ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಸಮಸ್ಯೆ ಕಡಿಮೆಯಾಗುತ್ತಿದ್ದಂತೆ ಹೊಸ ಮಾದರಿಯ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ, ಒಗ್ಗಟ್ಟಾಗಿ ಇದ್ದರೆ ಸುರಕ್ಷಿತವಾಗಿರುತ್ತೀರಿ ಎಂದು ಹೇಳುವವರನ್ನೂ ಇಂದು ಅರ್ಬನ್ ನಕ್ಸಲರು ಟಾರ್ಗೆಟ್ ಮಾಡುತ್ತಿದ್ದಾರೆ, ನಗರ ನಕ್ಸಲರನ್ನು ಗುರುತಿಸಿ ಅವರ ಮುಖವಾಡ ಕಳಚಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆ ಬಳಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿ, ಭಾರತದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಮತ್ತು ಜಗತ್ತಿನಲ್ಲಿ ರಾಷ್ಟ್ರದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಲು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿವೆ. ಅವರು ದೇಶವನ್ನು ಜಾತಿಯ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ಅದು ಅಭಿವೃದ್ಧಿ ಹೊಂದಿದ ಭಾರತಕ್ಕೆ ವಿರುದ್ಧವಾಗಿದ್ದಾರೆ ಎಂದು ಹೇಳಿದರು.
ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವ ನಗರ ನಕ್ಸಲರ ನಂಟನ್ನು ಗುರುತಿಸಿ ಅದನ್ನು ಬೇರುಸಮೇತ ಕಿತ್ತೆಸೆಯುವ ಪ್ರಯತ್ನವಾಗಬೇಕು ಎಂದು ಅವರು ದೇಶದ ಜನರನ್ನು ಒತ್ತಾಯಿಸಿದರು.
ನಮ್ಮ ರಾಷ್ಟ್ರವು ನಮ್ಮ ದೇಶವನ್ನು ಬಲಪಡಿಸುವ ‘ಒಂದು ರಾಷ್ಟ್ರ, ಒಂದು ಜಾತ್ಯತೀತ ನಾಗರಿಕ ಸಂಹಿತೆ’ ಅನುಷ್ಠಾನದತ್ತ ಸಾಗುತ್ತಿದೆ. ನಾವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದು ರಾಷ್ಟ್ರ, ಒಂದು ಚುನಾವಣೆ’ ಉಪಕ್ರಮವನ್ನು ತರಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಇನ್ನಿತರೆ ಪಕ್ಷಗಳು ಹಾಗೂ ಅನೇಕ ಪ್ರಗತಿಪರ ಸಂಘಟನೆ, ಜನಪರ ಸಂಘಟನೆಗಳು ದೇಶಾದ್ಯಂತ ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ. ಜಾತಿ ಗಣತಿ ಮಾಡಿದರೆ ಮಾತ್ರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆ ಮತ್ತು ಮೀಸಲಾತಿಯನ್ನು ಸಮರ್ಪಕವಾಗಿ ಹಂಚಬಹುದು ಇಲ್ಲವೇ. ಹಳೆ ದಾಖಲಾತಿಗಳಿಂದ ಅಸಮಾನತೆ ಉಂಟಾಗುತ್ತದೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ. ಜಾತಿ ಗಣತಿ ಒತ್ತಾಯಿಸುತ್ತಿರುವವರನ್ನು ಪ್ರಧಾನಿ ಮೋದಿ ಅರ್ಬನ್ ನಕ್ಸಲ್ ಎಂದು ಕರೆಯುತ್ತಿದ್ದಾರೆಯೇ ಎಂಬ ಚರ್ಚೆ ನಡೆಯುತ್ತಿದೆ.