Thursday, December 12, 2024

ನಿಖಿಲ್ ಪರ ಕುಮಾರಸ್ವಾಮಿ, ಯಡಿಯೂರಪ್ಪ ಜಂಟಿ ಪ್ರಚಾರ

Most read

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಜಂಟಿಯಾಗಿ ಪ್ರಚಾರ ನಡೆಸಿದರು.


ತಾಲ್ಲೂಕಿನ ಸೋಗಾಲದಲ್ಲಿ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿದ ಇಬ್ಬರೂ ನಾಯಕರು, ನಿಖಿಲ್‌ಗೆ ಮತ ಹಾಕುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ನಾನು ಮತ್ತು ಕುಮಾರಸ್ವಾಮಿ ಒಗ್ಗೂಡಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ಧೇವೆ. ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಸೈಕಲ್, ಹಿರಿಯ ನಾಗರೀಕರಿಗಾಗಿ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೊಳಿಸಿದ್ದನ್ನು ನೆನಪಿಸಿದರು. ನಿಮಗೆ ಕೈಜೋಡಿಸಿ ಪ್ರಾರ್ಥಿಸುವೆ. ಕುಮಾರಸ್ವಾಮಿ ಅವರ ಪುತ್ರನನ್ನು ಗೆಲ್ಲಿಸಿ ಕೊಡಿ ಎಂದು ಕೋರಿದರು.


ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ನಾವು ರಾಜ್ಯದಿಂದ 6 ಸಾವಿರ ರೂ. ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ನಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ಧೇವೆ. ನಿಖಿಲ್ ಅವರಿಗೆ ನೀವು ಆಶೀರ್ವಾದ ಮಾಡಿ, ಮತ್ತಷ್ಟು ಸೇವೆಗೆ ಅವಕಾಶ ಕಲ್ಪಿಸಬೇಕು ಎಂದರು.


ಕುಮಾರಸ್ವಾಮಿ ಮಾತನಾಡಿ, ನಿಖಿಲ್ ಸ್ಪರ್ಧೆ ದೇವರ ಇಚ್ಛೆ. 2018ರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಒತ್ತಡದಿಂದಾಗಿ ಅವರಿಗೆ ಗೌರವ ಕೊಟ್ಟು ಇಲ್ಲಿಗೆ ಬಂದೆ. ನಾನು ನಾಮಪತ್ರ ಸಲ್ಲಿಸಿದರೂ ನೀವೇ ಚುನಾವಣೆ ಮಾಡಿ ಗೆಲ್ಲಿಸಿದ್ದನ್ನು ಮರೆಯಲಾರೆ ಎಂದು ಹೇಳಿದರು.


ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದರಿಂದ ಹಾಗೂ ಮಂಡ್ಯದಲ್ಲಿ ಕುಸಿದಿದ್ದ ಪಕ್ಷವನ್ನು ಮೇಲಕ್ಕೆತ್ತಲು ಅಲ್ಲಿ ಸ್ಪರ್ಧೆ ಮಾಡಬೇಕಾಯಿತು. ಅವರು ಅಭಿಮಾನದಿಂದ ಗೆಲ್ಲಿಸಿ ದೆಹಲಿಗೆ ಕಳಿಸಿದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಯೋಗೇಶ್ವರ್ ನನ್ನ ಬಳಿ ಬಂದು ಟಿಕೆಟ್ ಕೇಳಿದರು. ಆಗ, ನಾನು ನಿಖಿಲ್ ನಿಲ್ಲಿಸುವ ಮಾತೇ ಇಲ್ಲ. ಕ್ಷೇತ್ರದ ಜನರ ವಿಶ್ವಾಸ ಗಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದೆ ಎಂದರು.
ಯಡಿಯೂರಪ್ಪ ಆಶೀರ್ವಾದದಿಂದ ಯೋಗೇಶ್ವರ್ ನಾಯಕರಾದರು.

ಸದಾನಂದಗೌಡರು17 ಕೆರೆಗಳಿಗೆ ನೀರು ತುಂಬಿಸಲು ಅನುದಾನ ನೀಡಿದರು. ಇಗ್ಗಲೂರು ಜಲಾಶಯವನ್ನು ದೇವೇಗೌಡರು ಕಟ್ಟದೆ ಹೋಗಿದ್ದರೆ ಕೆರೆಗಳಿಗೆ ಹೇಗೆ ನೀರು ಬರುತ್ತಿತ್ತು ಎಂದು ಪ್ರಶ್ನಿಸಿದರು. ನಿಖಿಲ್ ನನ್ನು ನಿಮ್ಮ ಮಡಿಲಿಗೆ ಹಾಕುತ್ತೇನೆ. ನಾನು ದೇಶ ಸುತ್ತಿದರೆ ಆತ ಇಲ್ಲಿಯೇ ಇದ್ದು ನಿಮ್ಮ ಸೇವೆ ಮಾಡುತ್ತಾನೆ ಆದ್ದರಿಂದ ಆತನನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

More articles

Latest article