ತುಳಸೀ ವನದ ಮರೆಯದ ಹೆಮ್ಮರ

Most read

ನಾನೊಮ್ಮೆ ಕುತೂಹಲಕ್ಕೆ ತುಳಸಿ ಗೌಡರಲ್ಲಿ ನೀವು ಎಷ್ಟು ಗಿಡಗಳನ್ನು ನೆಟ್ಟಿರಬಹುದು ಎಂದು ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು… “ಎಷ್ಟು ಲಕ್ಷ ಗಿಡಗಳನ್ನು ನೆಟ್ಟಿದ್ದೀರಿ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ ವಹಿಸಿದ್ದೀರಿ ಎಂಬುದು ಮುಖ್ಯ”. ಇದು ಪರಿಸರ ದಿನಾಚರಣೆಯಂದು ಕೇವಲ ಶೋಕಿಗಾಗಿ, ಫೋಟೋಕ್ಕಾಗಿ ಗಿಡ ನೆಡುವವರಿಗೆ ಚಾಟಿ ಬೀಸಿದಂತೆ ದಿನೇಶ್‌ ಹೊಳ್ಳ, ಪರಿಸರ ಹೋರಾಟಗಾರರು.

ನಾವು ತಿನ್ನುವ ಪ್ರತೀ ಹಣ್ಣಿನ ಒಳಗೆ ಬೀಜಗಳಿದ್ದು ಅವುಗಳು ಭವಿಷ್ಯದ ಮರಗಳು. ಹಣ್ಣು ತಿಂದು ಬೀಜಗಳನ್ನು ತ್ಯಾಜ್ಯ ಎಂದು ಎಸೆದರೆ ಭವಿಷ್ಯದ ವನವನ್ನು, ತಂಪು ಸೇವಿಸುವ ಮನವನ್ನು ನಿರೀಕ್ಷಿಸುವುದಾದರೂ ಹೇಗೆ? ಇಂದು ನಗರಗಳು ಬೆಳೆಯುತ್ತಾ ಹೋದಂತೆ, ‘ ಅಭಿವೃದ್ಧಿ ‘ ಎಂಬ ನೆಪದಲ್ಲಿ ಇದ್ದ ಮರ, ಗಿಡಗಳನ್ನು ಕಡಿಯುವ ಪ್ರಕ್ರಿಯೆ ಬೆಳೆಯುತ್ತಿದೆಯೇ ಹೊರತು ಕಡಿದ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡುವ ಮನಗಳು ಕಡಿಮೆಯಾಗುತ್ತಿವೆ. ಇದರ ಪರಿಣಾಮವಾಗಿ ಅಧಿಕ ತಾಪ, ಬರಗಾಲ, ಭೂಕುಸಿತ, ಜಲ ಪ್ರವಾಹಗಳಂತಹ ಪ್ರಾಕೃತಿಕ ದುರಂತಗಳನ್ನು ಅನುಭವಿಸುತ್ತಾ ಇದ್ದೇವೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಹಳ್ಳಿಯ ವೃಕ್ಷಮಾತೆ ಎಂದೇ ಗುರುತಿಸಲ್ಪಟ್ಟಿರುವ, ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡರು ತನ್ನ ಬಾಲ್ಯದಿಂದಲೇ ಗಿಡ, ಮರಗಳ ಒಡನಾಟವನ್ನು ಬೆಳೆಸಿಕೊಂಡು ಗಿಡ ಮರಗಳನ್ನು ತನ್ನ ಕುಟುಂಬದವರಂತೆ ಪ್ರೀತಿಸುತ್ತಾ ಬಂದವರು. ತಾಯಿಯ ಜೊತೆ ಅಡವಿಗೆ ಕಟ್ಟಿಗೆ ಸಂಗ್ರಹಿಸಲು ಹೋದಾಗ ಅಲ್ಲಲ್ಲಿ ಬಿದ್ದಿದ್ದ ಬೀಜಗಳನ್ನು ಮನೆಗೆ ತಂದು ಬೆಳೆಸುತ್ತಿದ್ದರು, ಅದೇ ಸಮಯಕ್ಕೆ ಸರಿಯಾಗಿ ಇವರ ಆಸಕ್ತಿಗೆ ಪೂರಕವಾಗಿ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೀಜಗಳನ್ನು ಮೊಳಕೆ ಬರಿಸುವ ಉದ್ಯೋಗ ಲಭಿಸಿದಾಗ ಗಿಡಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು. ಬೀಜಗಳು ಮೊಳಕೆ ಒಡೆದು ಹೊರಗೆ ಬಂದಾಗ ತುಳಸಿ ಗೌಡರಿಗೆ ಅದು ತಾಯಿಯ ಗರ್ಭದಿಂದ ಮಗು ಒಂದು ಹೊರಗೆ ಬಂದಂತೆ, ಆ ಮಗುವನ್ನು ತಾಯಿಯ ಮಮತೆಯ ರೀತಿಯಲ್ಲಿ ಸಾಕಿ ಸಲಹುತ್ತಿದ್ದರು. ಪುಟ್ಟ ಪುಟ್ಟ ಗಿಡಗಳೇ ತನ್ನ ಮಕ್ಕಳು ಎಂಬ ರೀತಿಯಲ್ಲಿ ಗಿಡಗಳನ್ನು ಬೆಳೆಸುತ್ತಾ ಗಿಡಗಳೊಂದಿಗೆ ಬೆರೆಯುತ್ತಾ, ಗಿಡಗಳ ಆಂತರ್ಯವನ್ನು ಅರಿಯುತ್ತಾ ಲೆಕ್ಕವೇ ಇಲ್ಲದಷ್ಟು ಗಿಡಗಳನ್ನು ಬೆಳೆಸುತ್ತಾ ಬಂದರು. ನಾನೊಮ್ಮೆ ಅವರಲ್ಲಿ ಕುತೂಹಲಕ್ಕೆ ನೀವು ಎಷ್ಟು ಗಿಡಗಳನ್ನು ನೆಟ್ಟಿರಬಹುದು ಎಂದು ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು…’ ಎಷ್ಟು ಲಕ್ಷ ಗಿಡಗಳನ್ನು ನೆಟ್ಟಿದ್ದೀರಿ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ ವಹಿಸಿದ್ದೀರಿ ಎಂಬುದು ಮುಖ್ಯ’. ಇದು ಪರಿಸರ ದಿನಾಚರಣೆಯಂದು ಕೇವಲ ಶೋಕಿಗಾಗಿ, ಫೋಟೋಕ್ಕಾಗಿ ಗಿಡ ನೆಡುವವರಿಗೆ ಚಾಟಿ ಬೀಸಿದಂತೆ.

