ಹೊಸದಿಲ್ಲಿ: ಕುಸ್ತಿಪಟು ವಿನೇಶಾ ಪೋಗಟ್ ಚಿನ್ನದ ಪದಕದಿಂದ ವಂಚಿತರಾದರೂ ಕೋಟ್ಯಂತರ ಭಾರತೀಯರ ಹೃದಯಗಳನ್ನು ಗೆದ್ದರು. ನ್ಯಾಯಯುತವಾಗಿಯೇ ಫೈನಲ್ ತಲುಪಿದ್ದರಿಂದ ತನಗೆ ಬೆಳ್ಳಿಯ ಪದಕವನ್ನಾದರೂ ಕೊಡಬೇಕು ಎಂದು ವಿನೇಶಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆದು ತೀರ್ಪು ಇಂದಷ್ಟೇ ಬರಬೇಕಿದೆ. ಅದಕ್ಕೂ ಮುನ್ನವೇ ಈ ಬಾರಿ ಒಲಿಪಿಂಕ್ಸ್ ನಡೆದ ಪ್ಯಾರಿಸ್ ಒಲಿಂಪಿಕ್ ಗ್ರಾಮದಿಂದ ಹೊರನಡೆದ ವಿನೇಶಾ ಭಾರತದೆಡೆಗೆ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ಪ್ಯಾರಿಸ್ ಒಲಿಂಪಿಕ್ಸ್ ನ ಸಮಾರೋಪ ನಡೆಯಿತು. ಇಂದು The Court of Arbitration for Sport (CAS) ವಿನೇಶಾ ಕುರಿತ ತೀರ್ಪನ್ನು ನೀಡಲಿದೆ. ತನಗೆ ಜಂಟಿಯಾಗಿ (ಈಗಾಗಲೇ ಬೆಳ್ಳಿ ಪದಕ ಗೆದ್ದ ಆಟಗಾರ್ತಿಯೊಂದಿಗೆ) ಬೆಳ್ಳಿ ಪದಕ ನೀಡಬೇಕು ಎಂದು ಸಿಎಎಸ್ ಮುಂದೆ ವಿನೇಶಾ ಮನವಿ ಸಲ್ಲಿಸಿದ್ದರು.
ಸರಿಯಾಗಿ ಒಂದು ವಾರದ ಹಿಂದೆ ವಿಶ್ವ ನಂ 1 ಆಟಗಾರ್ತಿ ಜಪಾನ್ ನ ಯೂಯಿ ಸುಸಾಕಿಯನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಭಾರತದ ವಿನೇಶಾ ಪೋಗಟ್ 50 ಕೆಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ನಂತರ ಅದೇ ದಿನ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಗಳನ್ನು ಸಲೀಸಾಗಿ ಗೆದ್ದು ಫೈನಲ್ ತಲುಪಿದ್ದರು. ಫೈನಲ್ ಗೆದ್ದು ಚಿನ್ನದ ಪದಕ ಕೊರಳಿಗೇರಿಸಿಕೊಳ್ಳುವ ಫೇವರಿಟ್ ಆಗಿದ್ದರು.
ಆದರೆ ಫೈನಲ್ ಪಂದ್ಯದ ದಿನ ವಿನೇಶಾ ತೂಕ ನೂರು ಗ್ರಾಂ ಹೆಚ್ಚಾದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹತೆ ಮಾಡಲಾಯಿತು. ಅಷ್ಟೇ ಅಲ್ಲದೆ ಆಕೆಗೆ ಯಾವುದೇ ಪದಕವಿಲ್ಲದಂತೆ ಮಾಡಲಾಯಿತು. ಇದರಿಂದಾಗಿ ಭಾರತದಾದ್ಯಂತ ಆಕ್ರೋಶದ ಅಲೆಯೇ ಎದ್ದಿತು. ಅಂತಾರಾಷ್ಟ್ರೀಯ ಕುಸ್ತಿ ಆಟಗಾರರ ವಲಯದಲ್ಲೂ ಅಸಮಾಧಾನ ವ್ಯಕ್ತವಾಗಿತ್ತು. ವಿನೇಶಾಗೆ ಅನ್ಯಾಯವಾಗಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿತ್ತು.