ಬ್ರಿಡ್ಜ್ ಟೌನ್ (ಬಾರ್ಬಡಸ್): ಟೀಕೆ, ನಿಂದನೆ, ಅಪಮಾನ, ಅಪಹಾಸ್ಯ… ಇದನ್ನೆಲ್ಲ ಮೆಟ್ಟಿ ನಿಲ್ಲುವುದು ಅಷ್ಟು ಸುಲಭವಲ್ಲ. ಕೊಹ್ಲಿ ಸೂಪರ್ ಮ್ಯಾನ್ ಅಲ್ಲ, ಯಾರೂ ಸೂಪರ್ ಮ್ಯಾನ್ ಗಳಲ್ಲ. ವೈಫಲ್ಯಗಳು ಸಹಜ. ಆದರೆ ಎದ್ದು ನಿಲ್ಲಲೇಬೇಕಾದಾಗ ಗಟ್ಟಿಯಾಗಿ ನಿಂತು ನಾನಿದ್ದೇನೆ ಎಂದು ಹೇಳುವುದು ವಿರಾಟ್ ಕೊಹ್ಲಿಯಂಥವರಿಗೆ ಮಾತ್ರ ಸಾಧ್ಯ.
ವಿಶ್ವಕಪ್ ಟೂರ್ನಿಯುದ್ದಕ್ಕೂ ಸತತ ವೈಫಲ್ಯ ಕಂಡಿದ್ದ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಸೆಮಿಫೈನಲ್ ನಂತರ ಪ್ರಶ್ನೆ ಕೇಳಿದಾಗ ನಾಯಕ ರೋಹಿತ್ ಶರ್ಮ, ಬಹುಶಃ ಅವರು ಫೈನಲ್ ಗಾಗಿ ತಮ್ಮ ಆಟ ಕಾಯ್ದಿರಿಸಿದ್ದಾರೆ ಎಂದಿದ್ದರು. ಕೋಚ್ ರಾಹುಲ್ ದ್ರಾವಿಡ್ ಕೂಡ ಹಾಗೇ ಹೇಳಿದ್ದರು.
ಕೋಚ್ ಮತ್ತು ನಾಯಕ ತನ್ನ ಮೇಲಿಟ್ಟ ನಂಬಿಕೆಯನ್ನು ವಿರಾಟ್ ಕೊಹ್ಲಿ ಉಳಿಸಿಕೊಂಡುಬಿಟ್ಟರು. ಮೊದಲ ಓವರ್ ನಲ್ಲೇ ಮೂರು ಬೌಂಡರಿ ಸಿಡಿಸಿ ಆಕ್ರಮಣಕಾರಿಯಾಗಿದ್ದ ಕೊಹ್ಲಿ ಒಂದಾದ ಮೇಲೊಂದು ವಿಕೆಟ್ ಪತನವಾಗುತ್ತಿದ್ದಂತೆ ಮಂದಗತಿಗೆ ಹೊರಳಿದರು. ರೋಹಿತ್, ರಿಷಬ್ ಪಂಥ್, ಸೂರ್ಯಕುಮಾರ್ ವಿಕೆಟ್ ಕಳೆದುಕೊಂಡಿದ್ದ ತಂಡದ ಇನ್ನಿಂಗ್ಸ್ ಅನ್ನು ಸಂಭಾಳಿಸಿಕೊಂಡು ಆಡುವವರು ಬೇಕಿತ್ತು. ಒಂದು ಬದಿಯಲ್ಲಿ ವಿಕೆಟ್ ಉಳಿಸಿಕೊಂಡು ಕೊನೆಯವರೆಗೆ ಆಡಬೇಕು ಎಂಬ ಸಂದೇಶ ಕೊಹ್ಲಿಗೆ ನೀಡಲಾಗಿತ್ತು. ಇದನ್ನು ಸ್ವತಃ ರೋಹಿತ್ ಶರ್ಮಾ ಪಂದ್ಯದ ನಂತರ ಬಹಿರಂಗಪಡಿಸಿದರು.
