ಇರಾನ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕದ ಒಳಗೆ ಇಂಧನ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 100 ವರ್ಷ ಹಳೆಯದಾದ ಹಡಗು ಸಾಗಣೆ ಕಾನೂನನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ. ಮುಂದಿನ 60 ದಿನಗಳವರೆಗೆ ವಿದೇಶಿ ಧ್ವಜ ಹೊಂದಿರುವ ಹಡಗುಗಳು ಅಮೆರಿಕದ ಒಂದು ಬಂದರಿನಿಂದ ಮತ್ತೊಂದು ಬಂದರಿಗೆ ತೈಲ, ಅನಿಲ, ರಸಗೊಬ್ಬರ ಮತ್ತು ಕಲ್ಲಿದ್ದಲನ್ನು ಸಾಗಿಸಲು ಈ ಕ್ರಮವು ಅವಕಾಶ ನೀಡುತ್ತದೆ. ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಕಾರ್ಯಾಚರಣೆಯಿಂದಾಗಿ ತೈಲ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ ಅಡೆತಡೆಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಇದರಿಂದ ಅಮೆರಿಕದೊಳಗೆ ಸರಕು ಸಾಗಣೆ ವೆಚ್ಚ ಕಡಿಮೆಯಾಗಲಿದೆ ಮತ್ತು ಇಂಧನ ಪೂರೈಕೆ ಸರಾಗವಾಗಲಿದೆ.
ಜೋನ್ಸ್ ಆಕ್ಟ್ (Jones Act) ಎಂದರೇನು?
ಇದನ್ನು ಅಧಿಕೃತವಾಗಿ 1920 ರ ಮರ್ಚೆಂಟ್ ಮೆರೈನ್ ಆಕ್ಟ್ ಎಂದು ಕರೆಯಲಾಗುತ್ತದೆ. ಅಮೆರಿಕದ ಬಂದರುಗಳ ನಡುವೆ ಸರಕು ಸಾಗಿಸುವ ಹಡಗುಗಳು ಅಮೆರಿಕದಲ್ಲೇ ನಿರ್ಮಾಣವಾಗಿರಬೇಕು.ಆ ಹಡಗುಗಳು ಅಮೆರಿಕದ ನಾಗರಿಕರ ಒಡೆತನದಲ್ಲಿರಬೇಕು ಮತ್ತು ಅದರಲ್ಲಿ ಅಮೆರಿಕದ ಸಿಬ್ಬಂದಿಗಳೇ ಇರಬೇಕು. ಸಾಮಾನ್ಯ ದಿನಗಳಲ್ಲಿ ವಿದೇಶಿ ಹಡಗುಗಳು ಅಮೆರಿಕದ ಆಂತರಿಕ ಸಮುದ್ರ ವ್ಯಾಪಾರದಲ್ಲಿ ಭಾಗವಹಿಸುವಂತಿಲ್ಲ.
ಈಗ ಏಕೆ ಅಮಾನತುಗೊಳಿಸಲಾಗಿದೆ?
“ರಾಷ್ಟ್ರೀಯ ರಕ್ಷಣೆಯ ಹಿತಾಸಕ್ತಿ”ಗಾಗಿ ಈ ಕಾನೂನಿನಿಂದ ತಾತ್ಕಾಲಿಕ ವಿನಾಯಿತಿ ನೀಡಲು ಅವಕಾಶವಿದೆ. ಈಗ ಯುದ್ಧದ ಸಂದರ್ಭವಿರುವುದರಿಂದ, ದೇಶದ ಪೂರೈಕೆ ಸರಪಳಿ (Supply Chain) ಬಲಪಡಿಸಲು ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

