Thursday, July 25, 2024

ಉಮಾಶ್ರೀಗಿಂದು ಹುಟ್ಟುಹಬ್ಬದ ಸಂಭ್ರಮ : ಕಲ್ಲು-ಮುಳ್ಳಿನ ಹಾದಿ ಸವೆಸಿ, ಪುಟ್ಟಕ್ಕನಾದ ನಟಿ

Most read

ಮಹಾನಟಿ, ಅಭಿನೇತ್ರಿ, ಕಿರುತೆರೆಯ ಪುಟ್ಟಕ್ಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಉಮಾಶ್ರೀ ಅವರಿಗೆ ಅಭಿಮಾನಿಗಳು, ನಟ-ನಟಿಯರು, ಶುಭಾಶಯ ಕೋರುತ್ತಿದ್ದಾರೆ. ಉಮಾಶ್ರೀ ಅವರ ಅಭಿನಯಕ್ಕೆ ಸಾಟಿ ಯಾರಿಲ್ಲ. ಅದನ್ನ ಮತ್ತೆ ಮತ್ತೆ ಪ್ರೂವ್ ಮಾಡುತ್ತಲೇ ಇದ್ದಾರೆ. ಅವರ ಅಭಿನಯದಿಂದಾನೇ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಂಬರ್ ಒನ್ ಸ್ಥಾನವನ್ನು ಕಾಪಾಡಿಕೊಂಡು ಬರುತ್ತಿರುವುದು.

ಇತ್ತಿಚೆಗೆ ಧಾರಾವಾಹಿಯಲ್ಲಿ ಸಹನಾ ಸಾವನ್ನಪ್ಪಿದ ದೃಶ್ಯ ನಡೆಯುತ್ತದೆ. ಈ ಸಂದರ್ಭದಲ್ಲಿ ಉಮಾಶ್ರೀ ಅವರ ಅಭಿನಯ ಕಂಡ ಕನ್ನಡದ ಜನತೆ ಫಿದಾ ಆಗಿ ಹೋಗಿದ್ದಾರೆ. ಪುಟ್ಟಕ್ಕನಾಗಿ ಉಮಾಶ್ರೀ ಅವರು ನಿಜಕ್ಕೂ ನಟಿಸಿದ್ದಲ್ಲ, ರಿಯಲ್ ಎನಿಸುವಂತೆ ಭಾಸವಾಯಿತು ಎಂದೇ ಚಪ್ಪಾಳೆ ತಟ್ಟಿದ್ದಾರೆ. ಆ ಎಪಿಸೋಡ್ ಪೂರ್ತಿ ನೋಡುಗರ ಕಣ್ಣಲ್ಲಿ ನೀರು ತರಿಸಿದೆ. ಅಂಥ ಅದ್ಭುತ ಕಲಾದೇವಿ ಉಮಾಶ್ರೀ ಅವರು. ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಜೀವ ತುಂಬುವ ನಟಿ.

ಉಮಾಶ್ರೀ ಅವರು ತುಮಕೂರು ಜಿಲ್ಲೆಯ ತಿಪಟೂರಿನ ನೊಣವಿನಕೆರೆಯಲ್ಲಿ ಜನಿಸಿದರು‌. ಬಡತನದ ಕುಟುಂಬವಾಗಿದ್ದರಿಂದ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದವರು. ಚಿತ್ರಾನ್ನ ಸಿಗುತ್ತೆ ಎಂಬ ಕಾರಣಕ್ಕಾಗಿಯೇ ಉಮಾಶ್ರೀ ಅವರು ನಾಟಕಕ್ಕೆ ಸೇರಿದ್ದರು ಎಂಬ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಂಗಭೂಮಿಯಲ್ಲಿಯೇ ಮುಂದುವರೆದಿದ್ದರು. ಪ್ರೀತಿಸಿ, ಮದುವೆಯಾಗಿದ್ದ ಉಮಾಶ್ರೀ ಅವರ ವೈವಾಹಿಕ ಜೀವನ ಅಷ್ಟೊಂದು ಚೆನ್ನಾಗಿರಲಿಲ್ಲ. ದಾಂಪತ್ಯ ಜೀವನ ಕಡಿದುಕೊಂಡು, ಸಾಕಷ್ಟು ಕಷ್ಟದಿಂದಾನೇ ತಮ್ಮಿಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರು. ಬದುಕಿನ ಜವಾಬ್ದಾರಿಗಳನ್ನು ಅದ್ಭುತವಾಗಿ ನಿಭಾಯಿಸಿದ ಕೀರ್ತಿ ಇವರದ್ದು.

ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ಉಮಾಶ್ರೀ ಅವರು, 1984ರಲ್ಲಿ ತೆರೆಗೆ ಬಂದ ಅನುಭವ ಸಿನಿಮಾ ದೊಡ್ಡ ತಿರುವು ಕೊಟ್ಟಿತ್ತು. ಕಾಶೀನಾಥ್ ನಿರ್ದೇಶಿಸಿ, ಅಭಿನಯಿಸಿದ್ದ ಈ ಸಿನಿಮಾದಲ್ಲಿ ಪದ್ದಿಯಾಗಿ ಮೋಡಿ ಮಾಡಿದ್ದರು. ‘ಅನುಭವ’ದ ಬಳಿಕ ಸಾಕಷ್ಟು ಡಬ್ಬಲ್ ಮೀನಿಂಗ್ ಪಾತ್ರಗಳನ್ನೇ ಮಾಡುತ್ತಾ ಬಂದರು. ಪುಟ್ನಂಜ ಬಂದ ಮೇಲೆ ಉಮಾಶ್ರೀ ಅವರ ಪಾತ್ರಗಳ ರೀತಿಯೇ ಬದಲಾಗಿತ್ತು. ಬ್ಲಾಕ್ ಬಸ್ಟರ್ ಹಿಟ್ ಆದ ಈ ಸಿನಿಮಾದಲ್ಲಿ ಪುಟ್ಮಲ್ಲಿಯಾಗಿ ಗಮನ ಸೆಳೆದರು.

ರಂಗಭೂಮಿ, ಸಿನಿಮಾ, ಕಿರುತೆರೆಯಲ್ಲಿ ಬ್ಯುಸಿ ಇರುವ ಉಮಾಶ್ರೀ ಅವರು ರಾಜಕೀಯದಲ್ಲೂ ಸಕ್ರಿಯವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುವ ಉಮಾಶ್ರೀ ಅವರು, ಶಾಸಕಿಯಾಗಿ, ಸಚಿವೆಯಾಗಿ ಜನಸೇವೆ ಮಾಡಿದ್ದಾರೆ. ನೂರಾರು ಕಾಲ ಸುಖವಾಗಿ ಬಾಳಲಿ. ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೂ ಹಾರೈಸುತ್ತೇವೆ.

More articles

Latest article