ಒಂದು ಕಡೆ ಅಕ್ಷರ್ ಪಟೇಲ್, ಶಿವಂ ದುಬೆ ಅವರುಗಳಿಗೆ ಬ್ಯಾಟ್ ಬೀಸಿ ರನ್ ರೇಟ್ ಹೆಚ್ಚಿಸುವ ಹೊಣೆ ನೀಡಲಾಗಿತ್ತು. ಅವರು ತಮಗೆ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಇನ್ನೊಂದೆಡೆ 48 ಎಸೆತಗಳಲ್ಲಿ ಅರ್ಧ ಸೆಂಚುರಿ ಗಳಿಸಿದ ಕೊಹ್ಲಿ ಬ್ಯಾಟ್ ಎತ್ತಿ ಸಂಭ್ರಮಿಸಲೂ ಇಲ್ಲ. ಅವರಿಗೆ ಗೊತ್ತಿತ್ತು, ರನ್ ಗತಿಯನ್ನು ಹೆಚ್ಚಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರಷ್ಟೇ ಈ ಅರ್ಧಶತಕಕ್ಕೆ ಅರ್ಥ ಅನ್ನುವುದು. ಕೊಹ್ಲಿ ಎರಡು ಅದ್ಭುತ ಸಿಕ್ಸರ್ ಹೊಡೆದರು. ಔಟಾಗುವಾಗ ಅವರ ಸ್ಕೋರಿಂಗ್ ರೇಟ್ 130ರ ಹತ್ತಿರ ತಲುಪಿತ್ತು. 59 ಎಸೆತಗಳಲ್ಲಿ 76 ರನ್ ಗಳಿಸಿದ ಕೊಹ್ಲಿ ಭಾರತ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.
ಭಾರತದ ವಿಶ್ವಕಪ್ ಗೆಲುವಿನ ನಂತರ ಮ್ಯಾನ್ ಆಫ್ ದಿ ಮ್ಯಾಚ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಅವರಿಗೂ ಕೊಡಬಹುದಿತ್ತು. ಆದರೆ ವೇಗದ ಬೌಲರ್ ಗಳಿಗೆ ಆಡಲು ಕಷ್ಟವಾಗಿದ್ದ, ಅದ್ಭುತ ಬೌಲಿಂಗ್ ಪಡೆಯನ್ನು ಹೊಂದಿರುವ ದಕ್ಷಿಣ ಆಫ್ರಿಕ ಎದುರು 76 ರನ್ ಗಳಿಸಿದ್ದು ಪಂದ್ಯದ ದೃಷ್ಟಿಯಿಂದ ನಿರ್ಣಾಯಕವಾಗಿತ್ತು. ಹೀಗಾಗಿಯೇ ಕೊಹ್ಲಿಗೆ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಒಲಿದು ಬಂದಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡುವಾಗ ಕೊಹ್ಲಿ ಭಾವುಕರಾಗಿದ್ದರು. ಭಾರತದ ಪರವಾಗಿ ಇದು ನನ್ನ ಕೊನೆಯ ಟಿ 20 ಪಂದ್ಯ, ವಿಶ್ವಕಪ್ ಪಂದ್ಯಾವಳಿಯಲ್ಲೂ ಇದು ನನಗೆ ಕೊನೆಯ ಪಂದ್ಯ ಎಂದು ಘೋಷಿಸಿಬಿಟ್ಟರು. ನಿವೃತ್ತಿ ಘೋಷಣೆಗೆ ಇದಕ್ಕಿಂತ ದೊಡ್ಡ ಸಂದರ್ಭ ಇನ್ನೇನಿರಲು ಸಾಧ್ಯವಿತ್ತು? ನಿವೃತ್ತಿಯ ಬಗ್ಗೆ ಹೇಳುವಾಗಲೂ ಕೊಹ್ಲಿ, ಭಾರತದ ಹೊಸ ಪೀಳಿಗೆಯ ಆಟಗಾರರ ಬಗ್ಗೆ ಮಾತಾಡಿದರು. ಹೊಸ ಹುಡುಗರು ಭಾರತ ಕ್ರಿಕೆಟನ್ನು ಮುನ್ನಡೆಸಲಿದ್ದಾರೆ ಎಂದರು. ODI ವಿಶ್ವಕಪ್ ಗೆದ್ದಾಗ ಸಚಿನ್ ತೆಂಡೂಲ್ಕರ್ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದಂತೆ ನಿಮ್ಮನ್ನು ಹೊತ್ತು ಗೌರವ ನೀಡಬೇಕೆಂದು ಬಯಸುವಿರಾ ಎಂದಾಗ ಕೊಹ್ಲಿ ಮತ್ತಷ್ಟು ವಿನೀತರಾದರು. ಇಲ್ಲ, ಇದು ನನ್ನೊಬ್ಬನ ಪ್ರಶ್ನೆ ಅಲ್ಲ. ನಾನು ಆರು ಪಂದ್ಯಾವಳಿ ಆಡಿದ್ದೇನೆ, ರೋಹಿತ್ ಒಂಭತ್ತರಲ್ಲಿ ಆಡಿದ್ದಾನೆ. ಅವನಿಗೂ ಈ ಗೆಲುವು ಬೇಕಿತ್ತು. ನಮ್ಮೆಲ್ಲರಿಗೂ ಬೇಕಿತ್ತು ಎಂದರು.
ವಿರಾಟ್ ಕೊಹ್ಲಿ ಭಾರತದ ಪರ ಟಿ ಟ್ವಿಂಟಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರಷ್ಟೆ. ಒನ್ ಡೇ ಮತ್ತು ಟೆಸ್ಟ್ ಮಾದರಿಗಳಲ್ಲಿ ಅವರು ಆಡಲಿದ್ದಾರೆ, ಕನಿಷ್ಠ ಎರಡು ವರ್ಷಗಳಾದರೂ ಆಡಲಿ ಎಂಬುದು ಅಭಿಮಾನಿಗಳ ಬಯಕೆ.
ಭಾರತ ಸುನೀಲ್ ಗಾವಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿಯಂಥ ಸರ್ವಶ್ರೇಷ್ಠ ಆಟಗಾರರನ್ನು ಕಂಡಿದೆ. ವಿರಾಟ್ ಕೊಹ್ಲಿ ಆಡುವಾಗಲೇ ಈ ಪಟ್ಟಿ ಸೇರಿಬಿಟ್ಟಿದ್ದಾರೆ, ದಂತಕಥೆಯಾಗಿ ಹೋಗಿದ್ದಾರೆ. ಅಹಂಕಾರಿ, ತನಗಾಗಿ ಆಡುವ ಸ್ವಾರ್ಥಿ, ಮಂದಗತಿಯಲ್ಲಿ ಆಡುವ ಆಟಗಾರ ಎಂದು ಹೇಳುವವರಿಗೆ ತಮ್ಮ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ವಿಶ್ವಕಪ್ ಫೈನಲ್ ಅನ್ನೂ ಜಯಿಸಿಕೊಟ್ಟಿದ್ದಾರೆ. ನಿಜವಾದ ಚಾಂಪಿಯನ್ ತಾನು ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.
ಕೊಹ್ಲಿಯ ದೊಡ್ಡತನ ಏನೆಂದರೆ ತನ್ನ ಆಟವನ್ನಲ್ಲದೆ, ಜೊತೆಯ ಆಟಗಾರರ ಆಟವನ್ನೂ ಸಂಭ್ರಮಿಸುವುದು. ಯಾರೇ ವಿಕೆಟ್ ತೆಗೆದರೂ ಕೊಹ್ಲಿ ಬೌಲರ್ ಗಿಂತ ಹೆಚ್ಚು ಸಂಭ್ರಮಿಸುತ್ತಾರೆ. ಇದೇ ಕಾರಣಕ್ಕೆ ಟ್ರಾಲ್ ಕೂಡ ಆಗಿದ್ದಾರೆ. ಜೊತೆಗೆ ಆಡುವ ಆಟಗಾರ ನೂರು ಹೊಡೆದರೆ, ತಾನೇ ಹೊಡೆದಷ್ಟು ಕುಣಿದಾಡುತ್ತಾರೆ.
