ಕಡಿಮೆ ಮತದಾನ ; ಯಾರು ಕಾರಣ?

Most read

“ಮತದಾನ ಮಾಡದ ಮತದಾರರು ಬದುಕಿದ್ದೂ ಸತ್ತಂತೆ. ಮತದಾನ ಮಾಡದವರಿಗೆ ಯಾವ ಸೌಲಭ್ಯಗಳನ್ನೂ ಕೊಡಬಾರದು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸುವಂತಾಗಬೇಕು. ಮತದಾನ ಮಾಡದವರಿಗೆ ನಾಚಿಕೆಯಾಗಬೇಕು. ಮತದಾನ ಮಾಡದೇ ಇರುವವರು ನಾಲಾಯಕ್ಕುಗಳು. ಮತದಾನ ಮಾಡದವರಿಗೆ ಏನನ್ನೂ ಕೇಳಲು ಅರ್ಹತೆ ಇಲ್ಲಾ, ಅಂತವರಿಗೆ ಶ್ರದ್ಧಾಂಜಲಿಗಳು. ಮತದಾನ ಮಾಡದವರು ಬರೀ ಬೊಗಳೇದಾಸರು. ದೇಶದ ನಾಗರೀಕರಾಗಲು ಅನರ್ಹರು..” ಹೀಗೆ ಒಂದಾ ಎರಡಾ ನೂರಾರು ತರಾವರಿ ಆಕ್ಷೇಪಗಳು, ಬೈಗುಳಗಳು, ಕಮೆಂಟುಗಳು.

ಎಪ್ರಿಲ್ 26 ರಂದು ಕರ್ನಾಟಕದಲ್ಲಿ ನಡೆದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮತಪ್ರಮಾಣ ಒಟ್ಟಾರೆ ಸರಾಸರಿ 69.23 % ಮಾತ್ರ ಆಗಿತ್ತು. ಅದರಲ್ಲೂ ರಾಜಧಾನಿ ಬೆಂಗಳೂರಿನ ಕೇಂದ್ರ, ಉತ್ತರ ಹಾಗೂ ದಕ್ಷಿಣ ಎನ್ನುವ ಮೂರೂ ಮತಕ್ಷೇತ್ರಗಳ ಮತದಾನ ಅತೀ ಕಡಿಮೆ ಅಂದರೆ ಸರಾಸರಿ 54 % ಆಗಿತ್ತು. ಒಂದು ಕೋಟಿ ಮತದಾರರಿರುವ ಬೆಂಗಳೂರಿನಲ್ಲಿ ಸರಿಸುಮಾರು ಅರ್ಧದಷ್ಟು ಮತದಾನ ಆಗಿದ್ದು ಅಚ್ಚರಿಯ ಸಂಗತಿ ಏನಲ್ಲ. ಏಕೆಂದರೆ ಈ ಹಿಂದಿನ ಚುನಾವಣೆಗಳಲ್ಲೂ ಸಹ ಹೆಚ್ಚು ಕಡಿಮೆ ಇಷ್ಟೇ ಮತದಾನ ನಡೆದಿತ್ತು. 2023 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬೆಂಗಳೂರಿನ 29 ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿ 55 % ಮಾತ್ರ ಮತದಾನ ಆಗಿತ್ತು.

“ಮತದಾನ ಪವಿತ್ರ ಕರ್ತವ್ಯ, ಮತದಾನ ನಮ್ಮ ಹಕ್ಕು” ಎಂದು ಎಲ್ಲಾ ಸುದ್ದಿ ವಾಹಿನಿಗಳು ಪ್ರಚಾರ ಮಾಡುತ್ತಲೇ ಬಂದಿದ್ದವು. ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಬೆಂಗಳೂರಿನಾದ್ಯಂತ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಸೆಲಿಬ್ರೆಟಿಗಳು ಮತದಾನ ಮಾಡಲೇಬೇಕೆಂದು ಹೇಳುತ್ತಲೇ ಇದ್ದರು. ಇಷ್ಟೆಲ್ಲಾ ಅರಿವು ಮೂಡಿಸಿದರೂ ಯಾಕೆ ಹೆಚ್ಚು ಮತದಾರರು ಮತದಾನದ ಬಗ್ಗೆ ನಿರ್ಲಕ್ಷ ವಹಿಸಿದರು?

