ಈ ತೀರ್ಪು ನೆಲದ ಕಾನೂನು ಆಗುವುದರಿಂದ ಇನ್ನು ಮುಂದೆ ಸಂವಿಧಾನ ಬದ್ಧ, ಶಾಂತಿಯುತ ಹೋರಾಟ ಮಾಡುವವರೂ ದಶಕಗಳ ಕಾಲ ಸೆರೆಮನೆಯಲ್ಲಿ ಆರೋಪಿಗಳಾಗಿ ಕೊಳೆಯಬೇಕಾದೀತು, ಹಾಗಾಗಿ ಈ ತೀರ್ಪನ್ನು ಕ್ಯುರೇಟಿವ್ ಪಿಟೀಶನ್ ಮೂಲಕ ಸುಪ್ರೀಂ ಕೋರ್ಟ್ ಹಿಂಪಡೆಯುವಂತೆ ಮಾಡಬೇಕು ಎಂದು ಹಿರಿಯ ಮತ್ತು ಪ್ರಸಿದ್ಧ ವಕೀಲ ದುಷ್ಯಂತ ಧವೆ ಹೇಳುತ್ತಾರೆ – ಶ್ರೀನಿವಾಸ ಕಾರ್ಕಳ, ಚಿಂತಕರು.
“ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೆ ಎಂದು ನಿಮಗೆ ಯಾರು ಹೇಳಿದ್ದು? ಅಲ್ಲಿ ಕಾನೂನುಗಳ ವ್ಯಾಖ್ಯಾನ ನಡೆಯುತ್ತದೆ ಅಷ್ಟೇ” ಎಂದು ಕರಾವಳಿಯ ಹಿರಿಯ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ಹೇಳುತ್ತಿದ್ದರು. ಮೊನ್ನೆ ಉಮರ್ ಖಾಲೀದ್ ಮತ್ತು ಶರ್ಜಿಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿದ ದೇಶದ ಸುಪ್ರೀಂ ಕೋರ್ಟ್ ನ ತೀರ್ಪನ್ನು ಓದಿದಾಗ ಆ ಹಿರಿಯ ಹೋರಾಟಗಾರರ ಮಾತು ಬೇಡವೆಂದರೂ ನೆನಪಾಯಿತು.
ʼದೆಹಲಿ ಗಲಭೆಯ ವಿಸ್ತೃತ ಪಿತೂರಿʼ ಆರೋಪದಲ್ಲಿ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲೀದ್, ಶರ್ಜಿಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮದ್ ಸಲೀಂ ಖಾನ್, ಶದಾಬ್ ಹುಸೇನ್ ಎಲ್ಲಾ ರೀತಿಯಲ್ಲಿಯೂ ಜಾಮೀನಿಗೆ ಅರ್ಹರಿದ್ದರು. ಯಾಕೆಂದರೆ, ಈ ಪ್ರಕರಣದ ವಿಚಾರಣೆ (ಟ್ರಯಲ್) ಐದು ವರ್ಷದ ಬಳಿಕವೂ ಆರಂಭವಾಗಿಲ್ಲ. ದೆಹಲಿ ಪೊಲೀಸರೇ ಹೇಳುವ ಹಾಗೆ 700 ಕ್ಕೂ ಅಧಿಕ ಸಾಕ್ಷಿಗಳ ಸಾಕ್ಷ್ಯ ದಾಖಲಿಸ ಬೇಕಾಗಿದೆ. ಈ ಕಾರಣದಿಂದ ವಿಚಾರಣೆಯು ಸದ್ಯದಲ್ಲಿ ಆರಂಭವಾಗುವ ಅಥವಾ ಮುಗಿಯುವ ಯಾವ ಸಾಧ್ಯತೆಯೂ ಇಲ್ಲ. ದಶಕಗಳ ಕಾಲ ಅದು ಮುಂದುವರಿದರೂ ಅಚ್ಚರಿ ಇಲ್ಲ. ಹೀಗಿರುವಾಗ ಈ ಆರೋಪಿಗಳನ್ನು ಐದು ವರ್ಷಗಳ ಬಳಿಕವೂ ಜೈಲಿನಲ್ಲಿ ಇರಿಸಿಕೊಳ್ಳುವದರಲ್ಲಿ ಯಾವ ಅರ್ಥವಿದೆ?!

