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಬೆಲೆಬಾಳುವ ಆಸ್ತಿಯನ್ನು ಆಯ್ದ ಕೆಲವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ ಎಂದೂ ಅಮಿತ್ ಶಾ ಸದನದ ಗಮನಕ್ಕೆ ತಂದರು.