ಮತಕಟ್ಟೆಗೆ ಬಂದು ಮತಹಾಕದ ಮತದಾರರ ಮೇಲೆ ಜಾಲತಾಣಗಳಲ್ಲಿ ಆರೋಪಗಳ ಸುರಿಮಳೆ ಮಾಡಲಾಯ್ತು. ಶಿಕ್ಷೆ ವಿಧಿಸಬೇಕು, ಸೌಲಭ್ಯ ನಿಲ್ಲಿಸಬೇಕು ಎಂದೆಲ್ಲಾ ಸಲಹೆಗಳನ್ನೂ ಕೊಡಲಾಯ್ತು. ಆದರೆ ಮತಪ್ರಮಾಣ ಕಡಿಮೆ ಆಗುವುದಕ್ಕೆ ಚುನಾವಣಾ ವ್ಯವಸ್ಥೆಯೂ ಕಾರಣ ಎನ್ನುವುದು ಬಹುತೇಕರ ಗಮನಕ್ಕೆ ಬರಬೇಕಿತ್ತು, ಬರಲಿಲ್ಲ. ಯಾಕೆ ಎಂಬುದಕ್ಕೆ ಕೆಲವು ಕಾರಣಗಳು ಹೀಗಿವೆ.

ಸಾಲು ಸಾಲು ರಜೆಯಲ್ಲಿ ಮತದಾನ

ಬೆಂಗಳೂರಿನಲ್ಲಿ ಮತ ಚಲಾವಣೆ

ಬೆಂಗಳೂರಿನ ಒತ್ತಡದ ಬದುಕಿನಲ್ಲಿ, ಯಾಂತ್ರಿಕ ಜೀವನದ ಸಂಪಾದನೆಯ ಧಾವಂತದಲ್ಲಿ ಜನರು ರಜೆ ಸಿಕ್ಕರೆ ಸಾಕು ಕುಟುಂಬ ಪರಿವಾರ ಸಮೇತರಾಗಿ ಪ್ರವಾಸಕ್ಕೆ ಹೋಗಿ ರಿಫ್ರೆಶ್ ಆಗಿಬರಲು ಯೋಚಿಸುತ್ತಾರೆ. ಹೇಗೂ ಚುನಾವಣೆಯ ರಜೆ ಜೊತೆಗೆ ಶನಿವಾರ ಹಾಗೂ ಭಾನುವಾರವೂ ರಜೆ ಸಿಕ್ಕಿದ್ದೇ ಆದಲ್ಲಿ ಮತದಾನ ಮರೆತು ಮೂರು ದಿನಗಳ ಕಾಲ ಪ್ರವಾಸಕ್ಕೆ ಪ್ಲಾನ್ ಮಾಡುತ್ತಾರೆ ಇಲ್ಲವೇ ತಮ್ಮ ಸ್ವಂತ ಊರುಗಳಿಗೆ ಹೋಗುತ್ತಾರೆ. ಜನರ ಮನಸ್ಥಿತಿ ಗೊತ್ತಿದ್ದೂ ವಾರಾಂತ್ಯದಲ್ಲೇ ಚುನಾವಣಾ ದಿನಾಂಕವನ್ನು ನಿಗದಿ ಪಡಿಸಿದ್ದೂ ಸಹ ಚುನಾವಣಾ ಆಯೋಗದ ತಪ್ಪು. ವಾರದ ಮಧ್ಯದಲ್ಲಿ ಮತದಾನದ ದಿನ ಇದ್ದಿದ್ದೇ ಆದರೆ ಇನ್ನೊಂದಿಷ್ಟು ಮತ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇತ್ತು.

ಉರಿಬಿಸಿಲಲ್ಲಿ ಮತದಾನ ?