ಅಲ್ಲದೆ, ಆರೋಪ ಎಷ್ಟೇ ಗಂಭೀರವಿರಲಿ, ಸಂವಿಧಾನದ ವಿಧಿ 21 ಹೇಳುವ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮೊದಲ ಆದ್ಯತೆ, ಅದು ಭಯೋತ್ಪಾದನಾ ಚಟುವಟಿಕೆಯ ಆರೋಪವೇ ಇದ್ದರೂ, ವಿಚಾರಣೆ ಬಹಳ ವಿಳಂಬವಾಗುವುದಾದರೆ ಆರೋಪಿಯು ಜಾಮೀನಿಗೆ ಅರ್ಹ, Bail is the rule, Jail is the exception ಎಂದು ಸರ್ವೋಚ್ಚ ನ್ಯಾಯಾಲಯವೇ ಅನೇಕ ಬಾರಿ ಹೇಳಿದೆ. ಹಾಗಿರುವಾಗ ಮೊನ್ನೆಯ ತೀರ್ಪಿನಲ್ಲಿ ನ್ಯಾಯಾಧೀಶರ ನಿಲುವು ಸಂಪೂರ್ಣ ಅನ್ಯಾಯವಲ್ಲವೇ?
ದೆಹಲಿ ಗಲಭೆಯ ಪಿತೂರಿ ಪ್ರಕರಣದಲ್ಲಿ ಯಾಕೆ ಈ ಆರೋಪಿಗಳಿಗೆ ಜಾಮೀನು ಸಿಗಬೇಕು ಎಂದು ಅನೇಕ ನ್ಯಾಯವೇತ್ತರು ವಾದಿಸುತ್ತಿದ್ದರೆಂದರೆ, ಇಡೀ ಪ್ರಕರಣವೇ ಬಹುದೊಡ್ಡ ಸುಳ್ಳಿನ ತಳಹದಿಯ ಮೇಲೆ ನಿಂತಿದೆ. ಸಿಎಎ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆ ಅದು ಯೋಜನಾ ಬದ್ಧವಾಗಿ ಯಾರೋ ಕೆಲವು ಯೋಚಿಸಿ, ಕಾರ್ಯಕ್ರಮ ಆಯೋಜಿಸಿ ನಡೆದುದಲ್ಲ. ಸಿಎಎ ಯಲ್ಲಿ, ಮುಸ್ಲಿಮರು ಎನ್ನುವ ಕಾರಣಕ್ಕೇ ಒಂದು ಸಮುದಾಯವನ್ನು ಹೊರಗಿಟ್ಟಾಗ ದೇಶದ ಮುಸ್ಲಿಮರಲ್ಲಿ ಇನ್ನು ಮುಂದೆ ನಮ್ಮ ಪೌರತ್ವಕ್ಕೂ ಸಂಚಕಾರ ಬರುತ್ತದೆ ಎಂಬ ಒಂದು ಅನುಮಾನ ಮೂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ ವ್ಯಾಪಕ ಪ್ರತಿಭಟನೆ ನಡೆಯಿತು. ದೆಹಲಿಯ ಶಾಹೀನ್ ಭಾಗ್ ನಲ್ಲಿ ಮಹಿಳೆಯರು ನಡೆಸಿದ ಪ್ರತಿಭಟನೆಯಂತೂ ಐತಿಹಾಸಿಕವಾದುದು. ಇದರ ಬೆನ್ನಿಗೇ ದೆಹಲಿ ಗಲಭೆ ನಡೆಯಿತು.
