ಬೆಂಗಳೂರು: ಮುಸಲ್ಮಾನ ಸಮುದಾಯದ ಮತದಾನದ ಹಕ್ಕನ್ನು ರದ್ದುಪಡಿಸಬೇಕೆಂದು ಹೇಳೀಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಾಧೀಶ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸ್ವಾಮೀಜಿಗಳು ಉಪ್ಪಾರಪೇಟರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತಾವು ದಿನಾಂಕ:29-11-2024 ರಂದು ಕಲಂ 35(3) ಬಿ.ಎನ್.ಎಸ್-2003 ರ ಅಡಿ ನೋಟೀಸ್ ನೀಡಿ ಬೆಳಿಗ್ಗೆ || ಗಂಟೆಗೆ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಿರುತ್ತೀರಿ. ವಯೋವೃದ್ಧನಾಗಿರುವ ನಾವು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದೇನೆ. ವೈದ್ಯರು 10 ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲು ಸೂಚಿಸಿರುತ್ತಾರೆ. ಆದ್ದರಿಂದ ತಾವು ತಿಳಿಸಿರುವಂತೆ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಗುಣಮುಖರಾದಲ್ಲಿ ದಿ.18-12-2024 ರಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇವೆ. ನಿಮಗೆ ಅನಾನುಕೂಲವಾದಲ್ಲಿ ತಮ್ಮ ತನಿಖಾಧಿಕಾರಿಗಳೇ ನಮ್ಮ ಮಠಕ್ಕೆ ಬಂದು ನಮ್ಮ ಹೇಳಿಕೆಯನ್ನು ಪಡೆದುಕೊಳ್ಳಲು ನಮಗೆ ಯಾವುದೇ ಅಭ್ಯಂತರವಿರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಾಯಿ ತಪ್ಪಿನಿಂದ ಆಡಿದ ಮಾತಿಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿರುತ್ತೇನೆ. ನಮ್ಮ ಈ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿರುತ್ತದೆ. ಆದ್ದರಿಂದ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕೆಂದು ಕೋರುತ್ತೇವೆ ಎಂದೂ ತಿಳಿಸಿದ್ದಾರೆ.