ದೇಶದ ಮತದಾರರ ಸಂಖ್ಯೆ 99.1 ಕೋಟಿಗೆ ಏರಿಕೆ: ಚುನಾವಣಾ ಆಯೋಗ

Most read

ನವದೆಹಲಿ: ದೇಶದಲ್ಲಿ ಕಳೆದ ವರ್ಷ ಲೋಕಸಭೆ ಚುನಾವಣೆ ನಡೆದಾಗ 96.88 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ ಈಗ 99.1 ಕೋಟಿಗೆ ಏರಿಕೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾರರ ಪಟ್ಟಿಯಲ್ಲಿ 18-29 ವಯಸ್ಸಿನ 21.7 ಕೋಟಿ ಯುವ ಮತದಾರದಿದ್ದಾರೆ. ಜತೆಗೆ ಲಿಂಗಾನುಪಾತದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದು ಮತ್ತೊಂದು ವಿಶೇಷ. 2024ರಲ್ಲಿ 1,000 ಪುರುಷರಿಗೆ 948 ಮಹಿಳೆಯರ ಸಂಖ್ಯೆ 2025ರಲ್ಲಿ 954ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮತದಾರರ ದಿನಾಚರಣೆಗೆ ಮುನ್ನ ಹೊರಡಿಸಿದ ಪ್ರಕಟಣೆಯಲ್ಲಿ ಚುನಾವಣಾ ಆಯೋಗ ತಿಳಿಸಿದೆ.

ಈ ಬೆಳವಣಿಗೆಗಳನ್ನು ನೋಡಿದರೆ ಭಾರತದಲ್ಲಿ ಮತದಾರರ ಸಂಖ್ಯೆ ಅತಿ ಶೀಘ್ರದಲ್ಲಿ 100 ಕೋಟಿಗೆ ತಲುಪುವ ಸಾಧ್ಯತೆಗಳಿವೆ. ಈ ವಿಷಯವನ್ನು ಇತ್ತೀಚೆಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇತ್ತೀಚೆಗೆ ಹೇಳಿದ್ದರು.

ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಸುದ್ದಿಗೋಷ್ಠಿಯಲ್ಲಿ ಅವರು, ಸದ್ಯ ಮತದಾರರ ಸಂಖ್ಯೆ 99 ಕೋಟಿ ದಾಟಿದೆ. ಇದು ಅತಿ ಶೀಘ್ರದಲ್ಲಿ ಶತಕೋಟಿ ದಾಟಲಿದೆ ಎಂದು ಹೇಳಿದ್ದರು.1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

More articles

Latest article