ಈಗ ದೆಹಲಿ ಸರಕಾರದಲ್ಲಿ ಕಾನೂನು ಮಂತ್ರಿಯಾಗಿರುವ ಕಪಿಲ್ ಮಿಶ್ರಾ ʼಟ್ರಂಪ್ ಹೋಗುವ ತನಕ ಸುಮ್ಮನಿರುತ್ತೇವೆ, ಆನಂತರದ ಪರಿಣಾಮಗಳಿಗೆ ನಾವು ಹೊಣೆಯಲ್ಲʼ ಎಂಬಂತಹ ಪ್ರಚೋದನಕಾರಿ ಮಾತು ಆಡಿದರು. ಮಾಜಿ ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ʼಗೋಲಿಮಾರೋʼ ಎಂಬ ಹೇಳಿಕೆ ನೀಡಿದರು. ಪರ್ವೇಶ್ ವರ್ಮಾ ʼಮುಸ್ಲಿಮರು ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳನ್ನು ಒಯ್ಯುತ್ತಾರೆʼ ಎಂಬ ಮಾತು ಆಡಿದರು. ಉತ್ತರಪ್ರದೇಶದ ಮುಖ್ಯಮಂತ್ರಿಯವರ ಕೋಮು ಪ್ರಚೋದಕ ಮಾತುಗಳ ಬಗ್ಗೆ ಹೇಳುವ ಅಗತ್ಯವೇ ಇಲ್ಲ.
ದೆಹಲಿಯಲ್ಲಿ ಭುಗಿಲೆದ್ದ ಗಲಭೆ
ಈ ಎಲ್ಲದರ ಪರಿಣಾಮ- ಹಿಂದುತ್ವ ಶಕ್ತಿಗಳು ದೆಹಲಿಯಲ್ಲಿ ಗಲಭೆ ಶುರು ಮಾಡಿದವು. ಭಯಂಕರ ಕೋಮು ಗಲಭೆ ನಡೆದು 53 ಮಂದಿ ಜೀವ ಕಳೆದುಕೊಂಡರು. ಇದರಲ್ಲಿ 38 ಮಂದಿ ಮುಸ್ಲಿಮರು. ಯಾವ ರೀತಿಯಲ್ಲಿ ನೋಡಿದರೂ ಈ ಗಲಭೆ ವ್ಯವಸ್ಥಿತ ಪಿತೂರಿಯ ಮೂಲಕ ನಡೆದುದಲ್ಲ. ಇಂಗ್ಲಿಷ್ ನಲ್ಲಿ ʼಸ್ಪಾಂಟೇನಿಯಸ್ʼ ಎನ್ನುತ್ತಾರಲ್ಲ ಹಾಗೆ ನಡೆದುದು.

ಅಲ್ಲದೆ ಫೆಬ್ರವರಿಯಲ್ಲಿ ದೆಹಲಿ ಗಲಭೆ ನಡೆದರೆ ಶರ್ಜಿಲ್ ಜನವರಿಯ ಅಂತ್ಯದಲ್ಲಿಯೇ ಪೊಲೀಸ್ ಕಸ್ಟಡಿಯಲ್ಲಿದ್ದರು. ಅಲ್ಲದೆ ಉಮರ್ ಖಾಲೀದ್ ದೆಹಲಿಯಲ್ಲಿ ಇರಲೇ ಇಲ್ಲ. ಉಮರ್ ಮತ್ತು ಶರ್ಜಿಲ್ ಹೆಚ್ಚೆಂದರೆ ಮಾಡಿದ್ದು ಭಾಷಣ (ಅದೂ ಉಮರ್ ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬೇಕು ಎಂದಿದ್ದರು), ಶಾಂತಿಯುತ ಪ್ರತಿಭಟನೆ ನಡೆಸುವ ಬಗ್ಗೆ ವಾಟ್ಸಪ್ ಸಂದೇಶಗಳ ರವಾನೆ ಅಷ್ಟೇ. ಹೀಗಿರುವಾಗ ಇದು ವಿಸ್ತೃತ ಪಿತೂರಿಯಾಗುವುದು ಹೇಗೆ ಮತ್ತು ಅದರಲ್ಲಿ ಉಮರ್ ಮತ್ತು ಶರ್ಜಿಲ್ ಮುಖ್ಯ ಪಿತೂರಿಗಾರರು ಆಗುವುದು ಹೇಗೆ?!
