ಹೊಸಪೇಟೆ (ವಿಜಯನಗರ): ಒಂದು ವೇಳೆ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿದ್ದರೆ ಅವುಗಳನ್ನು ಕೂಡಲೇ ಹಿಂದಕ್ಕೆ ಪಡೆಯಲಾಗುವುದು. ಯಾವುದೆ ಕಾರಣಕ್ಕೂ ರೈತರ ಜಮೀನನ್ನು ವಶಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಇಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಬಿಜೆಪಿ ಮುಖಂಡರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯಪುರದಲ್ಲಿ 1,200 ಎಕರೆ ಜಮೀನು ವಕ್ಫ್ ಪಾಲಾಗುತ್ತದೆ ಎಂದು ಗುಲ್ಲೆಬ್ಬಿಸಿದರು. ಆದರೆ ಅಲ್ಲಿ ವಕ್ಫ್ ಗೆ ಸೇರಿದ 11 ಎಕರೆ ಜಮೀನಷ್ಟೇ ಇದೆ ಎಂದರು. ಹಾವೇರಿ ಜಿಲ್ಲೆಯ ಕಡಕೋಳದಲ್ಲಿ ಕಲ್ಲು ತೂರಾಟ ಘಟನೆ ನಡೆಯಬಾರದಿತ್ತು. ಪೆಟ್ಟು ತಿಂದವರೇ ದೂರು ನೀಡಲು ಸಿದ್ಧರಿಲ್ಲ. ನಾವೆಲ್ಲ ಜತೆಗೆ ಇರುವವರು ಎಂದು ಅವರೇ ಹೇಳುತ್ತಿದ್ದಾರೆ. ಆದರೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ವಕ್ಫ್ ಬಳಿ 1.12 ಲಕ್ಷ ಎಕರೆ ಜಮೀನಿದೆ. ಅದೆಲ್ಲವೂ ದಾನಿಗಳು ಕೊಟ್ಟಂತಹ ಜಮೀನೇ ಹೊರತು ಸರ್ಕಾರ ಕೊಟ್ಟಿದ್ದಲ್ಲ. ರೈತರಿಗೆ ಯಾವ ಕಾರಣಕ್ಕೂ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದರು. ರೈತರ ಪಹಣಿಯಲ್ಲಿ ವಕ್ಫ್ ಹೆಸರಿದ್ದರೆ ಚಿಂತಿಸಬೇಡಿ. ಆ ಜಮೀನನ್ನು ಸ್ವಾಧೀನ ಪಡೆಯುವುದಿಲ್ಲ. ಒಂದು ವೇಳೆ ನೋಟಿಸ್ ನೀಡಿದ್ದರೆ ಅದನ್ನು ಹಿಂಪಡೆಯಲಾಗುವುದು ಎಂದರು.
ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅಧಿಕಾರಿಗಲೂ ಅದನ್ನು ಮಾಡಲು ಆಗುವುದಿಲ್ಲ. ವಕ್ಫ್ ಆಸ್ತಿ ಎಂದು ಈಗ ಮಾತ್ರ ನೋಟಿಸ್ ನೀಡುತ್ತಿಲ್ಲ. ಬಿಜೆಪಿ ಸರ್ಕಾರದಲ್ಲೂ ಸಾವಿರಾರು ನೋಟಿಸ್ ನೀಡಲಾಗಿದೆ. ತಾವು ಮಾಡಿದ್ದನ್ನು ಮುಚ್ಚಿಟ್ಟಿಕೊಂಡು ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.