ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇದು ರಾಜ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಪಕ್ಷಷದ ಪಕ್ಷದ ಸಿದ್ಧಾಂತ ಮತ್ತು ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು ಇದಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಫಲಿತಾಂಶ ಹೊರಬಿದ್ದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ, ಆಶೀರ್ವದಿಸಿದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದ ಮತದಾರರಿಗೆ ನನ್ನ ಅನಂತ ಧನ್ಯವಾದಗಳು. ಈ ಮೂರೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿ, ವಿಧಾನಸಭೆಗೆ ಪ್ರವೇಶಿಸಿರುವ ನಮ್ಮ ಅಭ್ಯರ್ಥಿಗಳಾದ ಯಾಸೀರ್ ಅಹ್ಮದ್ ಖಾನ್ ಪಠಾಣ್, ಅನ್ನಪೂರ್ಣ ತುಕಾರಾಮ್ ಹಾಗೂ ಸಿ.ಪಿ. ಯೋಗೇಶ್ವರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಗೆಲುವಿನ ಹಿಂದಿರುವ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಅಪಾರ ಶ್ರಮವನ್ನು ಇದೇ ವೇಳೆ ನೆನೆಯುತ್ತೇನೆ. ಈ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ. ಇದು ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ-;ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಸಾಧನೆಗಳನ್ನು ನಮ್ಮ ಜನ ಬೆಂಬಲಿಸುತ್ತಲೇ ಬಂದಿದ್ದಾರೆ. ನಾನು ದಂತಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಬಗ್ಗೆ ಜನರ ಜೊತೆ ಒಡನಾಟ ಇಟ್ಟುಕೊಂಡವನು, ನಮ್ಮ ಎಲ್ಲ ಗ್ಯಾರಂಟಿ ಯೋಜನಗಳ ಫಲಾನುಭವಿಗಳು ಖುಷಿಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಧ್ಯಮಗಳ ಮೂಲಕ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ಗಿದ್ದರು. ಸಾಕ್ಷಾತ್ ಪ್ರಧಾನಿಯವರೇ ನಮ್ಮ ಗ್ಯಾರಂಟಿ ಯೋಜನೆಗಲ ಅನುಷ್ಟಾನದ ಬಗ್ಗೆ ಸುಳ್ಳು ಹೇಳಿದರು. ಮಹಾರಾಷ್ಟ್ರದಲ್ಲಿ ಸುಳ್ಳು ಜಾಹೀರಾತು ನೀಡಿದ್ದರು. ಇದಕ್ಕೆಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ ಎಂದರು.
ಆದರೆ ಕರ್ನಾಟಕದ ಜನತೆ ಕಳೆದ ನಾಲ್ಕು ದಶಕಗಳ ನನ್ನ ರಾಜಕಾರಣವನ್ನು ಕಂಡಿದ್ದಾರೆ. ಬಿಜಪೆ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳನ್ನು ಯಾರೂ ನಂಬಿಲ್ಲ. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ ಎರಡನೆಯದಾಗಿ ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರದ ಮೂಲಕ ಧಾರ್ಮಿಕ ಉನ್ಮಾದಗಳನ್ನು ಸೃಷ್ಟಿಸಿ ಜಾತಿ ಧರ್ಮಗಳ ನಡುವೆ ಒಡಕು ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಯತ್ನಿಸಿದೆ. ಕರ್ನಾಟಕದ ಜಾತ್ಯತೀತ ಮತ್ತು ಶಾಂತಿಪ್ರಿಯ ಇದನ್ನು ಒಪ್ಪಿಕೊಳ್ಳದೆ ನಮ್ಮನ್ನು ಗೆಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ದದ ಮತದಾರರ ೧೩೬ ಸ್ಥಾನಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. – ಆದರೆ ಚುನಾವಣಾ ಫಲಿತಾಂಶದ ಮರುದಿನದಿಂದಲೇ ಬಿಜೆಪಿ ಮತ್ತು ಜೆಡಿಎಸ್ ಕೂಡಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನ ಶುರುಮಾಡಿದ್ದರು. ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ನಮ್ಮ ಶಾಸಕರನ್ನು ಖರೀದಿಸುವ ದುಷ್ಟ ಪ್ರಯತ್ನ ಮಾಡಿದ್ದರು. – ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ರಾಜ್ಯದ ಜನತೆ ಸಹಿಸಿಲ್ಲ ಎನ್ನುವುದನ್ನು ಕೂಡಾ ಈ ಫಲಿತಾಂಶ ಹೇಳಿದೆ ಎಂದು ತಿಳಿಸಿದರು.
