ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಎನ್ ಡಿಎ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.
ಶಿಗ್ಗಾಂವಿಯ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಬಸವರಾಜ ಬೊಮ್ಮಾಯಿ ಹಾಗೂ ಭರತ್ ಬೊಮ್ಮಾಯಿ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ ಮಾತನಾಡಿದ ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಅಭ್ಯರ್ಥಿಯಾಗಿ ಮೊದಲ ಬಾರಿ ಹಕ್ಕು ಚಲಾಯಿಸಿದ್ದೇನೆ. ಇದು ಹೊಸ ಅನುಭವ. ಎಲ್ಲರೂ ಮತ ಚಲಾಯಿಸಬೇಕು ಎಂದು ಕೋರುತ್ತೇನೆ ಎಂದರು. ಇವರು ತಮ್ಮ ಪತಿ ಸಂಸದ ತುಕಾರಾಂ ಮತ್ತು ಮಕ್ಕಳೊಂದಿಗೆ ಆಗಮಸಿ ಮತದಾನ ಮಾಡಿದರು. ಸಂಡೂರು ಪಟ್ಟಣದಲ್ಲಿ ಸಂತೋಷ ಲಾಡ್ ಅವರ ತಾಯಿ ಶೈಲಜಾ ಎಸ್ .ಲಾಡ್ ಹಾಗೂ ಸಹೋದರಿ ಸುಜಾತಾ ಲಾಡ್ ಅವರು ಮತ ಚಲಾಯಿಸಿದರು.
ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆಯಲ್ಲಿ 70 ವರ್ಷದ ಗೌರಮ್ಮ ಎಂಬುವರು ತೆವಳಿಕೊಂಡು ಆಗಮಿಸಿ ಮತ ಚಲಾಯಿಸಿದರು. ಶಿಗ್ಗಾಂವಿಯಲ್ಲಿ ವೃದ್ದರೊಬ್ಬರು ಗಾಲಿ ಕುರ್ಚಿಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು.
ರಿನಲ್ಲಿ ಇದುವರೆಗೂ ಶೇ.10ರಷ್ಟು ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಸಂಡೂರು ಕ್ಷೇತ್ರದಲ್ಲಿ 9 ಗಂಟೆಯವರೆಗೆ ಶೇ.10.11ರಷ್ಟು ಮತದಾನವಾಗಿತ್ತು. ಶಿಗ್ಗಾಂವಿಯಲ್ಲಿ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಶೇ.10.08 ರಷ್ಟು ಮತದಾನ ನಡೆದಿತ್ತು. ಇಲ್ಲಿ ಇದುವರೆಗೂ 23,951 ಮತದಾರರು ಹಕ್ಕು ಚಲಾಯಿಸಿದ್ದಾರೆ. ಚನ್ನಪಟ್ಟಣದಲ್ಲಿ ಅಷ್ಟೊಂದು ಉತ್ಸಾಹ ಕಂಡು ಬಂದಿಲ್ಲ. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಶೇ. 8.20 ರಷ್ಟು ಮತದಾನವಾಗಿದೆ.