ವಕ್ಫ್ ಭೂ ಕಬಳಿಕೆ: ಕಾಂಗ್ರೆಸ್ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ, ಕೇಂದ್ರ ಸಚಿವ ಜೋಶಿ ಆರೋಪ

Most read


ಹುಬ್ಬಳ್ಳಿ: ವಕ್ಫ್ ಭೂ ಕಬಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ರೈತರ ದಿಕ್ಕು ತಪ್ಪಿಸೋ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ,ಮುಖ್ಯಮಂತ್ರಿಗಳು ರೈತರಿಗೆ ವಕ್ಫ್ ನೀಡಿದ್ದ ನೋಟಿಸ್ ಹಿಂಪಡೆದಿದ್ದೇವೆ ಎನ್ನುತ್ತಾರೆ. ಆದರೆ, ಪಹಣಿಯಲ್ಲಿ ವಕ್ಫ್ ಹೆಸರಿರುವುದನ್ನು ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯಕ್ಕೂ ಮೊದಲು ಮತ್ತು ನಂತರ 50, 60, 70 ವರ್ಷಗಳಿಂದ ಜಮೀನಿನ ಪಹಣಿಯಲ್ಲಿ ರೈತರ ಹೆಸರಿದೆ. ರೈತರ ಜಮೀನು ನೋಟಿಫೈ ಮಾಡಿ ಕಾಲಂ ನಂ.11ರಲ್ಲಿ ರೈತರ ಹೆಸರು ದಾಖಲಿಸಿದೆ. ಹೀಗಿದ್ದಾಗ ಇತ್ತೀಚಿನ ವರ್ಷಗಳಲ್ಲಿ ವಕ್ಫ್ ಹೆಸರು ದಾಖಲಿಸಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪಹಣಿಯಲ್ಲಿ ವಕ್ಫ್ ಹೆಸರನ್ನು ಸಂಪೂರ್ಣ ತೆಗೆಯೋವರೆಗೂ ಹೋರಾಟ ನಿಲ್ಲುವುದಿಲ್ಲ. ವಿಜಯಪುರದಲ್ಲಿ ರೈತರ ಹೋರಾಟಕ್ಕೆ ಬಿಜೆಪಿ ಸಾಥ್ ನೀಡಲಿದೆ ಮತ್ತು ರೈತರಿಗೆ ನೈತಿಕ ಸ್ಥೈರ್ಯ ತುಂಬಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಕಾಂಗ್ರೆಸ್ ನವರು ಬಿಜೆಪಿ ಕಾಲದಲ್ಲಿ ಆಗಿದೆ ಎನ್ನುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯಾರ ಕಾಲದಲ್ಲಿ ಆದರೂ ಅದು ತಪ್ಪೇ. ಆಗ ಅದು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ. ಬಿಜೆಪಿ ಸರ್ಕಾರ ವಕ್ಫ್ ಹೆಸರು ದಾಖಲಿಸಲು ಬಿಡಲ್ಲವೆಂದು ವಕ್ಫ್ ಕಮಿಟಿ ಆಗ ಸರ್ಕಾರದ ಗಮನಕ್ಕೆ ಬಾರದಂತೆ ರಹಸ್ಯವಾಗಿ ಮಾಡಿದೆ. ಜನಕ್ಕೂ ಗೊತ್ತಾಗಿಲ್ಲ. ನಮ್ಮ ಸರ್ಕಾರದ ಗಮನಕ್ಕೆ ಬಂದಿದ್ದರೆ ಆಗಲೇ ವಕ್ಫ್ ಗೆ ವಾರ್ನಿಂಗ್ ಕೊಡುತ್ತಿತ್ತು ಮತ್ತು ವಕ್ಫ್ ಹೆಸರನ್ನು ಕಿತ್ತೆಸೆಯುತ್ತಿತ್ತು ಎಂದರು.


ವಕ್ಫ್ ಹಸರಿನಲ್ಲಿ ಭೂಮಿ ಕಬಳಿಸಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವಕ್ಫ್ ಕಾನೂನು ತಿದ್ದುಪಡಿ ಮಾಡಲಿದೆ. ಕಾಂಗ್ರೆಸ್ ನಿಜವಾಗಿ ರೈತರ ಪರವಿದ್ದರೆ ಇದಕ್ಕೆ ಬೆಂಬಲ ನೀಡಲಿ ಎಂದು ಸಚಿವ ಜೋಶಿ ಸವಾಲ್ ಹಾಕಿದರು.

More articles

Latest article