ಬೆಂಗಳೂರು, ಮಾರ್ಚ್ 18 : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಇನ್ನು ಮೂರು-ನಾಲ್ಕು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಕೃಷು ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಎ ಇವರು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿನ ಕೃಷಿ ಇಲಾಖೆಯಲ್ಲಿನ ವಿವಿಧ ಕಚೇರಿಗಳ ಮಂಜೂರಾದ ಹುದ್ದೆಗಳ ವಿವರ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಬೇಕೆಂದು ಕೋರಿದರು.
ಈ ಸಮಯದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಲ್ಲಿ 143 ಹುದ್ದೆಗಳು ಮಂಜೂರಾಗಿದ್ದು ಅದರಲ್ಲಿ 30 ಹುದ್ದೆಗಳು ಖಾಲಿ ಇರುತ್ತವೆ. 2018ರಲ್ಲಿ 370 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 2023ರಲ್ಲಿ 940 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಬಂದಿದ್ದು ಸರ್ಕಾರದ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರುವುದಿಲ್ಲ. ಸರ್ಕಾರದ ಇತ್ತೀಚಿನ ನಿರ್ದೇಶನದನ್ವಯ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗುತ್ತಿದೆ.
ಇನ್ನು 2-3 ತಿಂಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಡುಪಿ ಭಾಗಕ್ಕೂ ಸಹ ನಿಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.