ಚುನಾವಣಾ ಆಯೋಗವು ಕಡು ಬೇಸಿಗೆಯ ಉರಿ ಬಿಸಿಲಿನ ದಿನಗಳಲ್ಲಿ ಮತದಾನಕ್ಕೆ ದಿನ ನಿಗದಿ ಮಾಡುತ್ತದೆ. ಈ ಸಲ ಬೆಂಗಳೂರಲ್ಲಿ ದಾಖಲೆಯ ಬಿಸಿಲು. ಮನೆ ಬಿಟ್ಟು ಹೊರಗೆ ಹೋಗಿ ಬರುವುದು ಮಹಿಳೆಯರಿಗೆ, ವೃದ್ಧರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಅಸಾಧ್ಯ. ಮನೆಯಿಂದ ಕರೆದುಕೊಂಡು ಹೋಗಿ ಮತದಾನ ಮಾಡಿಸಿ ಮರಳಿ ಮನೆಗೆ ಬಿಡುವ ಉಚಿತ ಸಾರಿಗೆ ವ್ಯವಸ್ಥೆಯನ್ನಾದರೂ ಚುನಾವಣಾ ಆಯೋಗ ಮಾಡಿದ್ದರೆ ಇನ್ನೂ ಒಂದಿಷ್ಟು ಮತದಾನ ಹೆಚ್ಚಾಗುತ್ತಿತ್ತು. ಬೆಂಗಳೂರಲ್ಲಿ ಬಾಡಿಗೆದಾರರು ಮನೆ ಬದಲಾಯಿಸುತ್ತಲೇ ಇರುತ್ತಾರೆ. ಎಲ್ಲರಿಗೂ ಮತದಾನದ ದಿನ ಬೆಂಗಳೂರಿನಾದ್ಯಂತ ಓಟರ್ ಐಡಿ ಆಧರಿಸಿ ಉಚಿತ ಬಸ್ ವ್ಯವಸ್ಥೆ ಮಾಡಿದ್ದರೆ ದೂರದ ಬಡಾವಣೆಗೆ ಸ್ಥಳಾಂತರ ಗೊಂಡವರೂ ಬಂದು ಸಂಬಂಧಿಸಿದ ಮತಕೇಂದ್ರದಲ್ಲಿ ಓಟ್ ಮಾಡಬಹುದಾಗಿತ್ತು.

ಒಬ್ಬರಿಗೊಂದೇ ಮತ ಗುರುತಿನ ಪತ್ರ

ಬೆಂಗಳೂರಿನ ವಾಸಿಗಳು ಇಲ್ಲಿಯೂ ಓಟರ್ ಐಡಿ ಹೊಂದಿದ್ದು ಅವರ ಸ್ವಂತ ಊರುಗಳಲ್ಲೂ ಇನ್ನೊಂದು ಓಟರ್ ಗುರುತಿನ ಚೀಟಿ ಹೊಂದಿರುತ್ತಾರೆ. ಎರಡೂ ಕಡೆ ಓಟರ್ ಲಿಸ್ಟಲ್ಲಿ ಹೆಸರು ದಾಖಲಾಗಿರುತ್ತದೆ. ಸ್ವಂತ ಊರಿನ ರಾಜಕಾರಣಿಗಳ ಒತ್ತಾಯದ ಅಥವಾ ಆಮಿಷದ ಕರೆಯ ಮೇರೆಗೆ ಓಟ್ ಹಾಕಲು ಬೆಂಗಳೂರಿನಿಂದ ಹೋಗುತ್ತಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಓಟ್ ಶೇರ್ ಕಡಿಮೆಯಾಗುತ್ತದೆ. ಮೊದಲು ಚುನಾವಣಾ ಆಯೋಗವು ಒಬ್ಬರಿಗೊಂದೇ ಓಟರ್ ಐಡಿ ಕಡ್ಡಾಯ ಮಾಡಬೇಕು. ಓಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಮತದಾರರ ಲಿಸ್ಟಲ್ಲಿ  ಒಂದು ಕಡೆ ಮಾತ್ರ ಒಬ್ಬರ ಹೆಸರಿರುವಂತೆ ನೋಡಿಕೊಳ್ಳಬೇಕು. ಆಧುನಿಕ ವೈಜ್ಞಾನಿಕ ಯುಗದಲ್ಲಿ ಇದೇನೂ ಅಸಾಧ್ಯವಲ್ಲ. ಕ್ಯು ಆರ್ ಕೋಡ್ ವ್ಯವಸ್ಥೆ ಅಳವಡಿಸಿಕೊಳ್ಳಬಹುದು. ಹೀಗೆ ಮಾಡಿದ್ದೇ ಆದರೆ ಬೆಂಗಳೂರಿನ ಒಂದು ಕೋಟಿ ಮತದಾರರಲ್ಲಿ ಕನಿಷ್ಟ 20% ಮತದಾರರ ಹೆಸರನ್ನು ತೆಗೆದು‌ ಹಾಕಬಹುದಾಗಿದೆ.

