ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಮತಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಂಗಳೂರು ನಗರದ ಎಪಿಎಂಎಂ ನ್ಯಾಯಾಲಯಕ್ಕೆ ದೋಷರೋಪಟ್ಟಿ ಸಲ್ಲಿಸಿದೆ. 22 ಸಾವಿರ ಪುಟಗಳ ದೋಷರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
2023ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ಮತಕಳ್ಳತನ ನಡೆದಿದೆ ಎಂದು ಆರೋಪಿಸಲಾಗಿದ್ದು, ಸುಭಾಷ್ ಗುತ್ತೇದಾರ್ ಪಾತ್ರ ಇದೆ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ
ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದ ಎಸ್ ಐಟಿ ಪ್ರಕರಣದ ತನಿಖೆ ನಡೆಸಿತ್ತು.
ಈ ಕ್ಷೇತ್ರದಲ್ಲಿ 5,994 ಮತಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಪ್ರಯತ್ನಗಳನ್ನು ನಡೆಸಲಾಗಿದೆ. ಸ್ಥಳೀಯ ಕಾಲ್ ಸೆಂಟರ್ ಒಂದರಲ್ಲಿ ಸಾವಿರಾರು ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಮತ ಕಳವಿಗೆ ಗುತ್ತೇದಾರ್ ಅವರು ಪ್ರತಿ ಮತದಾರರ ಹೆಸರನ್ನು ಡಿಲೀಟ್ ಮಾಡಲು ಹಣ ಹಣ ಪಾವತಿ ಮಾಡಿರುವುದೂ ಬೆಳಕಿಗೆ ಬಂದಿದೆ. ಎಸ್ ಐಟಿ ತಂಡ ಸುಭಾಷ್ ಅವರ ಮನೆ ಮೇಲೆ ದಾಳಿ ನಡೆಸಿದಾಗ ಲಭ್ಯವಾದ ಡಿಜಿಟಲ್ ಸಾಕ್ಷ್ಯದಿಂದ ಈ ಕೃತ್ಯ ಸಾಬೀತಾಗಿದೆ. ಬಂಧನ ಭೀತಿಯಿಂದ ಈಗಾಗಲೇ ಸುಭಾಷ್ ಗುತ್ತೇದಾರ್, ಪುತ್ರ ಹರ್ಷಾನಂದ ಜಾಮೀನು ಪಡೆದುಕೊಂಡಿದ್ದಾರೆ.
ಈ ಮಧ್ಯೆ ನಾಳೆ ಭಾನುವಾರ ದೆಹಲಿಯಲ್ಲಿ ಮತ ಕಳವು ಕುರಿತು ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿರುವುದು ಕಾಂಗ್ರೆಸ್ ಗೆ ಬಲ ನೀಡಿದೆ.