ಆದರೆ ನ್ಯಾಯಾಲಯ ಎಷ್ಟೊಂದು ಹಾಸ್ಯಾಸ್ಪದವಾಗಿ ನಡೆದುಕೊಳ್ಳುತ್ತದೆ ನೋಡಿ, ಅದು ಏಳು ಮಂದಿಯನ್ನು ವಿಭಜಿಸಿ ಐದು ಮಂದಿಗೆ ಜಾಮೀನು ನೀಡಿದರೆ ಇಬ್ಬರಿಗೆ ಜಾಮೀನು ನಿರಾಕರಿಸುತ್ತದೆ. ಒಂದೇ ಕೇಸು, ಒಂದೇ ಆರೋಪ ಆದರೆ ಭಿನ್ನ ನ್ಯಾಯ?! ಅಲ್ಲದೆ, ಐದು ವರ್ಷಗಳ ಬಳಿಕವೂ ವಿಚಾರಣೆಯೇ ಆರಂಭವಾಗದಿರುವಾಗ, ಸಾಕ್ಷ್ಯಾಧಾರಗಳೂ ಸಾಬೀತಾಗಿರದಿರುವಾಗ ಇಲ್ಲಿ ಯಾರು ಮುಖ್ಯ ಆರೋಪಿ? ಯಾರು ಸಹ ಆರೋಪಿ ಎಂದು ನಿರ್ಧಾರವಾಗುವುದು ಹೇಗೆ?
ಉಮರ್ ಮತ್ತು ಶರ್ಜಿಲ್ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ ಅವರು ಒಂದು ವರ್ಷದ ಬಳಿಕ ಮತ್ತೆ ಜಾಮೀನಿಗೆ ಯತ್ನಿಸಬಹುದು ಎಂದು ಗಡುವು ವಿಧಿಸುತ್ತದೆ. ಈ ಗಡುವಿಗೆ ಕಾನೂನಿನ ಆಧಾರ ಏನು?! ವಿಚಾರಣಾ ಖೈದಿಯಾಗಿ ಐದು ವರ್ಷ ಇರಿಸಿಕೊಂಡಿರುವುದು ಸರಿಯಲ್ಲ ಎಂದು ಒಪ್ಪುವ ನ್ಯಾಯಾಲಯ, ಆದರೂ ಇದು ಸಂವಿಧಾನದಲ್ಲಿನ ಅವಕಾಶದ ಉಲ್ಲಂಘನೆಯ ಘಟ್ಟವನ್ನು ಇನ್ನೂ ತಲಪಿಲ್ಲ ಎನ್ನುತ್ತದೆ. ಹಾಗಾದರೆ ಒಂದು ವರ್ಷದ ಬಳಿಕ ಸಂವಿಧಾನದ ಅವಕಾಶದ ಉಲ್ಲಂಘನೆಯ ಘಟ್ಟವನ್ನು ತಲಪುತ್ತದೆ ಎಂಬುದು ನ್ಯಾಯಾಲಯದ ಅಂಬೋಣವೇ?
ನಷ್ಟ ತುಂಬಿಕೊಡುವವರು ಯಾರು?
