ಹೊಸ ಯುಜಿಸಿ ಕರಡು ನಿಯಮಾವಳಿ – ವಿಶ್ವವಿದ್ಯಾನಿಲಯಗಳನ್ನು ಲಯ ಮಾಡುವ ಹುನ್ನಾರ

Most read

ವಾಸ್ತವಗಳನ್ನು ಮರೆತು ರಾಜ್ಯಪಾಲರಿಗೆ ವಿವಿಧ ವಿಶ್ವವಿದ್ಯಾನಿಲಯದ ಚುಕ್ಕಾಣಿ ಹಿಡಿಯುವವರ ಆಯ್ಕೆಯ ಅಧಿಕಾರವನ್ನು ವಹಿಸುವುದು ವಿಶ್ವವಿದ್ಯಾನಿಲಯಗಳನ್ನು ಕೊಲ್ಲುವುದಕ್ಕೆ ಸಮಾನವಾದ ಕೆಲಸ ಎಂಬುದು ನಿಸಂಶಯ. ಶಿಕ್ಷಣತಜ್ಞರು, ವಿಷಯ ತಜ್ಞರು, ವಿಶ್ರಾಂತ ಮತ್ತು ಹಾಲಿ ಕುಲಪತಿಗಳು, ಪ್ರಾಧ್ಯಾಪಕರು ತಮ್ಮ ಮೌನವನ್ನು ಮುರಿದು, ಹಿತಾಸಕ್ತಿಯನ್ನು ಬಿಟ್ಟು, ಗಟ್ಟಿಯಾಗಿ ಕರಡನ್ನು ವಿರೋಧಿಸಬೇಕಿದೆ-ಸಬಿಹಾ ಭೂಮೀಗೌಡ, ವಿಶ್ರಾಂತ ಕುಲಪತಿಗಳು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.

 
ವಿಶ್ವವಿದ್ಯಾನಿಲಯದ ಅನುದಾನ ಆಯೋಗವು (ಯು ಜಿ ಸಿ ) 2025 ರ ಜನವರಿ 5ರಂದು ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಯ ಕರಡು ಬಿಡುಗಡೆ ಮಾಡಿ, ಒಂದು ತಿಂಗಳ ಒಳಗೆ ಅದರ ಅಭಿಪ್ರಾಯಗಳನ್ನು ಸೂಚಿಸಲು ತಿಳಿಸಿದೆ. ಕಾಲಕಾಲಕ್ಕೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ತರುವುದು ಸಾಮಾನ್ಯ ಸಂಗತಿ. ಆದರೆ ಈ ಬಾರಿ ತಂದಿರುವ ಕರಡು ಹಲವು ಕಾರಣಗಳಿಗಾಗಿ ಚರ್ಚೆಯ ಕೇಂದ್ರವಾಗಿದೆ. 