ಮತದಾರರಿಗೆ ಆಮಿಷ

ಇದು ತಪ್ಪು ಎಂದೆನಿಸಿದರೂ ಮತದಾರರಿಗೆ ಒಂದಿಷ್ಟು ಕೊಡುಗೆ, ಆಮಿಷಗಳನ್ನು ಚುನಾವಣಾ ಆಯೋಗವು ಸರಕಾರದ ಸಹಯೋಗದೊಂದಿಗೆ ಏರ್ಪಡಿಸುವುದು ಉತ್ತಮ.‌ ಮತಹಾಕಿದವರಿಗೆ ಆ ದಿನ ಉಚಿತ ಬಸ್ ಹಾಗೂ ಮೆಟ್ರೋ ಪಾಸ್ ಒದಗಿಸಬಹುದು. ನೀರು / ಕರೆಂಟ್ ಬಿಲ್‌ ನಲ್ಲಿ ಶೇಕಡಾ ಹತ್ತು ರಿಯಾಯತಿ ಕೊಡಬಹುದು. ಪ್ರಾಪರ್ಟಿ ಟ್ಯಾಕ್ಸಲ್ಲಿ 2% ವಿನಾಯತಿ ಘೋಷಿಸಬಹುದು. ಒಂದಿಷ್ಟು ರಿಯಾಯತಿ ಸಿಗುತ್ತಲ್ಲಾ ಎಂದಾದರೂ ಇನ್ನೊಂದಿಷ್ಟು ಮತಪ್ರಮಾಣ ಹೆಚ್ಚಾಗಬಹುದು.

ಮತದಾರರ ಪಟ್ಟಿ ಪರಿಷ್ಕರಣೆ

ಉರಿ ಬಿಸಿಲಲ್ಲಿ ಮತದಾನಕ್ಕೆ ಬಂದವರು

ಮರಣ ಹೊಂದಿ ಹತ್ತಾರು ವರ್ಷ ಆದವರ ಹೆಸರೂ ಸಹ ಇನ್ನೂ ಮತದಾರರ ಪಟ್ಟಿಯಲ್ಲಿರುತ್ತದೆ. ಯಾವು ಯಾವುದೊ ಕಾರಣಕ್ಕೆ ಬೇರೆ ಊರಿಗೆ ಹೋಗಿ ನೆಲೆಸಿದ ಕುಟುಂಬದವರ ಹೆಸರೂ ಓಟರ್ ಲಿಸ್ಟಲ್ಲಿರುತ್ತದೆ. ಹಲವಾರು ಜನ ಓಟರ್ ಐಡಿ ಬದಲಾವಣೆ ಮಾಡುವುದಿಲ್ಲ. ಕೆಲವಾರು ಮಹಿಳೆಯರು ಮದುವೆಯಾಗಿ ಗಂಡನ ಊರಿಗೆ ತೆರಳಿರುತ್ತಾರೆ. ಕನಿಷ್ಟ ಐದು ವರ್ಷಕ್ಕೊಮ್ಮೆ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಿಸಿ ಅರ್ಹ ಮತದಾರರ ಹೆಸರು ಮಾತ್ರ  ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ಜನಗಣತಿಯ ಹಾಗೆ ಮತದಾರರ ಗಣತಿಯನ್ನು ಮಾಡಬೇಕಿದೆ. ಅಸೆಂಬ್ಲಿ ಹಾಗೂ ಪಾರ್ಲಿಮೆಂಟ್ ಚುನಾವಣೆಗಳೂ ಸೇರಿದಂತೆ ಮೂರು ಚುನಾವಣೆಗಳಲ್ಲಿ ಮತದಾನ ಮಾಡದ ವ್ಯಕ್ತಿಗಳ ಓಟರ್ ಐಡಿ ಜೊತೆಗೆ ಆಧಾರ್ ಕಾರ್ಡನ್ನೂ ಅಮಾನತ್ತು ಗೊಳಿಸಬೇಕಿದೆ. ಆಗ ಎಲ್ಲಿದ್ದರೂ ಬಂದು ಮತದಾನ ಮಾಡುವ ಒತ್ತಡಕ್ಕೆ ಮತದಾರ ಒಳಗಾಗುತ್ತಾರೆ.

