ಅಹಮದಾಬಾದ್: ಜೂನ್ 12ರಂದು ಗುಜರಾತ್ ನ ಅಹಮದಾಬಾದ್ ನಗರದ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರೂ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಸುಮಾರು25 ಲಕ್ಷ ರೂ ವೆಚ್ಚ ಮಾಡಲಾಗಿದೆ. ಇದೀಗ ಅವರ ಅಂತ್ಯಸಂಸ್ಕಾರದ ಖರ್ಚು ವೆಚ್ಚವನ್ನು ಭರಿಸಲು ಬಿಜೆಪಿ ರಾಜ್ಯ ಘಟಕ ನಿರಾಕರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ರೂಪಾನಿ ಅವರ ಅಂತ್ಯಸಂಸ್ಕಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಅಂತ್ಯಸಂಸ್ಕಾರದ ಕಾರ್ಯಕ್ರಮಕ್ಕಾಗಿ 25 ಲಕ್ಷ ಖರ್ಚು ಮಾಡಲಾಗಿದ್ದು, ಈ ವೆಚ್ಚವನ್ನು ಪಕ್ಷದ ರಾಜ್ಯ ಘಟಕ ಭರಿಸುವುದ್ಕಕೆ ಬದಲಾಗಿ ಬಿಲ್ ಅನ್ನು ಭರಿಸುವಂತೆ ಅವರ ಕುಟುಂಬಕ್ಕೆ ಕಳುಹಿಸಲಾಗಿತ್ತು. ವಿಜಯ ರೂಪಾನಿ ಅವರ ಕುಟುಂಬದ ಸದಸ್ಯರಾಗಲೀ ಅಥವಾ ಪಕ್ಷವಾಗಲೀ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಅವರೂ ಮೌನಕ್ಕೆ ಜಾರಿದ್ದಾರೆ.
ಪಕ್ಷದ ರಾಜ್ಯ ಘಟಕದಲ್ಲಿ ಎರಡು ಗುಂಪುಗಳಿರುವುದೇ ಈ ತಿಕ್ಕಾಟಕ್ಕೆ ಕಾರಣ ಎಂದು ತಿಳಿದು ಬಂದಿದೆ. ಒಂದು ಗುಂಪು ರೂಪಾನಿ ಅವರನ್ನು ಕಡೆಗಣಿಸಿತ್ತು. 2021ರಲ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲೂ ಈ ಬಣ ಯಶಸ್ವಿಯಾಗಿತ್ತು. ರೂಪಾನಿ ಅವರು 2016ರಿಂದ 2021ರವರೆಗೆ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದರು. ಮತ್ತೊಂದು ಗುಂಪು ರೂಪಾನಿ ಪರವಾಗಿತ್ತು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಗುಜರಾತ್ ಘಟಕದ ವಕ್ತಾರ ಮನೀಶ್ ದೋಷಿ, ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಇದು ರಾಜ್ಯಕ್ಕೆ ಬಿಜೆಪಿ ಮಾಡಿದ ಅವಮಾನ ಎಂದು ಹೇಳಿದ್ದಾರೆ.