ತುಳಸಿ ಗೌಡರು

ತುಳಸಿ ಗೌಡರ ಸಸ್ಯ ಪ್ರೀತಿಯನ್ನು ಗಮನಿಸಿ ಮಾಸ್ತಿಕಟ್ಟೆ ಅಡವಿಯ ಸಂರಕ್ಷಣಾ ಅಧಿಕಾರಿಯಾಗಿರುವ ಡಾ.ಯಲ್ಲಪ್ಪ ರೆಡ್ಡಿಯವರು ಇವರಿಗೆ ಸಂಪೂರ್ಣ ಬೆಂಬಲ ನೀಡಿರುವ ಕಾರಣ ಪದ್ಮಶ್ರೀ ಪ್ರಶಸ್ತಿ ಲಭಿಸುವ ತನಕ ಇದು ಸಂಕಲೆಯಾಯಿತು. ಪದ್ಮಶ್ರೀ ಜೊತೆಗೆ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ತುಳಸಿಯವರಿಗೆ ಸಿಕ್ಕಿದ್ದರೂ ಈವರೆಗೆ ಆ ಪ್ರಶಸ್ತಿಗಳ ಮಹತ್ವವನ್ನೇ ಅರಿಯದ ಇವರು ‘ ತಾನು ಬೆಳೆಸಿದ ಗಿಡಗಳು ಬೆಳೆದು ಈ ಭುವಿಗೆ ದೊಡ್ಡ ಕೊಡುಗೆ ಆಗಿ ಅದರಿಂದ ಪರಿಸರಕ್ಕೂ, ಜನರಿಗೂ ಒಂದಷ್ಟು ಒಳ್ಳೆಯದಾದರೆ ಅದಕ್ಕಿಂತ ದೊಡ್ಡ ಪುರಸ್ಕಾರ ಬೇರೆ ಯಾವುದೂ ಅಲ್ಲ ಎಂದು ಸದಾ ಹೇಳುತ್ತಿದ್ದರು.

