ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಜಗದೀಪ್ ಧನಕರ್ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ಸರ್ಕಾರವೇ ತಿಳಿಸಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಧನಕರ್ ರಾಜೀನಾಮೆಗೆ ಕಾರಣ ಏನೆಂದು ಇದುವರೆಗೂ ತಿಳಿದಿಲ್ಲ. ಅವರ ರಾಜೀನಾಮೆ ಹಿಂದೆ ನಿಗೂಢ ಕಾರಣ ಇರುವಂತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಆದರೆ ಏಕಾಏಕಿ ಏನಾಯಿತು? ಖುದ್ದು ಆರ್‌ಎಸ್‌ಎಸ್ ಸಂಘಟನೆಯನ್ನು ಬಿಜೆಪಿಯವರಿಗಿಂತಲೂ ಹೆಚ್ಚಾಗಿ ಧನಕರ್ ಸಮರ್ಥಿಸಿಕೊಳ್ಳುತ್ತಿದ್ದರು. ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ಅವರಿಗೆ ನಿಷ್ಠೆ ಇತ್ತು. ಅವರ ರಾಜೀನಾಮೆ ಹಿಂದಿನ ಕಾರಣ ಏನು? ಯಾರ ಕೈವಾಡ ಇದೆ ಎನ್ನುವುದನ್ನು ದೇಶದ ಜನರಿಗೆ ತಿಳಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಇತಿಹಾಸದ ಬಗ್ಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ ಅವರು, ಸಂಘ ಪರಿವಾರ ಇತಿಹಾಸವನ್ನು ತಿರುಚಲು ಯತ್ನಿಸುತ್ತಿದೆ. ಜವಹರಲಾಲ್ ನೆಹರು ಬರೆದಿರುವ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವನ್ನು ಅವರು ತಿರಸ್ಕರಿಸುತ್ತಾರೆ. ಭಾರತ ಹಾಗೂ ಆರ್ ಎಸ್ ಎಸ್ ಗೆ ಪತ್ಯೇಕ ಇತಿಹಾಸ ಇದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.