Thursday, December 12, 2024

ವಕ್ಫ್:‌ ಜಗದಾಂಬಿಕಾ ಪಾಲ್ ಏಕ ಪಕ್ಷೀಯ ಧೋರಣೆಗೆ  ಜೆಪಿಸಿ ಸದಸ್ಯರ ಆಕ್ಷೇಪ

Most read

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ  ಜಂಟಿ ಸಂಸದೀಯ ಸಮಿತಿಯ(ಜೆಪಿಸಿ) ಅಧ್ಯಕ್ಷರು ಏಕಪಕ್ಷೀಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಜೆಪಿಸಿಯ ಇತರ ಸದಸ್ಯರು ಗಂಭೀರ ಆರೋಪ ಮಡಿದ್ದಾರೆ. ವಿವಿಧ ರಾಜ್ಯಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರವಾಸವನ್ನು ಮುಂದೂಡಲು ಮಾಡಿಕೊಂಡ ಮನವಿಯನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಜಂಟಿ ಸಂಸದೀಯ ಸಮಿತಿಯ ಪ್ರತಿಪಕ್ಷಗಳ ಸದಸ್ಯರು ಸಮಿತಿಯ ಮುಂಬರುವ ಐದು ರಾಜ್ಯಗಳ ಪ್ರವಾಸವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಈ ಹಿಂದೆ ನಿರ್ಧಾರವಾಗಿದ್ದಂತೆ ಸಮಿತಿಯು ಶನಿವಾರದಿಂದ ಗುವಾಹಟಿ, ಭುವನೇಶ್ವರ, ಕೋಲ್ಕತ್ತಾ, ಪಟನಾ ಮತ್ತು ಲಖನೌ ಪ್ರವಾಸವನ್ನು ಆರಂಭಿಸಬೇಕಿತ್ತು. ಈ ಸಂಬಂಧ ವಿವರಣೆ ನೀಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು,  ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆಯುತ್ತಿದೆ. ಆದ್ದರಿಂದ ಪ್ರತಿಪಕ್ಷಗಳ ಸದಸ್ಯರು ಪ್ರವಾಸದಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದೇವೆ. ಆದರೂ ಅಧ್ಯಕ್ಷರು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ನಮ್ಮ ಕ್ಷೇತ್ರಗಳಲ್ಲಿ ನಾವು ಕೆಲಸ ಮಾಡದಂತೆ ನಮ್ಮನ್ನು ತಡೆಯಲಾಗುತ್ತಿದೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ನಿರ್ಬಂಧಿಸಲಾಗುತ್ತಿದೆ. ಪ್ರವಾಸವನ್ನು ಮುಂದೂಡಲು ಸ್ಪೀಕರ್‌ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.

ಎಐಎಂಐಎಂ ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಮಿತಿಗೆ ತನಿಖಾ ಅಧಿಕಾರವಿಲ್ಲ. ಅದರ ಕೆಲಸ ಕೇವಲ ಮಸೂದೆಯನ್ನು ಪರಿಶೀಲಿಸುವುದು. ಮೇಲಾಗಿ, ಅಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸುವಂತಿಲ್ಲ ಮತ್ತು ಸಮಿತಿಯು ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಎಕ್ಸ್‌ ನಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರತಿಪಕ್ಷದ ಜೆಪಿಸಿ ಸದಸ್ಯರು ನವೆಂಬರ್ 5 ರಂದು ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ, ವೇಳಾಪಟ್ಟಿಯನ್ನು ಮುಂದೂಡಬೇಕು ಮತ್ತು ಜೆಪಿಸಿಯ ಸಭೆಯು ವಾರದಲ್ಲಿ ಒಂದು ದಿನ ಅಥವಾ ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ಸೇರಿದರೆ ಸಾಕು ಎಂದು ಕೋರಿದ್ದರು.

More articles

Latest article