ಭವಿಷ್ಯದಲ್ಲಿ ಈ ಭೂಮಿಗೆ ದೊಡ್ಡ ಆಪತ್ತು, ಆತಂಕ ಆಗುವುದಾದರೆ ಅದು ಮನುಜರಿಂದಲೇ ಎಂದು ತನ್ನೊಳಗಿನ ಆಂತರ್ಯದ ಮಾತನ್ನು ಹೇಳುತ್ತಿದ್ದರು. ಮನುಜ ಸಾಮ್ರಾಜ್ಯ ತನ್ನ ಸ್ವಾರ್ಥ ಮತ್ತು ಹಿತಕ್ಕಾಗಿ ರಸ್ತೆ, ಅಣೆಕಟ್ಟು, ಕಟ್ಟಡಗಳನ್ನು ಕಟ್ಟುವುದು ಅದು ಅವನ ಸ್ವಂತಕ್ಕಾಗಿ, ಈ ಸಂದರ್ಭದಲ್ಲಿ  ಕಡಿದು ಬಿಟ್ಟ ಮರ, ಗಿಡಗಳಿಗೆ ಪರ್ಯಾಯವಾಗಿ ಒಂದಷ್ಟು ಗಿಡಗಳನ್ನು ಸಾಕಿ ಬೆಳೆಸೋಣ ಎಂಬ ಚಿಂತನೆ ಯಾವ ಮನುಜರಲ್ಲೂ ಬರದೇ ಹೋದರೆ ನಮ್ಮ ಭವಿಷ್ಯಕ್ಕೆ ನಾವೇ ಮಾರಣಾಂತಿಕ ಏಟು ನೀಡಿದಂತೆ ಎಂದು ತುಳಸಿ ಗೌಡರು ಎಚ್ಚರಿಸುತ್ತಲೇ ಇದ್ದಾರೆ.

ತುಳಸಿ ಗೌಡರೊಂದಿಗೆ ಲೇಖಕರು

ನಿಮ್ಮ ಮಕ್ಕಳನ್ನು ಎಷ್ಟು ಪ್ರೀತಿಯಿಂದ ಸಾಕಿ ಸಲಹುತ್ತೀರೋ ಅದೇ ರೀತಿ ಮನೆಯ ಸುತ್ತ ಮುತ್ತ ಒಂದಷ್ಟು ಗಿಡಗಳನ್ನು ಕೂಡಾ ನಿಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿರಿ, ಭವಿಷ್ಯದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಕೈ ಬಿಡಬಹುದು ಆದರೆ ನೀವು ನೆಟ್ಟ ಗಿಡ ಮರಗಳು ನಿಮ್ಮನ್ನು ಕೈ ಬಿಡುವುದಿಲ್ಲ. ಜೊತೆಗೆ ಲೋಕ ಕಲ್ಯಾಣ ಮಸ್ತು ಎಂದು ಇಡೀ ಊರಿಗೇ ನೆಮ್ಮದಿ ನೀಡುತ್ತದೆ ಎಂಬ ತುಳಸಿಯವರ ಮಾತು ಸದಾ ನಮ್ಮನ್ನು ಎಚ್ಚರಿಸುವಂತಿದೆ. ನಮ್ಮ, ನಿಮ್ಮ ಮಕ್ಕಳ ಭವಿಷ್ಯದ ಭದ್ರತೆಗಾದರೂ ತುಳಸಿಯವರ ಮಾತುಗಳನ್ನು ಕೇಳಿ ಇಳೆಯ ಹಸಿರು ಹಂದರವನ್ನು ಬೆಳೆಸೋಣ.

ಇಂದು ತುಳಸಿ ಗೌಡರು ನಮ್ಮನ್ನು ಅಗಲಿದರೂ ಅವರು ನೆಟ್ಟ ಗಿಡಗಳು, ಮರಗಳಾಗಿ ಆ ಮರಗಳ ಹಣ್ಣು, ಬೀಜಗಳು ಉದುರಿ ಮತ್ತು ಅವು ಮರಗಳಾಗಿ ಈ ಇಳೆಯಲ್ಲಿ ಸದಾ ಅಮರವಾಗಿ ಉಳಿಯುತ್ತವೆ. ತುಳಸಿಯವರ ಹಸಿರು ಕೊಡುಗೆ ಈ ಭುವಿಗೆ ಸದಾ ನೆಮ್ಮದಿಯನ್ನು ನೀಡುತ್ತಲೇ ಇವೆ.

ದಿನೇಶ್ ಹೊಳ್ಳ

ಪರಿಸರ ಹೋರಾಟಗಾರರು, ಚಾರಣಿಗರು.

ಇದನ್ನೂ ಓದಿ- ಸಮ್ಮಿಳಿತ ಸಂಸ್ಕೃತಿಯ ಪರಂಪರೆಯನ್ನು ಎತ್ತಿಹಿಡಿದ ಉಸ್ತಾದ್‌ ಝಾಕಿರ್‌ ಹುಸೈನ್‌

More articles

Latest article