ಯಾಕೆ ಮತದಾನ ಮಾಡಬೇಕು ಎಂಬ ಪ್ರಶ್ನೆ..

ಇದರ ಜೊತೆಗೆ ನಾವು ಯಾಕೆ ಮತದಾನ ಮಾಡಬೇಕು? ಎನ್ನುವ ಪ್ರಶ್ನೆಯೂ ಕೆಲವು ಪ್ರಜ್ಞಾವಂತ ಮತದಾರರನ್ನು ಕಾಡುತ್ತದೆ. ‘ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾನ ಮಾಡಬೇಕು’ ಎನ್ನುವ ಸಿದ್ಧ ಉತ್ತರವೂ ದೊರೆಯುತ್ತದೆ. ಆದರೆ ಈ ಉತ್ತಮ ಅಭ್ಯರ್ಥಿ ಯಾರು? ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಾಟ ಮಾಡುವುದನ್ನೇ ಚುನಾವಣಾ ಪ್ರಚಾರದ ಉದ್ದೇಶ ಮಾಡಿಕೊಂಡವರಾ? ಅಡ್ಡದಾರಿಯಿಂದ ನೂರಾರು ಕೋಟಿ ಸಂಪಾದಿಸಿದ ಶ್ರೀಮಂತರಾ? ಹತ್ತಾರು ಕ್ರಿಮಿನಲ್ ಕೇಸಿರುವವರಾ? ಮತದಾರರಿಗೆ ಆಸೆ ಆಮಿಷ ತೋರಿ ಮತಗಳನ್ನು ಕೊಳ್ಳಲು ಬಯಸುವವರಾ? ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸಿ, ಧರ್ಮ ದ್ವೇಷವನ್ನು ಪ್ರೇರೇಪಿಸುವವರಾ? ಆಯ್ಕೆ ಮಾಡಿ ಕಳುಹಿಸಿದ ಜನರ ಹಿತವನ್ನು ಮರೆತು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುವವರಾ? ಯಾರು ಹಿತವರು ನಮಗೆ ಈ ಎಲ್ಲರೊಳಗೆ?

ಕಳ್ಳರು ಸುಳ್ಳರು ವ್ಯಭಿಚಾರಿಗಳು ಭ್ರಷ್ಟಾಚಾರಿಗಳು ಗೂಂಡಾಗಳು ಅಕ್ರಮ ಗಣಿಕುಳಗಳು, ಗಲಭೆಕೋರರು, ಧರ್ಮದ್ವೇಷಿಗಳು, ಜಾತಿವಾದಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವಾಗ ನನ್ನ ಪವಿತ್ರ ಮತವನ್ನು ಚಲಾಯಿಸಿ ಅಪವಿತ್ರಗೊಳಿಸುವುದು ಯಾಕೆ? ಎನ್ನುವ ಪ್ರಶ್ನೆಯೂ ಕೆಲವರನ್ನು ಕಾಡಿ ಮತದಾನದಿಂದ ದೂರ ಉಳಿಯುವಂತೆ ಮಾಡುತ್ತದೆ.