ಉಮರ್ ಮತ್ತು ಶರ್ಜಿಲ್ ತುಂಬಾ ಓದಿಕೊಂಡ ಪ್ರತಿಭಾವಂತರು. ಉಮರ್ ಜೆಎನ್ ಯುವಿನಲ್ಲಿ ಓದಿ ಪಿ ಎಚ್ ಡಿ ಓದಿದವನಾದರೆ ಶರ್ಜಿಲ್ ಮುಂಬೈ ಐಐಟಿಯ ಪದವೀಧರ. ಅಮೂಲ್ಯ ಯುವ ವಯಸ್ಸು. ಪೊಲೀಸರು ಏನೋ ಹೇಳಿದರು ಎಂದು ಈ ಯುವ ಮಂದಿಯನ್ನು ಈಗಾಗಲೇ ಐದು ವರ್ಷ ಜೈಲಿನಲ್ಲಿ ಇರಿಸಿಯಾಗಿದೆ. ಇನ್ನೂ ಟ್ರಯಲ್ ಶುರುವಾಗಿಲ್ಲ. ಯಾವಾಗ ಮುಗಿಯುತ್ತದೋ ಗೊತ್ತಿಲ್ಲ. ದಶಕಗಳ ಕಾಲ ಅದು ಮುಂದುವರಿದರೂ ಅಚ್ಚರಿಯಿಲ್ಲ. ಹೀಗಿರುವಾಗ ಅಷ್ಟು ಕಾಲವೂ ಇವರನ್ನು ಜೈಲಿನಲ್ಲಿ ಇರಿಸಿಕೊಂಡು, ಆ ಬಳಿಕ ಇವರ ಅಮಾಯಕರು ಎಂದು ತೀರ್ಪು ಬಂದರೆ ಅವರಿಗೆ ಈಗ ಆಗಿರುವ ನಷ್ಟವನ್ನು ತುಂಬಿಕೊಡುವವರು ಯಾರು?!
ಇದು ಕೇವಲ ಉಮರ್ ಖಾಲೀದ್ ಶರ್ಜಿಲ್ ಇಮಾಮ್ ಜಾಮೀನಿನ ಪ್ರಶ್ನೆಯಲ್ಲ. ಐದು ವರ್ಷ ಜೈಲಿನಲ್ಲಿದ್ದವರಿಗೆ ಇನ್ನೂ ಕೆಲವು ವರ್ಷ ಇರುವುದು ಕಷ್ಟವೇನಲ್ಲ. ಆ ಪರಿಸ್ಥಿತಿಗೆ ಅವರು ಒಗ್ಗಿಕೊಂಡಿದ್ದಾರೆ. ಆದರೆ, ಇಂತಹ ತೀರ್ಪುಗಳ ದೂರಗಾಮಿ ಪರಿಣಾಮ ಬೆಚ್ಚಿಬೀಳಿಸುವಂಥದ್ದು.
ಸುಪ್ರೀಂ ಕೋರ್ಟ್ ನ ತೀರ್ಪು ಯಾವತ್ತೂ ನೆಲದ ಕಾನೂನು ಆಗುತ್ತದೆ. ಅದನ್ನು ಮುಂದೆ ಮಾದರಿಯಾಗಿ ಪರಿಗಣಿಸಲಾಗುತ್ತದೆ. ಮುಂದೆ ಯಾರಾದರೂ ಆರೋಪಿಗಳು ಜಾಮೀನಿಗೆ ಯತ್ನಿಸಿದರೆ ಆಗ ಈ ತೀರ್ಪನ್ನು ಆಧರಿಸಿಯೇ ಅವರಿಗೂ ಜಾಮೀನು ನಿರಾಕರಿಸಿ ಅವರು ದಶಕಗಳ ಕಾಲ ಅನ್ಯಾಯವಾಗಿ ಜೈಲಿನಲ್ಲಿ ಕೊಳೆಯುವಂತೆ ಮಾಡಬಹುದು.
ಅಂಬೇಡ್ಕರ್ ಕರೆಯನ್ನು ಇಂದು ಪಾಲಿಸಿದರೆ?

