ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂ ಧರ್ಮದ ಜನರಿಗೆ ಅನುಮತಿ ನೀಡಿದೆ. ಪೂಜೆ ಮಾಡಲು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿಯನ್ನು ನೇಮಿಸಲು ನ್ಯಾಯಾಲಯ ರಿಸೀವರ್‌ಗೆ ನಿರ್ದೇಶಿಸಿದೆ.
ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮಸೀದಿ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಹೇಳಿದ್ದಾರೆ. ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳುವ ಮಸೀದಿ ಸಮಿತಿಯ ಅರ್ಜಿಯ ವಿಚಾರಣೆಯ ದಿನಾಂಕವನ್ನು ನ್ಯಾಯಾಲಯವು ಫೆಬ್ರವರಿ 8 ಕ್ಕೆ ನಿಗದಿಪಡಿಸಿದೆ.
ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ವಾದಿಸಿದ್ದರು.
ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ವರದಿಯು, ಮಸೀದಿ ನಿರ್ಮಾಣದ ಮೊದಲು ಒಂದು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಹೇಳಿದೆ. “ಸರಿಯಾದ ಮತ್ತು ಪರಿಣಾಮಕಾರಿ ತನಿಖೆಗಾಗಿ, ASI ಗೆ ನಿರ್ದೇಶನ ನೀಡುವುದು ಅವಶ್ಯಕ ಎಂದು ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.