ಪ್ರತಿಪಕ್ಷಗಳ ತೀವ್ರ ವಿರೋಧದ ಬೆನ್ನಲ್ಲೇ ‘ಲ್ಯಾಟರಲ್​ ಎಂಟ್ರಿ’ ನೇಮಕಾತಿ ರದ್ದತಿಗೆ ಕೇಂದ್ರ ಸರ್ಕಾರ ಸೂಚನೆ 

Most read

ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ‘ಲ್ಯಾಟರಲ್​ ಎಂಟ್ರಿ’ ಜಾಹೀರಾತನ್ನು ತಕ್ಷಣದಿಂದಲೇ ರದ್ದು ಮಾಡುವಂತೆ ಕೇಂದ್ರ ಸರ್ಕಾರ ಯುಪಿಎಸ್​​ಸಿಗೆ ಮಂಗಳವಾರ ಸೂಚನೆ ನೀಡಿತು. ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಪತ್ರ ಬರೆದು ತಿಳಿಸಿದ್ದಾರೆ.

ಲ್ಯಾಟರಲ್​ ಎಂಟ್ರಿ ಮೂಲಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಯುಪಿಎಸ್​ಸಿ ಈಚೆಗೆ ಜಾಹೀರಾತು ಪ್ರಕಟಿಸಿತ್ತು. ಯುಪಿಎಸ್​ಸಿಯ ಈ ನಿರ್ಧಾರ ಮೀಸಲಾತಿಗೆ ಧಕ್ಕೆ ತರುತ್ತದೆ ಎಂದು ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಯುಪಿಎಸ್​ಸಿ ಅಧ್ಯಕ್ಷೆ ಪ್ರೀತಿ ಸೂದನ್​ ಅವರಿಗೆ ಪತ್ರ ಬರೆದಿದ್ದು, ಈ ಕೂಡಲೇ ಜಾಹೀರಾತನ್ನು ರದ್ದು ಮಾಡಿ. ಹಿಂದುಳಿದ ಸಮುದಾಯಗಳ ಜನರು ಸರ್ಕಾರಿ ಹುದ್ದೆಗಳಲ್ಲಿ ನ್ಯಾಯಸಮ್ಮತವಾಗಿ ತಮ್ಮ ಪ್ರಾತಿನಿಧ್ಯ ಪಡೆಯಲು ಅವಕಾಶ ಮಾಡಿಕೊಡಿ ಎಂದು ಸೂಚಿಸಿದ್ದಾರೆ.

ಲೋಕಸೇವಾ ಆಯೋಗದ ಪ್ರಮುಖ ಹುದ್ದೆಗಳಿಗೆ ಆರ್​ಎಸ್​ಎಸ್​ ಸಂಬಂಧಿತ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನ ನಡೆದಿದೆ ಎಂದು ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪ ಮಾಡಿದ್ದರು.

2013ರಲ್ಲಿ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರ ಸಮಿತಿಯು ಇಂಥದ್ದೊಂದು ನೇಮಕಾತಿಯನ್ನು ಶಿಫಾರಸು ಮಾಡಿತ್ತು. ಅದನ್ನು ಈಗ ಅನುಮೋದಿಸಲಾಗಿದೆ ಎಂದಿತ್ತು. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದಂತೆ ಲ್ಯಾಟರಲ್​ ಎಂಟ್ರಿ ಮೂಲಕ ವಿವಿಧ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ನಿಯಮವನ್ನು ವಾಪಸ್​ ಪಡೆದಿದೆ.

More articles

Latest article