ಮಹಮದ್ ಶಮಿ ವಿರುದ್ಧ ಬಲಪಂಥೀಯ ಟ್ರಾಲ್ ಪಡೆ ಮುಗಿಬಿದ್ದಾಗ ಕೊಹ್ಲಿ ಆಡಿದ ಮಾತುಗಳನ್ನು ಯಾರು ಮರೆಯಲು ಸಾಧ್ಯ? ಇದಕ್ಕಾಗಿ ಆತ ಅದೆಷ್ಟೋ ನಿಂದನೆಗಳನ್ನು ಕೇಳಬೇಕಾಯಿತು. ಕಳೆದ ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯಗೆ ರೋಹಿತ್ ಶರ್ಮಾ ಅಭಿಮಾನಿಗಳು ನಿಂದಿಸುತ್ತಿದ್ದಾಗ, ಹಾಗೆಲ್ಲ ಮಾಡಬೇಡ್ರೋ, ಅವನು ದೇಶಕ್ಕೆ ಆಡುವ ಆಟಗಾರ ಎಂದು ಬಾಯಿ ಮುಚ್ಚಿಸಿದ್ದೂ ವಿರಾಟ್ ಕೊಹ್ಲಿ. ನಿನ್ನೆ ಗೆದ್ದ ಸಂಭ್ರಮದಲ್ಲಿ ಮುಳುಗಿದ್ದಾಗ ಕೋಚ್ ರಾಹುಲ್ ದ್ರಾವಿಡ್ ಕೈಗೆ ವಿಶ್ವಕಪ್ ಕೊಟ್ಟ ದೃಶ್ಯ ಕಣ್ಣಿಗೆ ಹಬ್ಬ.
ಕೊಹ್ಲಿಯ ಇತ್ತೀಚಿನ ಸಂದರ್ಶನವೊಂದರಲ್ಲಿ ನಿಮ್ಮ ಸಂಘರ್ಷದ ದಿನಗಳು, ನೀವು ಪಟ್ಟ ಕಷ್ಟಗಳ ಬಗ್ಗೆ ಹೇಳಿ ಅಂತೇನೋ ಕೇಳಲಾಗಿತ್ತು. ಕೊಹ್ಲಿ ಏನಂದರು ಗೊತ್ತೆ? ನಾನು ಅದೃಷ್ಟವಂತ, ಎಲ್ಲ ಸವಲತ್ತುಗಳೂ ನನಗಿದೆ. ನಾನು ಜಿಮ್ ನಲ್ಲಿ ಬೆವರು ಹರಿಸುವುದು ನನಗಾಗಿ. ಯಾರೂ ಹಾಗೆ ಮಾಡು ಎಂದು ನನಗೆ ಹೇಳಿಲ್ಲ. ನನ್ನ ಜೀವನದಲ್ಲಿ ಆಗಿರುವುದು ಸಂಘರ್ಷ-ಕಷ್ಟ ಯಾವುದೂ ಅಲ್ಲ. ಯಾರಿಗೆ ಎರಡು ಹೊತ್ತಿನ ಊಟವಿರೋದಿಲ್ಲವೋ, ಯಾರ ತಲೆಯ ಮೇಲೆ ಒಂದು ಸೂರೂ ಇರುವುದಿಲ್ಲವೋ ಅವರದು ನಿಜವಾದ ಸಂಘರ್ಷದ ಬದುಕು!
ಕೊಹ್ಲಿ ಅವರ ಟ್ವಿಟರ್ ಬಯೋದಲ್ಲಿ A proud husband and father. ಅಷ್ಟು ಹೇಳಿದರೆ ಸಾಲದು, ಕೊಹ್ಲಿ ಭಾರತದ ಹೆಮ್ಮೆ, ಕ್ರಿಕೆಟ್ ನ ಹೆಮ್ಮೆ. ಅಭಿಮಾನಿಗಳ ಹೆಮ್ಮೆ.