ಅಲ್ಲದೆ, ಉಮರ್ ಮತ್ತು ಶರ್ಜಿಲ್ ಯಾವುದೇ ಬಾಂಬ್ ಸ್ಫೋಟ ನಡೆಸಿಲ್ಲ. ಗಲಭೆ ನಡೆಸಿಲ್ಲ. ಇಷ್ಟಾದ ಮೇಲೂ ʼಯಾವುದೇ ಇತರ ರೀತಿಯಲ್ಲಿʼ ಎಂಬ ಕಾನೂನಿನ ಒಂದು ಸಣ್ಣ ವಾಕ್ಯ ಹಿಡಿದುಕೊಂಡು ಇವರು ಅಪರಾಧಿಗಳು ಎನ್ನುವುದಾದರೆ, ಮುಂದೆ ಯಾವುದೇ ರೀತಿಯ ಶಾಂತಿಯುತ, ಪ್ರಜಾಸತ್ತಾತ್ಮಕ ಪ್ರತಿಭಟನೆ ಮಾಡಿದವರನ್ನೂ ಇದೇ ನಿಯಮದ ಅಡಿಯಲ್ಲಿ ದಶಕಗಳ ಕಾಲ ಜೈಲಿನಲ್ಲಿಡಬಹುದು. ಭಯೋತ್ಪಾದನೆಯ ವ್ಯಾಖ್ಯೆಯನ್ನು ಹೀಗೆ ಹಿಗ್ಗಿಸಿದರೆ ಈ ದೇಶದಲ್ಲಿ ಇನ್ನು ಮುಂದೆ ಯಾವುದೇ ಪ್ರತಿಭಟನೆಯೂ ನಡೆಯುವಂತಿಲ್ಲ!
ಈ ಹಿನ್ನೆಲೆಯಲ್ಲಿಯೇ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸಂಜಯ ಹೆಗ್ಡೆ ಡಾ ಅಂಬೇಡ್ಕರ್ ರ ಕರೆಯನ್ನು ಪ್ರಸ್ತಾಪಿಸುತ್ತಾರೆ. ಎಜುಕೇಟ್, ಆರ್ಗನೈಝ್, ಅಜಿಟೇಟ್ (ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಟ ನಡೆಸಿ) ಎಂದು ಅವರು ಕರೆಕೊಟ್ಟಿದ್ದರು. ಉಮರ್ ವಿಷಯದಲ್ಲಿ ಈಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮಾನ್ಯ ಮಾಡುವುದೇ ಆದರೆ, ಅಂಬೇಡ್ಕರ್ ಅವರ ʼಸಂಘಟಿತರಾಗಿ, ಹೋರಾಟ ನಡೆಸಿʼ ಎಂಬ ಮಾತನ್ನು ಪಾಲಿಸ ಹೊರಟವರ ಕತೆ ಏನು ಎಂದು ಮಾನ್ಯ ಹೆಗ್ಡೆಯವರು ಹೇಳುತ್ತಾರೆ.
ಈ ತೀರ್ಪು ನೆಲದ ಕಾನೂನು ಆಗುವುದರಿಂದ ಇನ್ನು ಮುಂದೆ ಸಂವಿಧಾನ ಬದ್ಧ, ಶಾಂತಿಯುತ ಹೋರಾಟ ಮಾಡುವವರೂ ದಶಕಗಳ ಕಾಲ ಸೆರೆಮನೆಯಲ್ಲಿ ಆರೋಪಿಗಳಾಗಿ ಕೊಳೆಯಬೇಕಾದೀತು, ಹಾಗಾಗಿ ಈ ತೀರ್ಪನ್ನು ಕ್ಯುರೇಟಿವ್ ಪಿಟೀಶನ್ ಮೂಲಕ ಸುಪ್ರೀಂ ಕೋರ್ಟ್ ಹಿಂಪಡೆಯುವಂತೆ ಮಾಡಬೇಕು ಎಂದು ಹಿರಿಯ ಮತ್ತು ಪ್ರಸಿದ್ಧ ವಕೀಲ ದುಷ್ಯಂತ ಧವೆ ಹೇಳುತ್ತಾರೆ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಅದೊಂದು ದೊಡ್ಡ ಕಥೆ-ಆತ್ಮಕಥನ ಸರಣಿ 13-ಪ್ರಾಥಮಿಕ ಶಾಲೆಗೆ ವಿದಾಯ


