ವೈದಿಕ ಹಬ್ಬಗಳು, ದೈವಗಳ ಮೂಲವು ಬೌದ್ಧ–ಜೈನ ಧರ್ಮಗಳಲ್ಲಿದೆಯೇ?

Most read

ಈಗ ನಾವು ಅನುಸರಿಸುತ್ತಿರುವ ಮೂರ್ತಿ ಪೂಜೆಯುಳ್ಳ ಹಿಂದೂ ಧರ್ಮದ ಆಚರಣೆಗಳೆಲ್ಲಾ ಮಹಾಯಾನ ಬೌದ್ಧ ಮತ್ತು ಜೈನ ಧರ್ಮಗಳಿಂದ ಶುಂಗ ಅರಸರ ಕಾಲದಲ್ಲಿ (2,200 ವರ್ಷಗಳ ಹಿಂದೆ) ಎರವಲು ಪಡೆದಿರುವುದು! ಹಾಗಾಗಿ ನಾವು ಮತ್ತೆ ದೇವಸ್ಥಾನಗಳನ್ನು ತೊರೆದು ಮೂಲ ಪ್ರಕೃತಿ ಪೂಜೆಯೆಡೆ ನಡೆದರೆ ಸಮಾಜಕ್ಕೆ ಒಳಿತಾಗಬಹುದು ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ನಾವು ಈಗ ಆಚರಿಸುವ ಪ್ರತಿಯೊಂದು ಹಿಂದೂ ಹಬ್ಬದ ಹಿಂದೆಯೂ ಒಂದೋ ಬೌದ್ಧ ಹಬ್ಬ ಅಥವಾ ಕೃಷಿ ಆಧಾರಿತ ಭಾರತದ ಮೂಲ ನಿವಾಸಿಗಳ ಹಬ್ಬದ ಹಿನ್ನೆಲೆ ಇದ್ದೇ ಇದೆ.  ಹಿಂದೂಗಳ ಎಲ್ಲಾ ಹಬ್ಬಗಳ ಹಿಂದೆ ಪುರಾಣ ಕಥೆಗಳು, ಸಂಪ್ರದಾಯ, ಸಂಸ್ಕೃತಿ, ಇತಿಹಾಸಗಳಿವೆ ಎಂದು ಹೇಳುತ್ತಾರೆ. ಆದರೆ ದಸರೆ ದೀಪಾವಳಿಯನ್ನು ಮೂಲತಃ ಮಗಧ ಸಾಮ್ರಾಜ್ಯದಲ್ಲಿ ಶುರು ಮಾಡಿದ ಸಾಮ್ರಾಟ ಅಶೋಕನ ಹೆಸರನ್ನೇ ಯಾರೂ ಉಲ್ಲೇಖಿಸುವುದಿಲ್ಲ. ಅಶೋಕನು ಕಳಿಂಗ ಯುದ್ಧದ ಭೀಕರ ರಕ್ತಪಾತದಿಂದ ಪಶ್ಚಾತ್ತಾಪ ಪಟ್ಟು ಒಂಬತ್ತು ದಿನ ಪ್ರಾಯಶ್ಚಿತ್ತ ಉಪವಾಸ ಮಾಡಿ, ನವರಾತ್ರಿಯಂದು ಅಸ್ತ್ರಶಸ್ತ್ರ ತ್ಯಜಿಸಿ, ಹತ್ತನೇ ದಿನ ಬೌದ್ಧ ಧಮ್ಮ ಸ್ವೀಕರಿಸಿದ ದಿನವೇ ದಸರೆ. ಅಂತೆಯೇ ಗೌತಮ ಬುದ್ಧನು ಜ್ಞಾನ ಪಡೆದ ದಿನವೇ ದೀಪಾವಳಿ. ಹಾಗಾಗಿ ದಸರೆ-ದೀಪಾವಳಿ ಮೂಲತಃ ಬೌದ್ಧರ ಹಬ್ಬಗಳು.

