ಟಿಕೆಟ್‌ಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದೇನೆ ಎಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಅವರು ಇಂದು ಚನ್ನಪಟ್ಟಣದ ರೆಸಾರ್ಟ್‌ವೊಂದರಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಗಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದೇನೆ. ನನ್ನ ಹೆಸರನ್ನು ಪ್ರಕಟಿಸುತ್ತಿದ್ದಂತೆ ನಾಮಪತ್ರ ಸಲ್ಲಿಸುತ್ತೇನೆ ಎಂದೂ ಹೇಳಿದ್ದಾರೆ.
ಅಭಿಮಾನಿಗಳು ಮತ್ತು ಕಾರ್ಯಕರ್ತರು ನಾನೇ ಸ್ಪರ್ಧೆ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕಾದರೆ ನನ್ನ ಸ್ಪರ್ಧೆ ಅನಿವಾರ್ಯ ಎಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಕುಮಾರಸ್ವಾಮಿ ಅವರು ಪ್ರಜ್ಞಾವಂತರಿದ್ದು ಎಲ್ಲರನ್ನೂ ಸಮಾಧಾನಗೊಳಿಸಿ ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದೂ ಹೇಳಿದರು.
ಬಿಜೆಪಿ ಜೆಡಿಸ್ ವರಿಷ್ಠರು ನನ್ನ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಇದೆ. ಎರಡೂ ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದ್ದೇನೆ. ಟಿಕೆಟ್ ಸಿಕ್ಕೇ ಸಿಗುವ ವಿಶ್ವಾಸ ಇದೆ ಎಂದರು.
ಒಂದು ವೇಳೆ ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರು ಹೇಳಿದ ಹಾಗೆ ನಡೆದುಕೊಳ್ಳುತ್ತೇನೆ. ದುಡುಕುವುದಿಲ್ಲ ಎಂದ ಯೋಗೇಶ್ವರ್ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾನೇ ಎಂದು ಮಾತಿನುದ್ದಕ್ಕೂ ಒತ್ತಿ ಹೇಳಿದರು. ಒಟ್ಟಾರೆ ಬಿಜೆಪಿ ಜೆಡಿಎಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಗೋಚರಿಸುತ್ತಿದೆ. ಒಂದು ವೇಳೆ ಟಿಕೆಟ್ ಸಿಗದೇ ಹೋದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ.