ಬೆಳ್ತಂಗಡಿ: ಅಮೆರಿಕದ ಅಧ್ಯಕ್ಷರೂ ಕೂಡಾ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ವ್ಯಂಗ್ಯಕ್ಕೀಡಾಗಿದೆ. ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ಈ ಕಾರ್ಯಕ್ರಮದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ ಹರೀಶ್ ಪೂಂಜಾ ಅವರು ದೇಶದ ಎಲ್ಲರನ್ನೂನರನ್ನು ಭಾರತೀಯರು ಎಂದು ತಿಳಿದುಕೊಂಡು ಮೋದಿಯವರು ಆಡಳಿತ ನಡೆಸುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ಸೂಪರ್ ಪವರ್ ಭಾರತ ನಿರ್ಮಾಣವಾಗುತ್ತದೆ. ರಷ್ಯಾ-ಉಕ್ರೇನ್ ನಡುವೆ ಯುದ್ಧವಾದಾಗ ಅಮೆರಿಕದ ಅಧ್ಯಕ್ಷರನ್ನು ಕರೆಯಲಿಲ್ಲ. ಬದಲಾಗಿ, ಯುದ್ಧ ನಿಲ್ಲಿಸಲು ನರೇಂದ್ರ ಮೋದಿಯವರನ್ನು ಕರೆದಿದ್ದರು ಎಂದು ಹೇಳಿದ್ದಾರೆ.
ಮೋದಿಯವರೇ, ಬನ್ನಿ, ಯುದ್ಧ ನಿಲ್ಲಿಸಿ ಎಂದು ಉಕ್ರೇನ್ ಅಧ್ಯಕ್ಷರು ಮನವಿ ಮಾಡಿದ್ದರು. ಏಕೆಂದರೆ, ಭಾರತ ಅಂತಹ ಸೂಪರ್ ಪವರ್ ಹೊಂದಿದೆ ಎಂದು ಹೇಳಿದ್ದರು. ಆದರೆ ವಿದೇಶಾಂಗ ಸಚಿವಾಲಯವು ಉಕ್ರೇನ್ ಮತ್ತು ರಷ್ಯಾ ಯುದ್ಧಕ್ಕೆ ಸಂಬಂಧಪಟ್ಟ ಇಂತಹ ಎಲ್ಲಾ ವರದಿಗಳನ್ನೂ ಸ್ಪಷ್ಟವಾಗಿ ತಳ್ಳಿ ಹಾಕಿತ್ತು. ಆದರೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಇಂತಹ ಸುಳ್ಳನ್ನೇ ಹರಡುತ್ತಿದ್ದಾರೆ.
ಅದೇ ರೀತಿ, ಅಮೆರಿಕದ ಅಧ್ಯಕ್ಷರೂ ಇಂದು ಯಾವುದೇ ನಿರ್ಧಾರ ಮಾಡುವುದಿದ್ದರೆ ಮೋದಿಯವರನ್ನು ಕೇಳಿಯೇ ನಿರ್ಧಾರ ಮಾಡುತ್ತಾರೆ. ನಮ್ಮನ್ನು ಕೇಳಿಯೇ ಅಲ್ಲಿ ಆಡಳಿತ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ದೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಹೆಮ್ಮೆ ನಮಗಿರಬೇಕು. ಇದಕ್ಕೆಲ್ಲ ಮೋದಿಯವರು ಕಾರಣ. 2030ರ ವೇಳೆಗೆ ಭಾರತ ಸೂಪರ್ ಪವರ್ ದೇಶವಾಗುತ್ತದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಒಳಗಾಗಿದೆ. ಅಮೆರಿಕದ 1 ಡಾಲರ್ ಭಾರತದ 84 ರೂಪಾಯಿಗೆ ಸಮವಾಗಿದೆ. ಇದು ಕೂಡ ಮೋದಿಯ ಸಲಹೆಯಿಂದ ಆಗಿರಬಹುದು. ಮತ ನೀಡಿದ ಮತದಾರರ ಕಿವಿಗೆ ಹೂ ಇಡುವುದರಲ್ಲಿ ಬೆಳ್ತಂಗಡಿ ಶಾಸಕರು ನಿಸ್ಸೀಮರು ಎಂದು ಒಬ್ಬರು ಹೇಳಿದ್ದಾರೆ.