ಬಿಜೆಪಿಯಲ್ಲಿ ವಿದೂಷಕನ ಪಾತ್ರಕ್ಕೆ ವಿಜಯೇಂದ್ರ, ಅಶೋಕ, ಛಲವಾದಿ ಪೈಪೋಟಿ: ಕಾಂಗ್ರೆಸ್ ವ್ಯಂಗ್ಯ

Most read

ಬೆಂಗಳೂರು: ಬಿಜೆಪಿಯಲ್ಲಿ ವಿದೂಷಕನ ಪಾತ್ರವನ್ನು ಯಾರು ವಹಿಸಬೇಕು ಎಂಬುದಕ್ಕೆ ಅವರಲ್ಲಿಯೇ ಪೈಪೋಟಿ ಬಿದ್ದಿದೆ. ವಿಜಯೇಂದ್ರ, ಆರ್ ಅಶೋಕ, ಛಲವಾದಿ ನಾರಾಯಣ ಸ್ವಾಮಿ ಅವರು ಈ ರೇಸ್ ಅಲ್ಲಿದ್ದಾರೆ. ತಮ್ಮಲ್ಲಿರುವ ಹುಳುಕನ್ನು ಮುಚ್ಚಿಕೊಳ್ಳಲು ಆಗದೇ ಪದೇ, ಪದೇ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.

ವಿಜಯೇಂದ್ರ ಅವರು ಯಾವುದಾದರೂ ನಾಟಕದ ಕಂಪೆನಿ ಸೇರಿ ವಿದೂಷಕನ ಪಾತ್ರ ಹಾಕಿದರೆ ಸ್ವಲ್ಪ ಜನ ಮನ್ನಣೆ ಸಿಗಬಹುದು. ಇವರು ಪತ್ರಿಕಾಗೋಷ್ಠಿ ನಡೆಸಿ ಬಜೆಟ್ ಬಗ್ಗೆ, ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ಮತ್ತು ನಮ್ಮ ನಾಯಕರನ್ನು ನೀವು ಟೀಕಿಸುವ ಅವಶ್ಯಕತೆಯಿಲ್ಲ. ನಮ್ಮ ಜನರಿಗೆ ಯಾವ ಕಾರ್ಯಕ್ರಮಗಳನ್ನು ನೀಡಬೇಕು ಎನ್ನುವ ಅರಿವು ಕಾಂಗ್ರೆಸ್ ಸರ್ಕಾರಕ್ಕಿದೆ. ಈ ಮೂರು ಜನರು ಬಿಜೆಪಿಯಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜಕೀಯದಲ್ಲಿ ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಹೇಳಿಕೊಂಡು ಬೆಳೆಯುತ್ತಿದ್ದೀರಿ. ಒಬ್ಬ ರಾಜಕಾರಣಿಯ ಪಾತ್ರವನ್ನು ವಹಿಸಿ, ಆದರೆ ವಿದೂಷಕನ ಪಾತ್ರ ಮಾತ್ರ ವಹಿಸಬೇಡಿ. ನಿಮ್ಮ ಸ್ಥಾನವನ್ನು ಮೊದಲು ಉಳಿಸಿಕೊಳ್ಳಿ. ನಿಮ್ಮ ಸಹಪಾಠಿಗಳಾದ ಯತ್ನಾಳ್ ಅವರು ನಿಮ್ಮ ಹೈಕಮಾಂಡ್ ಗೆ 9 ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಿಮ್ಮ ಬಗ್ಗೆ ಮಾಡಿರುವ ಆರೋಪಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿ. ಕರ್ನಾಟಕದ ಜನರಿಗೆ ಯತ್ನಾಳ್ ಅವರು ಮಾಡಿರುವ ಆರೋಪಗಳನ್ನು ತಿಳಿದುಕೊಳ್ಳುವ ಕುತೂಹಲವಿದೆ ಎಂದರು.

ಕಾಂಗ್ರೆಸ್ ಅಲ್ಲಿ ಕ್ಷಿಪ್ರಕ್ರಾಂತಿ ಆಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ ಅವರ ಪಕ್ಷದಲ್ಲಿ ಆಗುವ ಕ್ಷಿಪ್ರ ಕ್ರಾಂತಿಗಳನ್ನು ಅವರು ಮೊದಲು ತಡೆಯಲಿ. ಅವರು ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ದಿನದಿಂದಲೂ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ಸ್ಥಾನವೇ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷರೇ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಹ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಎಐಸಿಸಿ ಮಟ್ಟದಲ್ಲಿ ಚರ್ಚೆಯಾಗುವ ವಿಚಾರವೇ ಹೊರತು ನಮ್ಮ, ನಿಮ್ಮ ನಡುವೆ ಚರ್ಚೆಯಾಗುವ ವಿಚಾರವಲ್ಲ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರು ಲೋಕಾಯುಕ್ತ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ಅವರು ಈ ರೀತಿ ಅನುಮಾನ ವ್ಯಕ್ತಪಡಿಸುವುದರಲ್ಲಿ ಅತಿಶಯೋಕ್ತಿಯಿಲ್ಲ. ಆದರೆ ಅವರ ಮನೆಯವರ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಮನೋರೋಗವನ್ನು ಅವರು ಸರಿಪಡಿಸಿಕೊಳ್ಳಲಿ. ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಕ್ಷಿಪ್ರ ಕ್ರಾಂತಿಯಾಗಿದೆ. ಅದನ್ನು ಅವರು ಮೊದಲು ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.

More articles

Latest article