ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೂತನ ವಿಶ್ವವಿದ್ಯಾಲಯದ ಬಗ್ಗೆ ಮಾಡಿದ್ದ ಕಾನೂನಿನಲ್ಲಿ ಪ್ರತಿ ವಿಶ್ವವಿದ್ಯಾಲಯಕ್ಕೆ ಕೇವಲ ರೂ 2 ಕೋಟಿ ಮೀಸಲಿಡಲಾಗಿತ್ತು. ಆದರೆ, ಯಾವುದೇ ಜಮೀನು ನೀಡಿರಲಿಲ್ಲ ಎಂದರು.
ಮಂಡ್ಯ, ಚಾಮರಾಜನಗರ ಭಾಗದಲ್ಲಿ ಎಲ್ಲರೂ ಮೈಸೂರು ವಿಶ್ವವಿದ್ಯಾಲಯಕ್ಕೆ ಮೊದಲ ಆದ್ಯತೆ ನೀಡಿದ ಕಾರಣ ಇತರೇ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಗಣನೀಯವಾಗಿ ಕುಸಿದಿತ್ತು. ಈ ಬಗ್ಗೆ ಆಂತರಿಕ ವರದಿ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಗಳು ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿ ರಚಿಸಿದ್ದರು. ಈ ಬಗ್ಗೆ ನಾವು ಚರ್ಚಸಿ ನಮಗೆ ಬಂದಿರುವ ಸಲಹೆಗಳನ್ನು ಪರಾಮರ್ಶಿಸಿದ್ದೇವೆ. ಈ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇವೆ. ನಂತರ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಅಗತ್ಯಬಿದ್ದರೆ ಈ ವಿಶ್ವವಿದ್ಯಾಲಯಗಳನ್ನು ಮುಚ್ಚಿಸುತ್ತೀರಾ ಎಂದು ಕೇಳಿದಾಗ, ರಾಜ್ಯ, ವಿವಿಗಳು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು. ಈ ವಿಚಾರದಲ್ಲಿ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ. ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ. ಪ್ರಾಧ್ಯಾಪಕರು ಮಂಡ್ಯ, ಚಾಮರಾಜನಗರಕ್ಕೆ ಹೋಗಲು ತಯಾರಿಲ್ಲ. ಅವರು ತಮ್ಮ ಹಿರಿತನ ಹಾಗೂ ಪಿಂಚಣಿ ವ್ಯವಸ್ಥೆ ಗಮನದಲ್ಲಿಟ್ಟಕೊಂಡು ಹಿಂದೇಟು ಹಾಕುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.