ದಾವಣಗೆರೆಯಲ್ಲಿ ಮತದಾನ ಜಾಗೃತಿಗೆ ಫ್ಯಾಶನ್‌ ಶೋ

‘ಇರುವುದರಲ್ಲಿಯೇ ಕಡಿಮೆ ಭ್ರಷ್ಟರಿಗೆ ಮತ ಹಾಕಬೇಕು’ ಎನ್ನುವ ಸಲಹೆ ಕೊಡುವವರೇ ಹೆಚ್ಚು. ಆದರೆ ಈ ಸಲ ಆಯ್ಕೆಯಾದವನ ಸಂಪತ್ತು ಮುಂದಿನ ಚುನಾವಣೆ ಹೊತ್ತಿಗೆ ಹತ್ತಾರು ಪಟ್ಟು ಹೆಚ್ಚುವುದನ್ನು ಕಂಡೂ ಅಂತಹ ಭ್ರಷ್ಟರಿಗೆ ಯಾಕೆ ಮತ ಹಾಕಬೇಕು? ಎನ್ನುವ ಸಂದೇಹ ಕಾಡದಿರದು. ಎಲ್ಲರೂ ಹೀಗೇ ಇರುವುದಿಲ್ಲವೆಂಬುದು ಸತ್ಯ. ಆದರೆ ಸತ್ಯದ ಹಾದಿಯಲ್ಲಿ ಪ್ರಾಮಾಣಿಕವಾಗಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸ್ಪರ್ಧಿಸಿದರೂ ಭ್ರಷ್ಟ ಅಭ್ಯರ್ಥಿಗಳು ಒಡ್ಡುವ ಆಸೆ ಆಮಿಷಗಳ ಭರಾಟೆಯಲ್ಲಿ ಆಯ್ಕೆಯಾಗುವ ಸಂಭವನೀಯತೆಯೂ ಇಲ್ಲ. ಗೋಪಾಲಕೃಷ್ಣ ಅಡಿಗರಂತಹ ಕವಿಗಳು, ಶಿವರಾಂ ಕಾರಂತರಂತಹ ಜ್ಞಾನಪೀಠ ಪುರಸ್ಕೃತ ಸಾಹಿತಿಗಳು ಚುನಾವಣೆಗೆ ನಿಂತು ಠೇವಣಿ ಕಳೆದುಕೊಂಡ ಉದಾಹರಣೆಗಳೂ ಬೇಕಾದಷ್ಟಿವೆ.

ಹಾಗಾದರೆ ಏನು ಮಾಡುವುದು?

ಮೊದಲು ನ್ಯಾಯಸಮ್ಮತ ಭ್ರಷ್ಟಾಚಾರ ರಹಿತ ಚುನಾವಣೆ ನಡೆಸುವ ವ್ಯವಸ್ಥೆ ಬಂದಾಗ ಮತದಾರರಿಗೆ ಒಂದಿಷ್ಟು ನಂಬಿಕೆ ಬರಬಹುದು. ಟಿ.ಎನ್.ಶೇಷನ್ ನಂತಹ ಖಡಕ್ ಚುನಾವಣಾ ಆಯುಕ್ತರು ಚುನಾವಣಾ ಆಯೋಗವನ್ನು ಮುನ್ನಡೆಸಿದಾಗ ಚುನಾವಣೆಗೂ ಒಂದಿಷ್ಟು ಮಹತ್ವ ಬರಲು ಸಾಧ್ಯ? ಆದರೆ ಹೇಗಾದರೂ ಮಾಡಿ, ಎಂತಹುದೇ ಅನ್ಯಾಯದ ಮಾರ್ಗ ಹಿಡಿದು ಅಧಿಕಾರ ಪಡೆಯಬೇಕು ಎನ್ನುವುದೇ ರಾಜಕೀಯದವರ ಉದ್ದೇಶವಾಗಿರುವಾಗ ಕೇವಲ ಮತದಾರರನ್ನು ದೂರಿ ಪ್ರಯೋಜನವಿಲ್ಲ. ಮುಕ್ತವಾದ ನ್ಯಾಯಸಮ್ಮತ ಚುನಾವಣೆಗಳು ಆಗುವವರೆಗೂ ಮತದಾರರ ನಿರಾಸಕ್ತಿ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಜನರನ್ನು ಕೇವಲ ಮತಹಾಕಿ ಅಧಿಕಾರ ಕೊಡುವ ಮೆಟ್ಟಿಲುಗಳು ಎಂದು ಭಾವಿಸುವವರೆಗೂ ಮತಹಾಕದವರನ್ನು ನಿಂದಿಸುವಂತಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸದೇ ಇರುವ ಜನಪ್ರತಿನಿಧಿಗಳಿಗಂತೂ ಮತಹಾಕದೇ ಇರುವ ಮತದಾರರನ್ನು ದೂರುವ ಹಕ್ಕಿಲ್ಲ.