ಇಲ್ಲಿಯವರೆಗೆ ಕುಲಪತಿಗಳ ನೇಮಕಕ್ಕೆ ರಾಜ್ಯ ಸರ್ಕಾರವು ರಚಿಸುತ್ತಿದ್ದ ಶೋಧನಾ ಸಮಿತಿಯಲ್ಲಿ ಕುಲಾಧಿಪತಿಗಳ ನಾಮಿನಿ, ಯು ಜಿ ಸಿ ನಾಮಿನಿ, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನಾಮಿನಿ ಮತ್ತು ರಾಜ್ಯ ಸರ್ಕಾರದ ನಾಮಿನಿ- ಹೀಗೆ ನಾಲ್ವರು ಸದಸ್ಯರು ಇರುತ್ತಿದ್ದರು. ಇದರಲ್ಲಿ ರಾಜ್ಯ ಸರ್ಕಾರದ ನಾಮಿನಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಿದ್ದರು. ಸಮಿತಿಯು ಆಯ್ಕೆ ಮಾಡಿದ ಅರ್ಹರಾದ ಮೂವರು ಅಭ್ಯರ್ಥಿಗಳ ಹೆಸರಿನಲ್ಲಿ ಒಬ್ಬರನ್ನು ಸರಕಾರ ಮತ್ತು ಕುಲಾಧಿಪತಿ/ ರಾಜ್ಯಪಾಲರು ಸಹಮತದ ಮೂಲಕ ಕುಲಪತಿಯಾಗಿ ನೇಮಿಸಲಾಗುತ್ತಿತ್ತು. ಹೊಸ ನಿಯಮಾವಳಿಯ ಕರಡು ಕೇವಲ ಮೂವರು ಸದಸ್ಯರ ಶೋಧನಾ ಸಮಿತಿ ರಚಿಸುವುದನ್ನು ತಿಳಿಸುತ್ತದೆ. ಇದರ ಪ್ರಕಾರ ರಾಜ್ಯಪಾಲರ ನಾಮಿನಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಯುಜಿಸಿ ನಾಮಿನಿ ಮತ್ತು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನಾಮಿನಿಗಳು ಇತರ ಸದಸ್ಯರೆಂದು ಈ ಕರಡು ಹೇಳುತ್ತಿದೆ. ಕಮಿಟಿಯ ರಚನೆಯನ್ನು ರಾಜ್ಯಪಾಲರೇ ಮಾಡುವುದು ಹಾಗೂ ನೇಮಕಾತಿಯ ಅಂತಿಮ ಅಧಿಕಾರವೂ ಅವರದೇ ಆಗಿರುತ್ತದೆ ಎಂಬುದನ್ನೂ ಈ ನಿಯಮಾವಳಿ ತಿಳಿಸುತ್ತದೆ. ಈ ಹೊಸ ನಿಯಮಾವಳಿಯ ಕರಡು ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯ ಸರಕಾರದ ಅಧಿಕಾರವನ್ನು ಸಂಪೂರ್ಣವಾಗಿ ಅಂಚಿಗೆ ತಳ್ಳಿರುವುದಲ್ಲ, ಬದಲಾಗಿ ಸಂಪೂರ್ಣವಾಗಿ ಕಿತ್ತುಹಾಕಿದೆ. ಆ ಕಾರಣಕ್ಕಾಗಿ  ಅತ್ಯಂತ ಅಪಾಯಕಾರಿಯೂ ಖಂಡನೀಯವೂ ಆಗಿದೆ. 

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಸಾದ್

ಕುಲಪತಿ ಹುದ್ದೆಗೆ ಅರ್ಹತೆಯನ್ನು ಈ ಕರಡಿನಲ್ಲಿ ನಿಗದಿ ಮಾಡಿರುವ ರೀತಿ ಎರಡನೆಯ ಕಳವಳಕಾರಿ ಸಂಗತಿ ಯಾಗಿದೆ. ಇದುವರೆಗೆ ಕನಿಷ್ಠ 10 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದ, ತಮ್ಮ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯನ್ನು ಮಾಡಿದ, ಗ್ರಂಥಗಳನ್ನು ರಚಿಸಿದ, ಆಡಳಿತಾತ್ಮಕ ಅನುಭವ ಹೊಂದಿದ ಶಿಕ್ಷಣತಜ್ಞರು ಕುಲಪತಿ ಹುದ್ದೆಗೆ  ಅರ್ಹರು  ಎಂದು ಪರಿಗಣಿಸಲಾಗುತ್ತಿತ್ತು. ಹೊಸ ನಿಯಮಾವಳಿಯ ಪ್ರಕಾರ ‘ವಿಶ್ವವಿದ್ಯಾನಿಲಯದಲ್ಲಿ ಬೋಧನೆಯ ಅನುಭವವೂ ಇಲ್ಲದ, ಖಾಸಗಿ ಉದ್ದಿಮೆಯ, ಅನುಭವಿ ವ್ಯಕ್ತಿಯು ಕುಲಪತಿಯಾಗುವ ಅರ್ಹತೆಯನ್ನು ಪಡೆಯುತ್ತಾರೆ’. ವಿಶ್ವವಿದ್ಯಾನಿಲಯದಲ್ಲಿ ಇರುವ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಮತ್ತು ಅಧ್ಯಾಪಕ ವರ್ಗದವರು. ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನಾ ಚಟುವಟಿಕೆಗಳು, ಸಂಶೋಧನಾ ಯೋಜನೆಗಳು ವಿಶ್ವವಿದ್ಯಾನಿಲಯದ ಸರ್ವಾಂಗೀಣ ಅಭಿವೃದ್ಧಿಯ ಕನಸುಗಳನ್ನು ಆ ಕ್ಷೇತ್ರದಲ್ಲಿ ಇದ್ದವರಂತೆ, ಹೊರಗಿನ ಖಾಸಗಿ ರಂಗದ ಇತರರಿಂದ ಕಾಣಲು ಸಾಧ್ಯವೇ? ಅಲ್ಲಿಗೆ ಶೈಕ್ಷಣಿಕ ಆಡಳಿತದ ಅನುಭವ ಇರುವವರು ಅವಶ್ಯಕವೇ ಹೊರತು ಸಾಮಾನ್ಯ ಆಡಳಿತ ಅನುಭವ ಹೊಂದಿರುವವರಲ್ಲ. 