ಗೌತಮ ಬುದ್ಧನು ಗಯಾದಲ್ಲಿ ಜ್ಞಾನ ಪಡೆದು ತನ್ನ ತಂದೆಯ (ಶಾಖ್ಯ ವಂಶದವರ) ರಾಜಧಾನಿ ಕಪಿಲವಸ್ತುವಿಗೆ ಮರಳಿ ಬಂದಾಗ ಅಲ್ಲಿಯ ಜನರು ತಮ್ಮ ತಮ್ಮ ಮನೆಗಳಲ್ಲಿ ಮತ್ತು ಬೀದಿಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸಿದರಂತೆ. ಅದುವೇ ಮೊದಲ ‘ದೀಪ ಪರ್ವ’ ಅನಿಸಿಕೊಂಡಿತು. ಅಂದು ಕಾರ್ತಿಕ ಅಮವಾಸ್ಯೆಯಾಗಿತ್ತು. ಸಾಮ್ರಾಟ ಅಶೋಕನು ಬೌದ್ಧ ಧರ್ಮ ಸ್ವೀಕರಿಸಿದ ಮೇಲೆ ಅವನು ಗೌತಮ ಬುದ್ಧನ ಜ್ಞಾನೋದಯದ ದಿನವನ್ನು ತನ್ನ ರಾಜ್ಯದ ಪ್ರಜೆಗಳೆಲ್ಲಾ ದೀಪ ಬೆಳಗಿಸಿ ಹಬ್ಬ ಆಚರಿಸಲು ಆದೇಶಿಸಿದನಂತೆ.  ಹಿರಿಯ ಬೌದ್ಧ ಭಿಕ್ಷುಗಳು ತಮ್ಮ ಶಿಷ್ಯರಿಗೆ, ಹಾಗೂ ಸಂಸಾರಸ್ಥ ಕುಟುಂಬದ ಹಿರಿಯರು ತಮ್ಮ ಮನೆಯ ಕಿರಿಯರಿಗೆ ಸಾಂಕೇತಿಕವಾಗಿ ಬೆಳಗಿದ ದೀಪಗಳನ್ನು ಹಸ್ತಾಂತರಿಸಿ “ಧಮ್ಮ ಜ್ಞಾನವನ್ನು” ಒಬ್ಬರಿಂದೊಬ್ಬರಿಗೆ ಪಸರಿಸುವ ಪದ್ಧತಿ ಅಶೋಕನ ಕಾಲದಲ್ಲಿ ಸುರುವಾಯಿತು. ಇದಕ್ಕೆ ಪಾಲಿ-ಪ್ರಾಕೃತ ಭಾಷೆಯಲ್ಲಿ ‘ದೀಪ್ ದಾನೋತ್ಸವ್’ ಅಥವಾ “ದೀಪ್ ಪರ್ವ್” ಎಂದು ಕರೆದರು. ಅದುವೇ ಈಗಿನ ದೀಪಾವಳಿ. ನಮ್ಮ ರಾಷ್ಟ್ರಧ್ವಜದಲ್ಲಿ ಇರುವ ಅಶೋಕ ಚಕ್ರವೇ ಬೌದ್ಧರ “ಧಮ್ಮ ಜ್ಞಾನ ಚಕ್ರ”.  ಬುದ್ಧ ಮತ್ತು ಅವನ ಶಿಷ್ಯರ 84,000 ಉಪದೇಶಗಳ ಪ್ರತೀಕವಾಗಿ ಸಾಮ್ರಾಟ ಅಶೋಕನು 84,000 ಸ್ತೂಪ ಮತ್ತು 84,000 ಕಲ್ಲಿನ ಸ್ತಂಭಗಳನ್ನು ತನ್ನ ರಾಜ್ಯದ ಎಲ್ಲೆಡೆ ಸ್ಥಾಪನೆ ಮಾಡಿಸಿ ಬೌದ್ಧ ಧರ್ಮದ ಪ್ರಸಾರಕ್ಕೆ ಅನುವು ಮಾಡಿಕೊಟ್ಟನು. (ಅದರಲ್ಲಿ ಒಂದು ಈಗಲೂ ನಮ್ಮ ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥ ದೇವಳ/ಮಂಜುಶ್ರಿ ವಿಹಾರ ಹಾಗೂ ಅಲ್ಲಿಯ ಗರ್ಭ ಗುಡಿಯ ಎಡ ಬದಿಗಿರುವ 2,200 ವರ್ಷ ಹಳೆಯ ದೀಪ ಸ್ತಂಭ!). ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಸ್ಥಳದಲ್ಲಿ ಮೊದಲು ಇದ್ದಿದ್ದು ಅಶೋಕನ ಕಾಲದ ‘ಸಾಕೇತ್’ ಎಂಬ ಬೌದ್ಧ ವಿಹಾರವೇ ಆಗಿತ್ತಂತೆ!

