ವಕ್ಫ್; ಬಿಜೆಪಿ ಇಬ್ಬಗೆ ನೀತಿಗೆ ಸಿಎಂ ತರಾಟೆ; ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ ಸ್ಪಷ್ಟನೆ

Most read

ಬೆಂಗಳೂರು: ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ’  ಎಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.

ವಕ್ಫ್ ಆಸ್ತಿ ನೋಟೀಸುಗಳಿಗೆ ಸಂಬಂಧಿಸಿದಂತೆ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆ ಮಾಡುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು 200ಕ್ಕೂ ಹೆಚ್ಚು ನೋಟೀಸ್ ಗಳನ್ನು  ನೀಡಿದ್ದಾರೆ. ಅವರದು ಇಬ್ಬದಿ ರಾಜಕೀಯ ನಡೆ. ಯಾವ ರೈತರನ್ನೂ ಒಕ್ಕಲೆಬ್ಬಿಸಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಕೊಟ್ಟಿರುವ ನೋಟೀಸ್ ಗಳನ್ನು  ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ನವೆಂಬರ್ 4ರ ಅವರ ಪ್ರತಿಭಟನೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾದದ್ದು, ಸಮಸ್ಯೆಗಳು ಇರದೆಡೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈಗ ಮುಡಾ ಪ್ರಕರಣದಲ್ಲಿ  ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ.

ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೇ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪಾವಳಿ ಶುಭಾಶಯಗಳನ್ನು  ತಿಳಿಸಿದರು.

 ಶಕ್ತಿ ಯೋಜನೆ ಹಾಗೆಯೇ ಮುಂದುವರೆಯಲಿದೆ. ಶಕ್ತಿ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಅವಧಿ ಅಷ್ಟೇ ಅಲ್ಲ, ಮುಂದಿನ ಅವಧಿಗೂ ಇರುತ್ತೆ. ಅಷ್ಟುಕ್ಕೂ ಡಿಸಿಎಂ ಈ ಬಗ್ಗೆ ನನ್ನ ಬಳಿ ಮಾತನಾಡಿಲ್ಲ. ಟಿಕೆಟ್ ಖರೀದಿಸ್ತೇವೆ ಎಂದು ಯಾವ ಮಹಿಳೆಯೂ ನನ್ನ ಬಳಿ ಹೇಳಿಲ್ಲ. ಡಿ.ಕೆ ಶಿವಕುಮಾರ್ ಗೆ ಮೇಲ್ ಮೂಲಕ ತಿಳಿಸಿದ್ದಾರಂತೆ ಅಷ್ಟೇ . ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಐಷಾರಾಮಿ ಕಾರುಗಳಲ್ಲಿ ಸಂಚರಿಸುವವರು ಹೇಳಿರಬಹುದು. ಯಾಕಂದ್ರೆ ಅವರಿಗೆ ಬಸ್ ನ ಅವಶ್ಯಕತೆ ಇರುವುದಿಲ್ಲ ಎಂದೂ ಅವರು ಹೇಳೀದ್ದಾರೆ.

More articles

Latest article