ಈ ಬಾರಿ ಬಿಜೆಪಿ, ಜೆಡಿಎಸ್ ಇಬ್ಬರೂ ಸೇರಿ ಅಪಪ್ರಚಾರ ಮಾಡಿದ್ರು. ಇಬ್ಬರೂ ಒಟ್ಟಾಗಿ ಚುನಾವಣೆ ಮಾಡಿದ್ರು. ಪಾದಯಾತ್ರೆ ಮಾಡಿದ್ದೇನು ? ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿ ನಿರಂತರವಾಗಿ ಫಲಾನುಭವಿಗಳನ್ನು ಅವಮಾನಿಸಿದರು. ಪ್ರಧಾನಿ ನರೇಂದ್ರ ಮೋದಿಯವರೂ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಸರ್ಕಾರದ ಗ್ಯಾರಂಟಿಗಳೇ ಜಾರಿ ಆಗಿಲ್ಲ ಎಂದು ಸುಳ್ಳು ಜಾಹಿರಾತನ್ನೇ ನೀಡಿತು. ನಿರಂತರ ಸುಳ್ಳು, ಅಪಪ್ರಚಾರದಲ್ಲೇ ಈ ಉಪಚುನಾವಣೆ ನಡೆಸಿದ್ದರು. ಎಲ್ಲಾ ಸುಳ್ಳು, ಅಪಪ್ರಚಾರಗಳಿಗೂ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಆರೋಪ ನನಗೆ ಬಹಳ ಬೇಸರ ಆಗಿದೆ. ನಾನು ಬಹಳ ವರ್ಷ ಅವರ ಜೊತೆಗೆ ಇದ್ದವನು. ಆದ್ರೂ ಕೂಡ, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿ, ಸಿದ್ದರಾಮಯ್ಯ ಅಹಂಕಾರ, ಸೊಕ್ಕು ಮುರಿತೀನಿ ಅಂತೆಲ್ಲಾ ಮಾತಾಡಿದರು ಎಂದರು.
ನಾನು ಮಂತ್ರಿ ಆಗಿ 40 ವರ್ಷ ಆಯ್ತು. ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೇನೆ. ಯಾವತ್ತೂ ಸೊಕ್ಕು, ಅಹಂಕಾರ ಮಾಡಿಲ್ಲ. ಜನ ಅವಕಾಶ ಕೊಟ್ಟಾಗ ಅಧಿಕಾರ ನಡೆಸಿದ್ದೇವೆ. ಸೋತಾಗ ಹೋರಾಟ ಮಾಡಿದ್ದೇವೆ. ಸಾಲದ್ದಕ್ಕೆ ದೇವೇಗೌಡರು, ಕುಮಾರಸ್ವಾಮಿ ಅವ್ರು, ನಿಖಿಲ್ ಎಲ್ರೂ ಅಳೋದು. ಅಳೋದನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೂ ಜನ ನಮಗೆ ಮತ ಹಾಕಿದ್ದಾರೆ. ಬಿಜೆಪಿಯವರು ಮತದಾರರನ್ನು ಪೆದ್ದರು ಎಂದು ಭಾವಿಸುವುದನ್ನು ನಿಲ್ಲಿಸಬೇಕು. ಪ್ರತೀ ಬಾರಿ ಮತದಾರರನ್ನು ಬಕ್ರಾ ಮಾಡಿ ಗೆಲ್ತೀವಿ ಎನ್ನುವ ಬುದ್ದಿಯನ್ನು ಬಿಜೆಪಿಯವರು ಬಿಡಬೇಕು ಎಂದರು.