ಕುಲಪತಿ ಹುದ್ದೆಯ ಅರ್ಜಿ ನಮೂನೆಯ ಕೊನೆಯ ಕಾಲಂನಲ್ಲಿ ‘ಈ ವಿಶ್ವವಿದ್ಯಾನಿಲಯದ ಕುರಿತ ನಿಮ್ಮ ಕನಸು/ ಮುಂಗಾಣ್ಕೆ (ವಿಷನ್) ಏನು ಎಂಬ ಪ್ರಶ್ನೆ ಇದೆ. ಇಲ್ಲಿ ತಾನು ಕುಲಪತಿಯಾಗಲು ಬಯಸುವ ವಿಶ್ವವಿದ್ಯಾನಿಲಯದ ಸರ್ವಾಂಗೀಣ ಅಭಿವೃದ್ಧಿಯ ಕುರಿತ ನೀಲನಕ್ಷೆಯ ಸ್ವರೂಪವನ್ನು ಅಭ್ಯರ್ಥಿಯು ಮಂಡಿಸಬೇಕಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಕನಿಷ್ಠ 25 – 30 ವರ್ಷಗಳ ಕಾಲ ತಾವು ದುಡಿದ, ತಾವು ಭೇಟಿ ಮಾಡಿದ ವಿವಿಧ ವಿಶ್ವವಿದ್ಯಾನಿಲಯಗಳ ಆಡಳಿತದಲ್ಲಿ ಕಂಡ ಪ್ರಗತಿಪರ, ಅಭಿವೃದ್ಧಿಪರ ಹೆಜ್ಜೆಗಳನ್ನು ಮತ್ತು ಕೆಲವೊಮ್ಮೆ ಅಲ್ಲಿ ತಾವು ಕಂಡ ದುರ್ಬಲ ಆಡಳಿತದ ಅನುಭವಗಳನ್ನು ನೆನಪಿಸಿಕೊಂಡೇ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ಕುರಿತ ಹೊಸಕಾಣ್ಕೆ, ಮಾದರಿಗಳನ್ನು ಮತ್ತು ಆ ವಿಶ್ವವಿದ್ಯಾನಿಲಯದ ಬೆಳವಣಿಗೆಗೆ ಅವಶ್ಯಕವಾದ ಗುರುತರ ಹೆಜ್ಜೆಗಳನ್ನು ವಿವರಿಸಿರುತ್ತಾರೆ. 