ಸಾಂಚಿ ಸ್ತೂಪ

ಕಾರ್ತಿಕ ಅಮಾವಾಸ್ಯೆಯಂದು ಬೌದ್ಧರು ದೇಶದೆಲ್ಲೆಡೆ ದೀಪದಾನೋತ್ಸವ ಪರ್ವ ಆಚರಿಸುತ್ತಿದ್ದರು. ಪಾಲಿ-ಪ್ರಾಕೃತ ಭಾಷೆಯ “ಪರ್ವ” ಎಂಬ ಶಬ್ದವೇ ಅಪಭ್ರಂಶಗೊಂಡು ತುಳುವಲ್ಲಿ “ಪರ್ಬ” ಎಂದಾಗಿದೆ. ಅದೇ ದಿನ ಗೌತಮ ಬುದ್ಧನ ಹೆತ್ತ ತಾಯಿ ಮಾಯಾ ಮತ್ತು ಸಾಕು ತಾಯಿ ಗೌತಮಿಯನ್ನೂ ಬೌದ್ಧರು ಪೂಜಿಸುತ್ತಿದ್ದರು. ಮಾಯಾ ಮಾತೆಯ ಪೂಜೆಯೇ ಆನಂತರ ವೈದಿಕರ ಲಕ್ಷ್ಮಿ ಪೂಜೆಯಾಗಿ ಪರಿವರ್ತನೆಯಾಯಿತು. ಅಶೋಕನ ಕಾಲದಲ್ಲಿ ಮೊತ್ತಮೊದಲು ತಾಯಿ ಮಾಯಾ ಕಮಲದ ಮೇಲೆ ಕುಳಿತ ಭಂಗಿಯಲ್ಲಿ ಹಾಗೂ ಎರಡು ಬಿಳಿ ಆನೆಗಳು ಕುಂಭದಲ್ಲಿ ಅವಳ ಮೇಲೆ ನೀರು ಹನಿಸುವಂತೆ ಚಿತ್ರಿಸಲಾಯಿತು. ಈ ಶಿಲ್ಪ 2,200 ವರ್ಷ ಹಳೆಯ ಸಾಂಚಿ ಸ್ತೂಪದ ದ್ವಾರದ ಮೇಲೆ ಈಗಲೂ ಇದೆ. ಆಗಿನ್ನೂ ಸಂಪತ್ತಿನ ದೇವಿಯಾಗಿ ಲಕ್ಷ್ಮಿಯ ಕಲ್ಪನೆ ಹುಟ್ಟಿರಲೇ ಇಲ್ಲ!  ಬುದ್ಧನ ಕಾಲದಿಂದಲೂ ಕಮಲದ ಹೂವು ಬೌದ್ಧರಿಗೆ ಪವಿತ್ರ ಪುಷ್ಪ. ನಮ್ಮ ಕದ್ರಿಯ ಮಂಜುನಾಥ ದೇವಸ್ಥಾನದಲ್ಲಿ ಇರುವ ಬೌದ್ಧರ ಯಕ್ಷ ತ್ರಿಲೋಕೇಶ್ವರ (ಅವಲೋಕಿತೇಶ್ವರ) ಮತ್ತು ಮಂಜುಶ್ರೀ ಪ್ರತಿಮೆಗಳ ಕೈಯಲ್ಲಿ ಕಮಲದ ಮೊಗ್ಗು ಇರುವುದನ್ನು ಗಮನಿಸಬಹುದು.

ಅಶೋಕನ ಕಾಲದಲ್ಲಿ ಲಕ್ಷ್ಮೀ, ಸರಸ್ವತಿ, ವಿಷ್ಣು, ಬ್ರಹ್ಮ, ದುರ್ಗೆ ಅಥವಾ ಇತರ ನೂರಾರು ವೈದಿಕ ಹೆಣ್ಣು-ಗಂಡು ದೇವರ ಕಲ್ಪನೆ ಇನ್ನೂ ಹುಟ್ಟಿರಲೇ ಇಲ್ಲ. ಹಿಂದೂ ದೇವರ ವಿವಿಧ ಸ್ವರೂಪದ ಕಲ್ಪನೆಗಳೆಲ್ಲಾ ವೈದಿಕ ಅರಸರಾದ ಶುಂಗ ವಂಶೀಯರ ಆಡಳಿತ ಕಾಲದಲ್ಲಿ ಹುಟ್ಟಿ ಕೊಂಡವುಗಳು. ಕೊನೆಯ ಬೌದ್ಧ ಅರಸ ಬ್ರಹದೃತ ಮೌರ್ಯನನ್ನು ಮೋಸದಿಂದ ಹತ್ಯೆ ಮಾಡಿ ಅಧಿಕಾರಕ್ಕೆ ಬಂದ ವೈದಿಕ ಪುಷ್ಯಮಿತ್ರ ಶುಂಗನು ಎಲ್ಲಾ ಬೌದ್ಧ ಹಬ್ಬಗಳನ್ನು ವೈದಿಕ ಹಬ್ಬಗಳನ್ನಾಗಿ ಪರಿವರ್ತಿಸಿ  ಈ ಹಬ್ಬಗಳಿಗೆ ವೈದಿಕರ ಕಾಲ್ಪನಿಕ ದೇವ-ದಾನವ ಯುದ್ಧದ ಪುರಾಣ ಕಥೆಗಳನ್ನು ಜೋಡಿಸಿದನು. ಹೀಗೆ ಹುಟ್ಟಿದ್ದು ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿ ಹಾಗೂ ಅವಳ ವಾಹನ ಗೂಬೆ!

ಜೈನರ ಯಕ್ಷ ಯಕ್ಷಿಯರು

ಎಲ್ಲಾ ವೈದಿಕ ದೇವರುಗಳ ವಿಚಿತ್ರ ಸ್ವರೂಪಗಳಿಗೆ ಪ್ರೇರಣೆ ಆಗಿದ್ದು 2,600 ವರ್ಷ ಹಳೆಯ ಜೈನ ಮತ್ತು ಬೌದ್ಧ ಧರ್ಮೀಯರ “ಯಕ್ಷ-ಯಕ್ಷಿಣಿಯರ” ಕಲ್ಪನೆಗಳು. ಯಕ್ಷ-ಯಕ್ಷಿಣಿಯರೆಂದರೆ ಜೈನ ತೀರ್ಥಂಕರರ ಮತ್ತು ಬೌದ್ಧ ಭಿಕ್ಷುಗಳ ರಕ್ಷಣೆಗೆ ಇದ್ದ ಅಲೌಕಿಕ ಶಕ್ತಿಗಳು. ಹಾಗಾಗಿ ಅವುಗಳಿಗೆ ಅನೇಕ ಕೈ ಮತ್ತು ತಲೆಗಳು ಇರುವಂತೆ ಚಿತ್ರಿಸಲಾಗುತ್ತಿತ್ತು. (ಮೂಲತಃ ಜೈನ ಮತ್ತು ಬೌದ್ಧರಲ್ಲಿ ದೇವರ ಕಲ್ಪನೆ ಇಲ್ಲ!). ಇವೇ ಬೌದ್ಧ-ಜೈನ ಯಕ್ಷ ಯಕ್ಷಿಣಿಗಳು ನಂತರ ವೈದಿಕ ದೇವರಾಗಿ ಬಡತಿ ಹೊಂದಿ ಇಂದು ನಮ್ಮಿಂದ ಪೂಜೆಗೊಳ್ಳುತ್ತಿರುವುದು. (ಹೆಚ್ಚಿನ ವಿವರಕ್ಕಾಗಿ ಗೂಗಲ್ ನಲ್ಲಿ ಜೈನ್-ಬುದ್ಧಿಸ್ಟ್-ಹಿಂದೂ ಯಕ್ಷ-ಯಕ್ಷಿ ಎಂದು ಟೈಪ್ ಮಾಡಿ ನೋಡಿ). ಜೈನರ ಯಕ್ಷ ಕುಬೇರ ಸಂಪತ್ತಿನ ಅಧಿಪತಿ. ನಮ್ಮ ರಾಮಾಯಣದ ಪ್ರಕಾರ ಕುಬೇರ ರಾವಣನ ಅಣ್ಣ.  ಜೈನರೆಲ್ಲಾ ತಮ್ಮ ಮನೆಯಲ್ಲಿ ಕುಬೇರನ ಪೂಜೆ ಮಾಡುವುದರಿಂದಾಗಿಯೇ ಅವರು ಧನಿಕರಾಗಿರುವುದು ಎಂಬ ನಂಬಿಕೆ ಗುಜರಾತ್ & ರಾಜಸ್ತಾನದ ಜೈನ ವ್ಯಾಪಾರಿಗಳಲ್ಲಿ ಈಗಲೂ ಇದೆ. ಜತೆಗೆ ನಾಗಸರ್ಪದ ರೂಪದಲ್ಲಿ ಪದ್ಮಾವತಿ ಮತ್ತು ಧರಣೇಂದ್ರ ಎಂಬ ಯಕ್ಷರನ್ನೂ ಕರ್ನಾಟಕದ ಜೈನರು ಈಗಲೂ ಪೂಜಿಸುತ್ತಾರೆ. ಎಲ್ಲಾ ತೀರ್ಥಂಕರರ ತಲೆಯ ಮೇಲೆ ಐದು ಅಥವಾ ಏಳು ಹೆಡೆಯ ಶೇಷನಾಗ ಹೆಡೆ ಚಾಚಿ ರಕ್ಷಿಸುತ್ತಿರುವ ಪುರಾತನ ಶಿಲ್ಪಗಳನ್ನು ನಾವು ಎಲ್ಲೆಡೆ ಕಾಣುತ್ತೇವೆ. ಗೌತಮ ಬುದ್ಧ ನಿರ್ವಾಣ (ಮರಣ) ಸ್ಥಿತಿಯಲ್ಲಿ ಇರುವಾಗಲೂ ಏಳು ಹೆಡೆಯ ನಾಗನು ಬುದ್ಧನಿಗೆ ನೆರಳು ಕೊಡುವ ಶಿಲ್ಪ ಎಲ್ಲೆಡೆ ಕಾಣ ಸಿಗುತ್ತದೆ. ಸರ್ಪರೂಪದ ಕಾರ್ತಿಕೇಯ ಸಹಾ ಮೂಲತಃ ಜೈನರ ಯಕ್ಷ! ನಂತರ ಈ ಜೈನ ಯಕ್ಷನೇ ಹಿಂದೂಗಳ ಸುಬ್ರಹ್ಮಣ್ಯನಾಗಿ ‘ಬಡತಿ’ ಹೊಂದಿದ್ದು. ನಮ್ಮ ತುಳುನಾಡಿನಲ್ಲಿ ನಾಗಪೂಜೆ ಸುರುವಾಗಲು ಜೈನರ ನಾಗರೂಪದ ಯಕ್ಷ ಪೂಜೆಯೇ ಮೂಲ ಕಾರಣ ಎನ್ನಲಾಗುತ್ತದೆ. ಅದೇ ಪ್ರಕಾರ ಮಹಾಯಾನ ಬೌದ್ಧರ ಯಕ್ಷನಾದ ವಿನಾಯಕನೇ ಹಿಂದೂಗಳ ಗಣಪತಿ ದೇವರಾಗಿದ್ದು. ಒಟ್ಟಾರೆ ನಾಸ್ತಿಕ ಧರ್ಮವಾದ ಜೈನ ಮತ್ತು ಬೌದ್ಧರ ಯಕ್ಷ ಪೂಜೆಯೇ ವೈದಿಕ-ಹಿಂದೂಗಳಲ್ಲಿ ನೂರಾರು ಮಾನವರೂಪಿ-ಪ್ರಾಣಿರೂಪಿ ದೇವರುಗಳ ಕಲ್ಪನೆಗೆ ಮೂಲ ಕಾರಣವಾಗಿದ್ದು ವಿಪರ್ಯಾಸ!

 2,200 ವರ್ಷಕ್ಕೆ ಮುಂಚೆ ವೈದಿಕರು ಅಗ್ನಿ ಪೂಜೆಯ ಮೂಲಕ ಕೇವಲ ದೇವೇಂದ್ರನಿಗೆ ಹವಿಸ್ಸು ಕೊಟ್ಟು ಯಜ್ಞ ಯಾಗ ಮಾತ್ರ ಮಾಡುತ್ತಿದ್ದರು. ಅಗೆಲ್ಲಾ ವೈದಿಕರು ಕೇವಲ ಪ್ರಕೃತಿ ಪೂಜೆ ಮಾಡುತ್ತಿದ್ದರೇ ವಿನಹ ಮೂರ್ತಿ ಪೂಜೆ ಮಾಡುತ್ತಿರಲಿಲ್ಲ. ಹಿಂದೂಗಳಲ್ಲಿ ಮೂರ್ತಿ ಪೂಜೆ ಸುರುವಾಗಿದ್ದು ಜೈನ-ಬೌದ್ಧರ ಯಕ್ಷ ಪೂಜೆಯ ಅನುಕರಣೆಯಿಂದ ಹಾಗೂ ದೇವಸ್ಥಾನ ಕಟ್ಟುವ ಪದ್ಧತಿ ಸುರುವಾಗಿದ್ದು ಜೈನ-ಬೌದ್ಧರ ಬಸದಿ-ವಿಹಾರಗಳ ಅನುಕರಣೆಯಿಂದ. ಆದರೆ ದುರಾದೃಷ್ಟದಿಂದ ಅದು ಈಗ ವಿಕಾರವಾಗಿ ಬೆಳೆದು ರಾಜಕೀಯ ಪಕ್ಷಗಳ ಕೈಯಲ್ಲಿ ದ್ವೇಷದ ಅಸ್ತ್ರವಾಗಿದೆ ಹಾಗೂ ಅದರ ಪಾವಿತ್ರ್ಯ ಹೊರಟು ಹೋಗಿದೆ. ಕೇವಲ ಪ್ರಕೃತಿ ಪೂಜೆ ಮಾಡುತ್ತಿದ್ದ ವೈದಿಕ ಧರ್ಮವು ಜೈನ-ಬೌದ್ಧ ಧರ್ಮಗಳಿಗಿಂತ ಹೆಚ್ಚು ಹಳೆಯದು ಹೌದೋ ಅಲ್ಲವೋ, ಆದರೆ ಈಗ ನಾವು ಅನುಸರಿಸುತ್ತಿರುವ ಮೂರ್ತಿ ಪೂಜೆಯುಳ್ಳ ಹಿಂದೂ ಧರ್ಮದ ಆಚರಣೆಗಳೆಲ್ಲಾ ಮಹಾಯಾನ ಬೌದ್ಧ ಮತ್ತು ಜೈನ ಧರ್ಮಗಳಿಂದ ಶುಂಗ ಅರಸರ ಕಾಲದಲ್ಲಿ (2,200 ವರ್ಷಗಳ ಹಿಂದೆ) ಎರವಲು ಪಡೆದಿರುವುದು! ಹಾಗಾಗಿ ನಾವು ಮತ್ತೆ ದೇವಸ್ಥಾನಗಳನ್ನು ತೊರೆದು ಮೂಲ ಪ್ರಕೃತಿ ಪೂಜೆಯೆಡೆ ನಡೆದರೆ ಸಮಾಜಕ್ಕೆ ಒಳಿತಾಗಬಹುದು.

ಪ್ರವೀಣ್ ಎಸ್  ಶೆಟ್ಟಿ

ಚಿಂತಕರು

ಇದನ್ನೂ ಓದಿ- http://“ದೂರದೂರಿನಲ್ಲಿ ಕನ್ನಡ ಕಾಯಕ” https://kannadaplanet.com/kannada-work-in-faraway-places/

More articles

Latest article