‘ಮತದಾನ ಎಲ್ಲರ ಹಕ್ಕು’ ಎನ್ನುವುದು ನಿಜ. ಆದರೆ ಮತಪಡೆದು ಅಧಿಕಾರಕ್ಕೇರಿದವರ ಹಕ್ಕೇನು? ಮತದಾರರ ಹಿತ ಕಾಯುವುದಲ್ಲವೇ? ಅದನ್ನು ತಮ್ಮ ಕರ್ತವ್ಯ ಎಂದು ತಿಳಿದು ನಡೆಯುವ ಜನಪ್ರತಿನಿಧಿಗಳು ಬರುವವರೆಗೂ ನಾವ್ಯಾಕೆ ಮತದಾನ ಮಾಡಬೇಕು? ಎಂದು ಪ್ರಶ್ನಿಸುವ ಮತದಾರರಿಗೆ ಉತ್ತರಿಸುವವರು ಯಾರು? ‘ಮತದಾನ ಪ್ರಜೆಗಳ ಹಕ್ಕು’ ಎಂದು ಬೋಧಿಸುವ ಮಾಧ್ಯಮಗಳು ಮತದಾರರ ಹಿತ ಕಾಪಾಡುವುದು ಜನಪ್ರತಿನಿಧಿಗಳ ಕರ್ತವ್ಯವೆಂದು ಯಾಕೆ ಒತ್ತಾಯಿಸಬಾರದು?

ಮತದಾರರು ಮಾತ್ರ ಕಾರಣ ಹೇಗಾಗುತ್ತಾರೆ?

ಹಕ್ಕು ಬಾಧ್ಯತೆ ಕರ್ತವ್ಯ ಎನ್ನುವುದು ಏಕಪಕ್ಷೀಯ ಅಲ್ಲ. ಮತದಾರರಿಂದ ಅದನ್ನು ಬಯಸುವವರು ಆಯ್ಕೆಯಾದ ನಂತರ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಕಾಯಕವನ್ನೂ ಮಾಡಬೇಕಲ್ಲವೇ? ಅಂತಹ ಅಭ್ಯರ್ಥಿಗಳು ಸ್ಪರ್ಧಿಸುವವರೆಗೂ ಮತದಾರರು ನಿರುತ್ಸಾಹ ತೋರುತ್ತಲೇ ಇರುತ್ತಾರೆ. ಜನಹಿತ ಬಯಸುವ ಪಕ್ಷಗಳು ಬರುವವರೆಗೂ ಮತದಾರರು ಮತಗಟ್ಟೆಯಿಂದ ದೂರವಾಗುತ್ತಲೇ ಇರುತ್ತಾರೆ. ಆಗ ಎಲ್ಲರೂ ಮತಪ್ರಮಾಣ ಕಡಿಮೆಯಾಯಿತು ಎಂದು ಅವಲತ್ತುಕೊಳ್ಳುತ್ತಾರೆ. ಮತಹಾಕದವರ ಆತಂಕಗಳಿಗೆ ಉತ್ತರ ಕೊಡದೇ ಅಂತಹ ಮತದಾರರನ್ನು ನಿಂದಿಸುವ ಕೆಲಸವನ್ನು ಮತದಾನ ಮಾಡಿದ ಮತದಾರರು, ಮಾಧ್ಯಮಗಳು, ರಾಜಕೀಯ ನಾಯಕರು ಮಾಡುತ್ತಲೇ ಇರುತ್ತಾರೆ. ಇದಕ್ಕೆಲ್ಲಾ ಏನು ಪರಿಹಾರ? ಎಲ್ಲದಕ್ಕೂ ಕಾರಣ ಹೇಗಾಗುತ್ತಾರೆ ಮತದಾರರು?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಪರಿಹಾರ ಕೊಡದ ಸುಪ್ರೀಂ ತಂತ್ರ; ಸಂದೇಹದ ಸುಳಿಯಲ್ಲಿ ಮತಯಂತ್ರ

More articles

Latest article