ಇಂತಹ ಬದಲಾವಣೆಯೇ ಖಾಸಗಿ ರಂಗದ ಯಾರನ್ನು ಬೇಕಾದರೂ ತಮ್ಮ ಸಿದ್ದಾಂತ ತಮ್ಮ ಹಿತಾಸಕ್ತಿಗೆ ಹತ್ತಿರವಾಗಿರುವವರನ್ನು ಕುಲಾಧಿಪತಿಗಳು ವಿಶ್ವವಿದ್ಯಾನಿಲಯಕ್ಕೆ ನೇಮಿಸುವ ಅವಕಾಶವನ್ನು ಪಡೆಯುವಂತಾಗಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ. 

ಈ ವಿಚಾರಗಳ ಹಿನ್ನೆಲೆಯಲ್ಲಿ ನಾವು ಎತ್ತಿಕೊಳ್ಳಬೇಕಾದ ಮುಖ್ಯ ಚರ್ಚೆಗಳೆಂದರೆ-

ಈಗ ಬಿಡುಗಡೆ ಮಾಡಿರುವ ಹೊಸ ನಿಯಮಾವಳಿಯ ಕರಡನ್ನು ಯಾರ ಜೊತೆ -ಎಂದರೆ ದೇಶದ ಪ್ರಮುಖ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು, ವಿಷಯ ತಜ್ಞರು, ಹಾಲಿ ಕುಲಪತಿಗಳು – ಹೀಗೆ ಯಾವ ಗುಂಪಿನ ಜೊತೆ ಚರ್ಚಿಸಿ ಸಿದ್ಧಪಡಿಸಿದೆ ಎಂಬುದನ್ನು ಕೇಳಬೇಕಿದೆ. ಅರ್ಥಾತ್ ಅಂತಹ ಪೂರ್ವಭಾವಿ ಚರ್ಚೆ ಈಗಾಗಲೇ ನಡೆದಿದೆ ಎಂಬುದೇ ಸಂಶಯಾಸ್ಪದ.

ಕರಡನ್ನು ಬಿಡುಗಡೆ ಮಾಡಿ, ಅದರ ಬಗ್ಗೆ ದೇಶಾದ್ಯಂತದ ಎಲ್ಲರೂ ತಮ್ಮ ಅಭಿಪ್ರಾಯ, ನಿಲುವು, ಆಕ್ಷೇಪಣೆಗಳನ್ನು ಸಲ್ಲಿಸಲು ಕೇವಲ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಕರಡಿನ ಕುರಿತು ಸರಿಯಾದ ಚರ್ಚೆ. ಪರಾಮರ್ಶೆ ಮಾಡಲು ಅವಕಾಶವನ್ನೇ ನೀಡಬಾರದು ಎಂಬುದು ಇದರ ಹಿಂದಿನ ಉದ್ದೇಶ ಇದ್ದಂತಿದೆ. ಇದು ಪ್ರಶ್ನಾರ್ಹವಾದದ್ದು. ಈ ಹಿಂದೆ ಎನ್ಇಪಿ ಕರಡನ್ನು ಬಿಡುಗಡೆ ಮಾಡಿದಾಗಲೂ ಇದೇ ಬಗೆಯಲ್ಲಿ ಕಡಿಮೆ ಕಾಲಾವಕಾಶವನ್ನು ಕೇಂದ್ರ ಸರ್ಕಾರ ನೀಡಿದ್ದನ್ನು ಮರೆಯುವಂತಿಲ್ಲ. ಇಂಥ ತರಾತುರಿಯಲ್ಲಿ ಹೊಸ ನಿಯಮಾವಳಿಯನ್ನು ಜಾರಿಗೆ ತರುವ ತುರ್ತಾದರೂ ಏನು ಎಂಬ ಪ್ರಶ್ನೆ ಎಲ್ಲರಲ್ಲಿ ಏಳುವುದು ಸಹಜ. ಆದರೆ ಉತ್ತರ ಕೊಡುವವರು ಯಾರು? 

ಒಂದು ವಿಶ್ವವಿದ್ಯಾನಿಲಯದಲ್ಲಿ ಹೊಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ಅನ್ನು ಆರಂಭಿಸುವ ಸಂದರ್ಭದಲ್ಲಿ ಯುಜಿಸಿ ಐದು ವರ್ಷಗಳವರೆಗೆ ಮಾತ್ರ ಆ ವಿಭಾಗವನ್ನು ಮುನ್ನಡೆಸಲು ಬೇಕಾದ ಆರ್ಥಿಕ ಅನುದಾನವನ್ನು ನೀಡುತ್ತದೆ. ಉಳಿದಂತೆ ರಾಜ್ಯ ಸರ್ಕಾರವೇ ಎಲ್ಲ ಹೊರೆಯನ್ನು ಭರಿಸಬೇಕು. ಹೀಗಿರುವಾಗ ವಿಶ್ವವಿದ್ಯಾನಿಲಯದ ಕುಲಪತಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಸರಕಾರವನ್ನು ಸಂಪೂರ್ಣವಾಗಿ ಹೊರಗೆ ಇಟ್ಟಿರುವುದರ ಉದ್ದೇಶ ಏನು ಎನ್ನುವಂಥದ್ದು ನಾವು ಕೇಳಬೇಕಾದ ಮುಖ್ಯ ಪ್ರಶ್ನೆಯಾಗಿದೆ. 

ರಾಜ್ಯಪಾಲರಾಗಿ ಬರುವವರು ಸಾಮಾನ್ಯವಾಗಿ ಬೇರೆ ಬೇರೆಯ ರಾಜ್ಯದವರು ರಾಜಕೀಯ ವ್ಯಕ್ತಿಗಳು. ಅವರು ಶಿಕ್ಷಣತಜ್ಞರೇ ಆಗಿರುತ್ತಾರೆಂಬ ನಂಬಿಕೆಯಿಲ್ಲ. ಅವರಿಗೆ ಸ್ಥಳೀಯ ರಾಜ್ಯದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಅನನ್ಯತೆಗಳಾಗಲಿ, ರಾಜ್ಯದ ಶೈಕ್ಷಣಿಕ ವಲಯದ ಶಿಕ್ಷಣ ತಜ್ಞರ ಕುರಿತಾಗಲಿ ಗೊತ್ತಿರುವ ಸಾಧ್ಯತೆಗಳು ವಿರಳ. ರಾಜ್ಯಪಾಲರ ಕಚೇರಿಯೂ ಈ ವಿಚಾರದಲ್ಲಿ ಕೂಪಮಂಡೂಕವೇ ಆಗಿರುತ್ತದೆ. ಇಂಥ ವಾಸ್ತವಗಳನ್ನು ಮರೆತು ರಾಜ್ಯಪಾಲರಿಗೆ ವಿವಿಧ ವಿಶ್ವವಿದ್ಯಾನಿಲಯದ ಚುಕ್ಕಾಣಿ ಹಿಡಿಯುವವರ ಆಯ್ಕೆಯ ಅಧಿಕಾರವನ್ನು ವಹಿಸುವುದು ವಿಶ್ವವಿದ್ಯಾನಿಲಯಗಳನ್ನು ಕೊಲ್ಲುವುದಕ್ಕೆ ಸಮಾನವಾದ ಕೆಲಸ ಎಂಬುದು ನಿಸಂಶಯ.

