ಸಂಸ್ಕೃತಿ ಅಧ್ಯಯನದ ಕಣಜವಾಗಿರುವ ಪತ್ರಕರ್ತ ಸಾಹಿತಿ, ಸಂಶೋಧಕ, ಹೊರನಾಡ ಕನ್ನಡಿಗ ಶ್ರೀ ಬಾಬು ಶಿವಪೂಜಾರಿಯವರು ಹಿರಿಯ ಪತ್ರಕರ್ತ, ಸಂಪಾದಕರ ನೆಲೆಯಲ್ಲಿ ಯುವವಾಹಿನಿ (ರಿ) ಸಂಸ್ಥೆಯು ಕೊಡಮಾಡುವ 2024ರ ವಿಶುಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೀಯುತರನ್ನು ಸಾಹಿತಿಗಳಾದ ಮುದ್ದು ಮೂಡುಬೆಳ್ಳೆಯವರು ಪರಿಚಯಿಸಿದ್ದಾರೆ.
ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಸಂಶೋಧನೆಗೆ ಮುಂಬಯಿ ನೀಡಿದ ಕೊಡುಗೆ ಗಮನಾರ್ಹ. ವೃತ್ತಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದುಕೊಂಡು ಪ್ರವೃತ್ತಿಯಿಂದ ಸಾಹಿತಿ, ಸಂಶೋಧಕ, ವ್ಯಾಪಕ ಓದಿನ ಪ್ರಖರ ವಾಗ್ಮಿಯಾಗಿರುವ ಬಾಬು ಶಿವಪೂಜಾರಿ ಮುಂಬೈ ಇವರು ಮುಂಬಯಿ ಮತ್ತು ಬಾರಕೂರಿನ ಹೆಮ್ಮೆಯ ಗರಿ.
ಪತ್ರಕರ್ತ, ಸಂಶೋಧಕರಾಗಿ:
ಮುಂಬಯಿ ಬಿಲ್ಲವರ ಎಸೋಸಿಯೇಶನ್‌ನ ಪ್ರತಿಷ್ಠಿತ ‘ಅಕ್ಷಯ’ ಮಾಸ ಪತ್ರಿಕೆಯ ನಿರ್ವಾಹಕ ಸಂಪಾದಕರಾಗಿ ಆರಂಭದ ಸುಮಾರು 10 ವರ್ಷ ದುಡಿದವರು. ಅದರಲ್ಲಿದ್ದಷ್ಟೂ ಕಾಲ ವಿದ್ವತ್ ಪೂರ್ಣ ಜಾನಪದೀಯ, ಸಂಶೋಧನಾತ್ಮಕ ವಿಶೇಷ ಲೇಖನಗಳನ್ನು ಬರೆದವರು. ಶ್ರೀ ನಾರಾಯಣಗುರು ಚರಿತೆಯನ್ನು ಪ್ರತೀ ತಿಂಗಳ ಅಂಕಣವಾಗಿ ಬರೆಯುತ್ತಾ ಬಂದವರು. 2002ನೇ ಇಸವಿಯಲ್ಲಿ ತನ್ನದೇ ಮಾಸಪತ್ರಿಕೆ ‘ಗುರುತು’ ಆರಂಭಿಸಿ ಎರಡು ದಶಕ ವೈಚಾರಿಕ ಪ್ರಜ್ಞೆ ಬಡಿದೆಬ್ಬಿಸುತ್ತಾ ಸಂಪಾದಕರಾಗಿ ಯಶಸ್ವಿಯಾದವರು. ಇದು ಬಿಲ್ಲವ ಜಾಗೃತಿ ಬಳಗದ ಪ್ರಕಟಣೆ. ಮುಂಬೈಯ ‘ಗುರುತು’ ಕನ್ನಡ ಮಾಸಿಕ ಮೊದಲಾಗಿ ಗುರುತಿಸಿ, ಗೌರವಿಸಿಕೊಂಡದ್ದು ಬಾಬು ಶಿವಪೂಜಾರಿ ಅವರ ವೈಚಾರಿಕ ಸಂಪಾದಕೀಯ ಬರಹಗಳಿಂದ.
ಮಾಸಪತ್ರಿಕೆ, ಪಾಕ್ಷಿಕ, ದೈನಿಕ ಯಾವುದೇ ಪತ್ರಿಕೆಯ ಸಂಪಾದಕರು ಯಾರೇ ಇರಲಿ ಅವರೆಲ್ಲರೂ ಪತ್ರಕರ್ತರು. ಪತ್ರಕರ್ತರು ವಿರಮಿಸುವ ಹಾಗಿಲ್ಲ. ಕ್ಷಣಕ್ಷಣವೂ ದೇಶವನ್ನು ಜಗತ್ತನ್ನು, ಸ್ಥಳೀಯವನ್ನು ಗಮನಿಸುತ್ತಿರ ಬೇಕಾಗುತ್ತದೆ, ಓದಬೇಕಾಗುತ್ತದೆ. ಇತಿಹಾಸ ತಿಳಿದಿರಬೇಕು. ವರ್ತಮಾನದ್ದನ್ನೂ ಮೈಯ್ಯೆಲ್ಲ ಕಣ್ಣಾಗಿ ನೋಡುತ್ತಾ, ನಾಳೆಯ ಬಗ್ಗೆ ಖಚಿತತೆ ನಿರೀಕ್ಷೆಯ ಮನಃಸ್ಥಿತಿಯವರಾಗಿರಬೇಕು. ಹೊಣೆಯರಿತ ಸಂಪಾದಕರು ಹೀಗೆಯೇ ಇರುತ್ತಾರೆಂಬುದಕ್ಕೆ ಗುರುತು ಪತ್ರಿಕೆಯನ್ನು ಎಪ್ರಿಲ್ 200೦ನೇ ಇಸವಿಯಿಂದ ಜುಲೈ ೨೦೧೫ ರವರೆಗೂ ಸುಮಾರು 15 ವರ್ಷ ಕಾಲ ನಿರಂತರ ನಡೆಸಿದ ಬಾಬು ಶಿವಪೂಜಾರಿಯವರು ನಿದರ್ಶನ. ಅವರ ಸಂಪಾದಕೀಯಗಳು, ಆಯ್ದು ಪ್ರಕಟಿಸಿದ ಲೇಖನಗಳು ಅದಕ್ಕೆ ನಿದರ್ಶನ. ಜೊತೆಗೆ ಹಿರಿಯ ಪತ್ರಕರ್ತ, ಫೋಟೋ ಜರ್ನಲಿಸ್ಟ್, ವ್ಯಂಗ್ಯ ಚಿತ್ರಕಾರ ಪಂಜು ಗಂಗೊಳ್ಳಿಯವರ ಗಮನ ಸೆಳೆಯುವ ಮುಖಪುಟ ಲೇಖನವಿರುತ್ತಿತ್ತು.
ಗುರುತು ಪತ್ರಿಕೆಯ ಪ್ರತೀ ಸಂಚಿಕೆಯಲ್ಲೂ ಬಾಬು ಶಿವಪೂಜಾರಿಯವರ ಪ್ರಬುದ್ಧ ಸಂಪಾದಕೀಯ ಲೇಖನವಿರುತ್ತಿತ್ತು. ಸ್ತ್ರೀ ಚಳವಳಿ, ಶಿಕ್ಷಣದಲ್ಲಿ ವರ್ಗಭೇದ, ಸರಳ ಬೊಜ್ಜ (ಉತ್ತರಕ್ರಿಯೆ)ವೇ ಸದ್ಗತಿಗೆ ಹೇತು, ಸತ್ತ ಸತಿ ʼಜೀವಂತವಾಗುತ್ತಿದ್ದಾಳೆ ಜಾಗ್ರತೆ!’ ಜಾರಿದ ನ್ಯಾಯಾಂಗ, ಬೆನ್ನಿಹಿನ್ ಪವಾಡಕ್ಕೆ ಬಾಗಿದ ಬುರುಡೆಗಳು, ಮಿತಿಯನ್ನು ಮೀರಿದ ನಾಗ, ಸಿಂಗಾರದ ಮದ್ರೆಂಗಿ, ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್ ಕಲಿಕೆ, ಭಾರತ ಅಮೇರಿಕಾ ಅಣು ಒಪ್ಪಂದ, ಔದ್ಯೋಗಿಕರಣಕ್ಕೆ ರೈತನ ಭೂಮಿ ಬದುಕಿನ ಬಲಿ, ವೈದ್ಯರ ಢಕ್ಕೆ ಬಲಿ ಮತ್ತು ಪಾಣಾರಾಟ.. ಹೀಗೆ ನೂರಕ್ಕೂ ಮಿಕ್ಕ ಸಂಪಾದಕೀಯ ಬರಹಗಳು. 2009ರಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಉಜಿರೆಯಲ್ಲಿ 3 ದಿನಗಳ ಐತಿಹಾಸಿಕ ವಿಶ್ವತುಳು ಸಮ್ಮೇಳನ ಏರ್ಪಟ್ಟಾಗ ಆ ಹಿನ್ನೆಲೆಯ ಗುರುತು ವಿಶೇಷಾಂಕವನ್ನು ಪ್ರಕಟಿಸಿ, ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಸಂಪಾದಕ ಬಿ.ಎಸ್. ಪೂಜಾರರು ಆ ವಿಶೇಷಾಂಕದಲ್ಲಿ ತುಳು, ತುಳುನಾಡು, ಭಾಷೆ, ಕಲೆ, ಜಾನಪದ, ಬದುಕು ಸಂಸ್ಕೃತಿಯ ಪ್ರಾಚೀನ ಅವಲೋಕನ, ವರ್ತಮಾನದ ಸ್ಥಿತಿಗತಿಗಳ ವಿಮರ್ಶೆ, ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳ ಸಂಕಲ್ಪ ಈ ಸಮ್ಮೇಳನದಿಂದ ಮೂಡಲಿ ಎಂಬ ಆಶಯ ಹೊತ್ತು ವಿಭಿನ್ನ ಜಾತಿ, ಜನಾಂಗ, ಧರ್ಮಗಳ ತಜ್ಞ ಲೇಖಕರಿಂದ ಲೇಖನಗಳನ್ನು ಬರೆಯಿಸಿ ಆ ವಿಶೇಷಾಂಕವನ್ನು ಅರ್ಥಪೂರ್ಣಗೊಳಿಸಲು ಶ್ರಮಿಸಿದ್ದರು.
2015ರಲ್ಲಿ ಪ್ರಕಟವಾದ ಹಗ್ಗಿನಹನಿ (ಪಗ್ಗುದ ಪನಿ) ಅಂಕಣ ಬರಹ ಸಂಕಲನದಲ್ಲೂ ಬಿ.ಎಸ್. ಪೂಜಾರಿಯವರ ಮಹತ್ವದ ಸಂಪಾದಕೀಯ ಬರಹಗಳಿವೆ. ಸುಮಾರು 2000ನೇ ಇಸವಿಯಿಂದ ಆಪ್ತ ಅಧ್ಯಯನಕಾರರ ತಂಡವನ್ನು ಕಟ್ಟಿಕೊಂಡು ಅವರು ಸುದೀರ್ಘ ಕಾಲ ನಡೆಸಿದ ಬಿಲ್ಲವರ ಗುತ್ತುಮನೆಗಳ ಅಧ್ಯಯನವೂ ಮೊದಲು ಗುರುತು ಪತ್ರಿಕೆಯಲ್ಲಿ ಪ್ರತೀ ತಿಂಗಳು ಅನೇಕ ವರ್ಷ ಪ್ರಕಟವಾಗುತ್ತಲೇ ಇತ್ತು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಾಬು ಶಿವಪೂಜಾರಿಯವರಿಗೆ ಹುಟ್ಟೂರು ತುಳುನಾಡಿನ ತಳಮಟ್ಟದ ಜನಜೀವನದ ಕ್ಷೇತ್ರಾಧ್ಯಯನದ ನೇರ ಜ್ಞಾನ-ಪಾಂಡಿತ್ಯವೂ ಇದೆ. ಮೇಲಾಗಿ ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನೂ ಆಳವಾಗಿ ಅಧ್ಯಯನ ಮಾಡಿರುವ ಇವರಿಗೆ ‘ಒಂದೇ ಜಾತಿ ಒಂದೇ ಧರ್ಮ, ಒಂದೇ ದೇವರು’ ಎಂದ ನಾರಾಯಣಗುರುಗಳು ಆದರ್ಶ.
ಇವರ ಕೃತಿಗಳು:
ಬಿಲ್ಲವರು ಒಂದು ಅಧ್ಯಯನ (2003), ಶ್ರೀ ನಾರಾಯಣಗುರು ವಿಜಯದರ್ಶನ (2008), ಹಗ್ಗಿನ ಹನಿ (ಸಂಪಾದಕೀಯ ಬರಹ (2015), ಶ್ರೀ ನಾರಾಯಣಗುರು ವಿಜಯ ದರ್ಶನ (ಇಂಗ್ಲೀಷ್-2009), ಅನುಸಂಧಾನ (ಅಂಕಣ ಬರಹಗಳು 2016), ಮಂದರ್ತಿ ಮೌಢ್ಯ ಸಂಹಾರ (ವೈಚಾರಿಕ-2017), ಬಿಲ್ಲವರ ಗುತ್ತು ಮನೆಗಳು (ಪ್ರಧಾನ ಸಂಶೋಧಕ-2023) – ಮುಂತಾದವು ಇವರ ಮಹತ್ವದ ಕೃತಿಗಳು.
ಬಿಲ್ಲವರು ಒಂದು ಅಧ್ಯಯನ – 2003
ಬಿಲ್ಲವರ ಭವ್ಯ ಚರಿತ್ರೆಯ ಹಲವು ಮಗ್ಗುಲುಗಳನ್ನು ಶಾಸನಗಳು, ಕೈಫಿಯತ್ತು, ಜಾನಪದ, ಐತಿಹ್ಯ, ಇತಿಹಾಸ ಗ್ರಂಥಗಳಿಂದ ಮತ್ತು ಕ್ಷೇತ್ರಕಾರ್ಯದ ಬೆಂಬಲದಿಂದ ಪರಿಪುಷ್ಟವಾಗಿ ಮೈದುಂಬಿಸಿಕೊಂಡ ಈ ಕೃತಿ ಬಾಬು ಶಿವಪೂಜಾರಿಯವರು ಮಹತ್ವದ ಸಂಶೋಧಕ ವಾಸ್ತವ ನಿಷ್ಠ ಎಂಬುದನ್ನು ಪ್ರಮಾಣೀಕರಿಸಿದೆ ಎಂಬುದನ್ನು ಹಿರಿಯ ಸಾಹಿತಿ ವಿ.ಗ. ನಾಯಕರು ಬರೆದಿದ್ದಾರೆ.
ಶ್ರೀ ನಾರಾಯಣ ಗುರು ವಿಜಯದರ್ಶನ:
2008ರಲ್ಲಿ ಪ್ರಕಟವಾದ ಈ ಸಂಶೋಧನಾ ಗ್ರಂಥ ಕನ್ನಡದಲ್ಲಿ ಈವರೆಗೆ ಬಂದಿರುವ ಗುರುಗಳ ಕುರಿತ ಕೃತಿಗಳಲ್ಲಿ ಅತ್ಯಂತ ಉಚ್ಛಸ್ತರದಲ್ಲಿ ಇರುವುದನ್ನು ಈಗಾಗಲೇ ಸಾಬೀತುಗೊಳಿಸಿದೆ. 435 ಪುಟಗಳ ಡೆಮಿ ಆಕಾರದ ಈ ಕೃತಿ ಅದಕ್ಕೂ ಹಿಂದೆ ಸುಮಾರು 12 ವರ್ಷಗಳ ಕಾಲ ಅಕ್ಷಯ ಮತ್ತು ಗುರುತು ಪತ್ರಿಕೆಗಳಿಗೆ ಮತ್ತು ಇನ್ನೂ ಹಲವು ಸ್ಮರಣ ಸಂಚಿಕೆಗಳಿಗೆ ಬರೆದ ತನ್ನ ಅಧ್ಯಯನ ಲೇಖನಗಳ ಸಾರ ಎಂಬುದಾಗಿ ಶ್ರೀ ಪೂಜಾರರು ತಮ್ಮ ಗ್ರಂಥದ ‘ಮನೋಗತ’ದಲ್ಲಿ ತಿಳಿಸುತ್ತಾರೆ.
‘ಮನುಷ್ಯನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುವುದೇ ಎಲ್ಲ ಧರ್ಮಗಳ ಉದ್ದೇಶ. ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು’ ಎನ್ನುವ ನಾರಾಯಣಗುರುಗಳ ಸರಳ ಸಂದೇಶವೇ ಅವರ ಬಗೆಗೆ ನಾನು ಅಧ್ಯಯನ ಮಾಡಲು ಪ್ರೇರಣೆ ಎನ್ನುವ ಬಾಬು ಶಿವಪೂಜಾರಿಯವರು ಕೇರಳಕ್ಕೆ ಹೋಗಿ ಹಲವು ದಿನಗಳ ಕಾಲ ನಾರಾಯಣ ಗುರುಗಳಿಗೆ ಸಂಬಂಧಿತ ಕ್ಷೇತ್ರ, ವ್ಯಕ್ತಿಗಳ ಸಂದರ್ಶನ, ಚಿತ್ರಣ, ಮಲಯಾಳಂ ಸಂಸ್ಕೃತ ಲಿಪಿ, ಗ್ರಂಥಗಳ ಅವಲೋಕನ ನಡೆಸಿದ ಸಾರವನ್ನಿಲ್ಲಿ ಮಡುಗಟ್ಟಿಸಿದ್ದಾರೆ. ಅಜ್ಞಾನ, ಅಹಂಕಾರದ ಆಚಾರ ವಿಚಾರಗಳ ಮೇಲೆ ಶಾಂತ ಸ್ಥಿತಿಯಲ್ಲೇ ಸಮರ ಸಾರಿ ಗುರು ಗಳಿಸಿದ ವಿಜಯದ ದರ್ಶನವೇ ಈ ಕೃತಿ ಶ್ರೀ ನಾರಾಯಣಗುರು ವಿಜಯದರ್ಶನ. ಗ್ರಂಥದ ಪ್ರತಿಗಳೆಲ್ಲ ಮುಗಿದಿವೆ. ಮರುವರ್ಷ 2009ರಲ್ಲಿ ಈ ಕೃತಿಯು ಶ್ರೀಮತಿ ಶಶಿಲೇಖ ಇವರಿಂದ ಆಂಗ್ಲಭಾಷೆಗೆ ಅನುವಾದಗೊಂಡು ಪ್ರಕಟವಾಗಿದೆ.
‘ಹಗ್ಗಿನ ಹನಿ’ 2001ರಿಂದ 2013ರ ವರೆಗೆ ಬಾಬು ಶಿವಪೂಜಾರಿಯವರು ಗುರುತು ಪತ್ರಿಕೆಗೆ ಬರೆದ ಸಂಪಾದಕೀಯ ಬರಹಗಳ ಆಯ್ದ ಕೃತಿ 2015ರಲ್ಲಿ ಪ್ರಕಟ.
‘ಅನುಸಂಧಾನ’ 2016: ಇದು ಸಂಶೋಧನ ಪ್ರಬಂಧಗಳ ಸಂಕಲನ, ಬೌದ್ಧಮತ, ವಿಜಯನಗರ ಅರಸರ ತುಳುಮೂಲ, ಬಾರಕೂರು, ರಕ್ತಬಲಿ ಮತ್ತು ಭಾರತೀಯ ನಾರಿ – ಇವೇ ಮುಂತಾದ ಮಹತ್ವದ ಚರ್ಚೆ ಚಿಂತನೆಗಳ ಕೃತಿ ಇದಾಗಿದೆ.
‘ಮಂದಾರ್ತಿ ಮೌಢ್ಯ ಸಂಹಾರ’ 2017 : ಮಂದಾರ್ತಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಬಿಲ್ಲವ ಕಲಾವಿದರಿಗೆ ಜಾತೀಯ ತಾರತಮ್ಯದ ಕಾರಣ ನಿಷೇಧವಿದ್ದುದರ ಪ್ರತಿಭಟನೆಯ ಹೆಜ್ಜೆಗಳ ದಾಖಲಾತಿಯೇ ಈ ಕೃತಿ.
ಗುರುತು ವಿಶ್ವ ತುಳು ಸಮ್ಮೇಳನ ವಿಶೇಷಾಂಕ: 2009ರಲ್ಲಿ ಉಜಿರೆಯಲ್ಲಿ ಏರ್ಪಟ್ಟ ವಿಶ್ವ ತುಳು ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆಗೊಂಡ ಈ ವಿಶೇಷಾಂಕವು ತುಳು, ತುಳುನಾಡಿಗೆ ಸಂಬಂಧಿತ ಮಹತ್ವದ ಲೇಖನಗಳ ಆಕರವಾಗಲು ಸಂಪಾದಕ ಶ್ರೀ ಬಾಬು ಶಿವಪೂಜಾರಿಯವರ ಸಂಸ್ಕೃತಿ ಪ್ರೀತಿಯ ಹಿರಿಮೆಯೇ ಸಾಕ್ಷಿ.
ಕುಮಾರರಾಮ ಚರಿತ್ರೆ, ವಿಜಯನಗರ ಅರಸರ ತುಳುಮೂಲ, ಯಕ್ಷಗಾನ ರಂಗದಲ್ಲಿ ಬಿಲ್ಲವರು, ಕೋಟಿ ಚೆನ್ನಯ ಯಕ್ಷಗಾನ ಪ್ರಸಂಗ, ತುಳುನಾಡ ಗರೋಡಿಗಳ ಆರಾಧನಾ ವೈಶಿಷ್ಠ್ಯ ಮುಂತಾಗಿ ಅವರ ಹತ್ತು ಹಲವು ಅಧ್ಯಯನಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.
2005ರಲ್ಲಿ “ಸಂಸ್ಕೃತಿ ಕುಂಭ” ಎಂಬ ಅಭಿನಂದನಾ ಗ್ರಂಥ ವನ್ನು ಮುಂಬಯಿ ಸಾಹಿತ್ಯ ಬಳಗ ಸಮರ್ಪಿಸಿದೆ.
2014 – ಕಾಂತಾವರ ಕನ್ನಡ ಸಂಘಕ್ಕಾಗಿ ವಿಗ ನಾಯಕರು ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಇವರ ಕುರಿತು ಬರೆದ ಕೃತಿ ‘ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ’.
ಭಾಷೆ, ಸಾಹಿತ್ಯ, ಸಂಶೋಧನಾ ಶ್ರೇಷ್ಠತೆಗಾಗಿ ಶ್ರೀಯುತರನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿದೆ. 2021ರಲ್ಲಿ ಅವರು ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷರಾಗಿದ್ದರು. 2023ರಲ್ಲಿ ಕೋಟದಲ್ಲಿ ಜರಗಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾದರು. ದುಬೈ ಬಿಲ್ಲವ ಸಂಘದಿಂದ, ಮುಂಬೈ ವಿವಿ ಯಿಂದ ಮತ್ತು ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಸಂಮಾನಿತರು.
ಅವರ ನೇತೃತ್ವದಲ್ಲಿ ಎರಡು ದಶಕಗಳ ಕಾಲ ನಡೆದ ಕ್ಷೇತ್ರಾಧ್ಯಯನ ‘ಬಿಲ್ಲವರ ಗುತ್ತುಮನೆಗಳು’ ಸಂಶೋಧನ ಗ್ರಂಥ 2023ರಲ್ಲಿ ಮಂಗಳೂರಿನಲ್ಲೂ, ಮುಂಬಯಿಯಲ್ಲೂ ಸಮಾಜದ ಸಮಕ್ಷಮ ಬಿಡುಗಡೆಗೊಂಡಿತು.
ಔದ್ಯಮಿಕ, ಕೌಟುಂಬಿಕ ವಿವರ:
ಇಂತಹ ಸಂಸ್ಕೃತಿ ಅಧ್ಯಯನದ ಕಣಜವಾಗಿರುವ ಪತ್ರಕರ್ತ ಸಾಹಿತಿ, ಸಂಶೋಧಕ ಶ್ರೀ ಬಾಬು ಶಿವಪೂಜಾರಿಯವರು ಹಿರಿಯ ಪತ್ರಕರ್ತ, ಸಂಪಾದಕರ ನೆಲೆಯಲ್ಲಿ ಯುವವಾಹಿನಿ (ರಿ) ಸಂಸ್ಥೆಯು ಕೊಡಮಾಡುವ 2024ರ ವಿಶುಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಾರಕೂರು ಬಾಳೆಹಿತ್ಲುವಿನ ನರ್ಸಿಪೂಜಾರಿ-ಶಿವಪೂಜಾರಿ ದಂಪತಿಯ ಒಂಭತ್ತು ಮಕ್ಕಳಲ್ಲಿ ಎರಡನೆಯವರಾಗಿ ದಿನಾಂಕ 15-05-1948ರಲ್ಲಿ ಜನನ. ಊರಲ್ಲಿ ಏಳನೇ ತರಗತಿಯ ಶಿಕ್ಷಣದ ಬಳಿಕ ಮುಂಬಯಿ ಸೇರಿ, ಮೊದಲು ಹೊಟೇಲ್ ಕಾರ್ಮಿಕರಾಗಿ ಬಳಿಕ ಪಡುಕೋಣೆ ಸುರೇಶ್ ಪೂಜಾರಿಯವರ ಸುಖ ಸಾಗರ್‌ನಲ್ಲಿ ಪಳಗಿ ರಾತ್ರಿ ಶಾಲೆ, ಸಿದ್ಧಾರ್ಥ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೇ ಅಪ್ರತಿಮ ವಾಗ್ಮಿಯಾಗಿ ಸಾಹಿತ್ಯಾಭ್ಯಾಸಿಯಾಗಿ ರೂಪುಗೊಂಡು, ತನ್ನದೇ ಸ್ವಂತ ಹೊಟೇಲ್ ಉದ್ಯಮ ‘ಶ್ರೀ ಸಾಗರ್’ ಆರಂಭಿಸಿದರು. ಬಾರಕೂರಿನ ಜಾರುಪೂಜಾರಿ-ಸಂಕಿ ಪೂಜಾರಿ ದಂಪತಿಯ ಪುತ್ರಿ ಪ್ರೇಮಾರವರನ್ನು ಕೈಹಿಡಿದ ಮೇಲೆ ಎಲ್ಲದಕ್ಕೂ ಸಹಧರ್ಮಿಣಿಯಾದುದಕ್ಕೋ ಏನೋ ಬಾಬು ಶಿವಪೂಜಾರಿಯವರಿಗೆ ಲಕ್ಷ್ಮಿ, ಸರಸ್ವತಿ – ಈರ್ವರೂ ಒಲಿದ ಅಪರೂಪ ಭಾಗ್ಯ.
ಮುದ್ದು ಮೂಡುಬೆಳ್ಳೆ
ಸಾಹಿತಿಗಳು
ಇದನ್ನೂ ಓದಿ–ಹೆಸರಾದ ಕರ್ನಾಟಕದಲ್ಲಿ ಚೈತನ್ಯದುಸಿರಾಗಲಿ ಕನ್ನಡ