ಟೆಹ್ರಾನ್ : ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 182 ಜನರು ಸಾವನ್ನಪ್ಪಿದ್ದು, ಇದರಿಂದ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ ಎನ್ನಲಾಗಿದೆ.
ಅಮೆರಿಕ ಹಾಗೂ ಇರಾನ್ ಕದನ ವಿರಾಮ ಘೋಷಿಸಿದ ಬಳಿಕವೂ, ಇಸ್ರೇಲ್ ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸಿಲ್ಲ. ಇದಕ್ಕೆ ಪ್ರತಿಯಾಗಿ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ.
ಕದನ ವಿರಾಮ ಒಪ್ಪಂದದ ಬಳಿಕವೂ ಇರಾನ್ ಮತ್ತು ಗಲ್ಫ್ ಅರಬ್ ದೇಶಗಳ ಮೇಲೆ ಹೆಚ್ಚಿನ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಬೀಳುತ್ತಿದ್ದವು. ಅದೇ ಸಮಯದಲ್ಲಿ ಇಸ್ರೇಲ್ ಲೆಬನಾನ್‌ನಲ್ಲಿನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನ ಮೇಲೆ ತನ್ನ ದಾಳಿಗಳನ್ನು ತೀವ್ರಗೊಳಿಸಿತು. ಬೈರುತ್‌ನ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಮುನ್ನೆಚ್ಚರಿಕೆಯಿಲ್ಲದೇ ದಾಳಿ ನಡೆಸಿದೆ.
ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ದಾಳಿಗಳಲ್ಲಿ ಬುಧವಾರ ಒಂದೇ ದಿನದಲ್ಲಿ 182 ಜನರು ಮೃತಪಟ್ಟಿದ್ದಾರೆ. ಇದು ಇಸ್ರೇಲ್-ಹಿಜ್ಬುಲ್ಲಾ ಯುದ್ಧದ ಇತ್ತೀಚಿನ ಅತ್ಯಂತ ಮಾರಕ ದಿನವಾಗಿದೆ. ಈ ಹೊಸ ಹಿಂಸಾಚಾರವು ಅಮೆರಿಕ ಉಪರಾಷ್ಟ್ರಪತಿ ಜೆಡಿ ವ್ಯಾನ್ಸ್ ಅವರು “ಶಿಥಿಲ” ಎಂದು ಕರೆದ ಒಪ್ಪಂದವನ್ನು ಅಪಾಯಕ್ಕೆ ದೂಡುವ ಸಾಧ್ಯತೆಯನ್ನು ಹುಟ್ಟುಹಾಕಿದೆ.
ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್‌ನಲ್ಲಿ ಗಾಲಿಬಾಫ್, ಶಾಂತಿ ಒಪ್ಪಂದ ಜಾರಿಗೆ ಬಂದ ನಂತರವೂ ಇಸ್ರೇಲ್ ಹಿಜ್ಬುಲ್ಲಾದ ಮೇಲೆ ದಾಳಿ ಮಾಡುತ್ತಿರುವುದು, ಇರಾನ್ ಆಕಾಶದಲ್ಲಿ ಡ್ರೋನ್ ಅತಿಕ್ರಮಣ ಮತ್ತು ಅಂತಿಮ ಒಪ್ಪಂದದಲ್ಲಿ ಇರಾನ್ ಯಾವುದೇ ಯುರೇನಿಯಂ ಸಮೃದ್ಧೀಕರಣ ಸಾಮರ್ಥ್ಯವನ್ನು ಅನುಮತಿಸುವುದಿಲ್ಲ ಎಂಬ ಅಮೆರಿಕದ ಹೇಳಿಕೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಏಯಲ್ ಜಮೀರ್ ಮಾತನಾಡಿ, ಹಿಜ್ಬುಲ್ಲಾದ ಮೇಲೆ ಪ್ರತಿ ಕಾರ್ಯಾಚರಣೆಯ ಅವಕಾಶವನ್ನು ನಾವು ಬಳಸಿಕೊಳ್ಳುತ್ತೇವೆ ಹಾಗೂ ದಾಳಿ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಇಸ್ರೇಲ್ ಸೇನೆಯು ಬುಧವಾರ ಲೆಬನಾನ್‌ನಲ್ಲಿ 10 ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿದೆ. ಇದು ಮಾರ್ಚ್ 1 ರ ನಂತರದ ಅತಿದೊಡ್ಡ ದಾಳಿಯಾಗಿದೆ.