ರಾಜ್ಯಪಾಲರಿಗೆ ನೀಡುವ ಈ ಪರಮಾಧಿಕಾರವು ವಿಶ್ವವಿದ್ಯಾನಿಲಯದಲ್ಲಿ ಅ-ರಾಜಕೀಯ ವಾತಾವರಣವನ್ನು ನಿರ್ಮಿಸುತ್ತದೆ ಎನ್ನುವಂತಿಲ್ಲ. ಬದಲಾಗಿ ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಸರಕಾರಗಳ ಮೇಲೆ ಅಧಿಕಾರ ನಡೆಸುವ ಕೇಂದ್ರದ ನಡೆಯಂತೆ, ವಿಶ್ವವಿದ್ಯಾನಿಲಯದ ಆವರಣದಲ್ಲಿ ತಮ್ಮ ಸೈದ್ಧಾಂತಿಕ ನಿಲುವಿನವರನ್ನು ನೇಮಕಾತಿ ಮಾಡಲು ರಹದಾರಿಯನ್ನು ಮಾಡಿಕೊಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಭ್ರಷ್ಟಾಚಾರವನ್ನು ತಡೆದು ಪಾರದರ್ಶಕತೆ ತರುವುದು ಈ ಕರಡಿನ ಉದ್ದೇಶ ಎನ್ನುವುದಂತೂ ದೂರದ ಮಾತು. ಇವತ್ತು ರಾಜ್ಯಪಾಲರ ಕಚೇರಿಯೇ ಭ್ರಷ್ಟಾಚಾರದ ಕೇಂದ್ರವಾಗಿರುವುದು ಅದನ್ನು ಹತ್ತಿರದಿಂದ ಬಲ್ಲ ಎಲ್ಲರೂ ತಿಳಿದ ಸಂಗತಿ.

ಇದೇ ಸಂದರ್ಭದಲ್ಲಿ ಹೊಸ ನಿಯಮಾವಳಿಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಿಯಮಗಳಲ್ಲೂ ಉದಾಹರಣೆಯನ್ನು ತೋರಿಸಿರುವುದು ಕಂಡುಬರುತ್ತದೆ . ಎಂದರೆ ಈ ಹಿಂದೆ ಯುಜಿಸಿಯು ಅಧ್ಯಾಪಕರ ನೇಮಕಾತಿಗೆ ತಾನೇ ಹೊರಡಿಸಿದ್ದ ನಿಯಮಗಳನ್ನು ಸಡಿಲಗೊಳಿಸಿದೆ. ಇದನ್ನು ಅನುಸರಿಸುವ ಅನಿವಾರ್ಯತೆಯಿಂದಾಗಿ ಕರ್ನಾಟಕ ಸರಕಾರವು ಕೋರ್ಟ್ ನಿರ್ದೇಶನದಂತೆ, ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಯುಜಿಸಿಯ ನಿಯಮಾನುಸಾರ ಅರ್ಹತೆ ಪಡೆದಿಲ್ಲ ಎನ್ನುವ ಕಾರಣಕ್ಕಾಗಿ ಅನೇಕರನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈ ಬಿಡಲು ನಿರ್ಧರಿಸಿರುವುದು ವರದಿಯಾಗಿದೆ. ಹೀಗಿರುವಾಗ ನಿಯಮಗಳನ್ನು ಕಠಿಣಗೊಳಿಸುವ ಬದಲು ಸಡಿಲಗೊಳಿಸಿರುವ ಉದ್ದೇಶ ಅರ್ಥವಾಗುವುದಿಲ್ಲ. ಇನ್ನೊಂದೆಡೆ ಹೀಗೆ ಕಾಲಕಾಲಕ್ಕೆ ಒಂದೊಂದು ಬಗೆಯ ನಿಯಮಗಳನ್ನು ತರುವಾಗ ಹಿಂದೆ ಇರುವ ನಿಯಮಗಳಿಗೆ ವಿರುದ್ಧವಾದ ನಿಯಮಗಳನ್ನು ತರುವ ಪ್ರಸ್ತುತ ಯಾಕೆ 

ಆಗಬೇಕಿರುವ ಮುಖ್ಯ ಕೆಲಸ

ಡಾ.ಸಬಿಹಾ ಭೂಮೀಗೌಡ

ವಿಶ್ರಾಂತ ಕುