Saturday, December 7, 2024

ಬೈ ಎಲೆಕ್ಷನ್‌ ಎಫೆಕ್ಟ್‌ : ವಕ್ಫ್ ಆಸ್ತಿ ಕುರಿತು ಭುಗಿಲೆದ್ದ ವಿವಾದ; ಕಾಂಗ್ರೆಸ್‌, ಬಿಜೆಪಿ ನಡುವೆ ಜಟಾಪಟಿ

Most read

ಬೆಂಗಳೂರು: ವಕ್ಫ್ ಆಸ್ತಿ ಹೆಸರಿನಲ್ಲಿ ರೈತರಿಗೆ ನೀಡಿರುವ ನೋಟಿಸ್‌ ಗಳನ್ನು ಹಿಂಪಡೆಯುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದರೂ ಈ ವಿವಾದ ತಣ್ಣಗಾಗುವ ಬದಲು ಭುಗಿಲೇಳುತ್ತಿದೆ.  ಒಂದು ಕಡೆ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ಮತ್ತೊಂದು ಕಡೆ ವಕ್ಫ್‌ ವಿವಾದ ಪ್ರತಿಭಟಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹೋರಾಟಕ್ಕೆ ಬಿಜೆಪಿ ಅಧ್ಯಕ್ಷರಾದಿಯಾಗಿ ಬಹುತೇಕ ನಾಯಕರು ಧುಮುಕಿದ್ದಾರೆ. ಸರ್ಕಾರವೂ ತಕ್ಕ ಎದಿರೇಟು ನೀಡುತ್ತಿದೆ.

ಮತ್ತೊಂದು ಕಡೆ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು, ಸಚಿವರು ಶಾಸಕರು ಮತ್ತು ಕಾಂಗ್ರೆಸ್‌ ಮುಖಂಡರು ಸ್ಪಷ್ಟನೆ ನೀಡುತ್ತಿದ್ದರೂ ಬಿಜೆಪಿ ಮುಖಂಡರು ಕೇಳುವ ಸ್ಥಿತಿಯಲ್ಲಿಲ್ಲ.

ಶಿಗ್ಗಾಂವಿಯಲ್ಲಿ ಸಿಎಂ ಸಿದ್ದರಾಮಯ್ಯ  ಪ್ರತಿಕ್ರಿಯಿಸಿ ಸುಳ್ಳು ಆರೋಪ ಮಾಡುವುದರಲ್ಲಿ ಬಿಜೆಪಿ ಮುಂದಿರುತ್ತದೆ. ಬಿಜೆಪಿ ಕೇವಲ ರಾಜಕಾರಣ ಮಾಡುತ್ತದೆ. ಬಿಜೆಪಿ ಸರ್ಕಾರದಲ್ಲೂ ನೋಟಿಸ್ ಕೊಟ್ಟಿದ್ದಾರೆ. ನಾವು ರದ್ದು ಮಾಡಬೇಕು ಎಂದು ಸಭೆ ಮಾಡಿದ್ದೇವೆ ಎಂದು ಕಿಡಿ ಕಾರಿದ್ದಾರೆ.

ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ರಾಜಕಾರಣಕ್ಕಾಗಿ ಬೊಮ್ಮಾಯಿ ಉಲ್ಟಾ ಹೊಡೆದಿದ್ದಾರೆ. ವಕ್ಫ್ ಆಸ್ತಿ ನಿನ್ನೆ, ಮೊನ್ನೆಯದಲ್ಲ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ಬಿಜೆಪಿಯವರ ಕಾಲದಲ್ಲೂ ನೋಟಿಸ್ ಗಳನ್ನ ಕೊಟ್ಟಿದ್ದಾರೆ. ಬಿಜೆಪಿಯವ್ರು 216 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಯಡಿಯೂರಪ್ಪ,  ಸದಾನಂದಗೌಡ, ಕುಮಾರಸ್ವಾಮಿ ಅವಧಿಯಲ್ಲೂ ನೋಟಿಸ್ ಕೊಡಲಾಗಿದೆ ಎಂದು ಟೀಕಿಸಿದರು.

ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ಹೆಸರಿನಲ್ಲಿ ಬಿಜೆಪಿ ನಡೆಸುತ್ತಿರುವುದು ಪ್ರತಿಭಟನೆ ಅಲ್ಲ, ರಾಜಕೀಯ. ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ ಎಂದರು. ನೋಟಿಸ್‌ ಹಿಂಪಡೆಯಲು ಸಿಎಂ ಹೇಳಿದ್ದರೂ ಪ್ರತಿಭಟಿಸುತ್ತಿದ್ದಾರೆ. ರೈತರ ಒಂದಿಂಚೂ ಜಮೀನು ಸರ್ಕಾರ ಹಿಂಪಡೆಯುವುದಿಲ್ಲ ಎಂದು  ಬೆಂಗಳೂರಲ್ಲಿ  ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ.

ವಿಜಯಪುರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಎಲ್ಲಿ ನೋಡಿದರೂ ವಕ್ಫ್ ವಿವಾದ ಉಂಟಾಗಿದೆ.. ದೇಗುಲಗಳು, ಮಠ, ರೈತರ ಜಮೀನು ಒಂದೂ ಉಳಿದಿಲ್ಲ. ವಕ್ಫ್ ವಿರುದ್ಧ ವಿಜಯಪುರದಿಂದಲೇ ಹೋರಾಟ ಪ್ರಾರಂಭಿಸ್ತೇನೆ ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ, ಸವಣೂರು ಪಟ್ಟಣಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆದಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗ್ಗೆ ಶಿಗ್ಗಾಂವಿ ಚೆನ್ನಮ್ಮ ಸರ್ಕಲ್‌ ನಿಂದ ಹೊರಟ ರ್ಯಾಲಿ  ನಡೆಯಿತು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್‌, ಸಂಸದ ಗೋವಿಂದ ಕಾರಜೋಳ. ವಿಧಾನಪರಿಷತ್‌ ಸದಸ್ಯ ಸಿ.ಟಿ ರವಿ, ಮಾಜಿ ಸಂಸದ ಪ್ರತಾಪ್‌ ಸಿಂಹ, ಶ್ರೀರಾಮುಲು ಭಾಗಿಯಾಗಿದ್ದರು.

ವಿಜಯಪುರದಲ್ಲಿ ರೈತರು, ಹಿಂದೂಪರ ಸಂಘಟನೆಗಳು, ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ವಕ್ಫ್‌ ವಿವಾದ ಕುರಿತಾದ ಸಂಸದ ಗೋವಿಂದ ಕಾರಜೋಳ ನೃತೃತ್ವದ ಸತ್ಯಶೋಧನಾ ಸಮಿತಿ ತನ್ನ ವರದಿಯನ್ನು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿದೆ.

More articles

Latest article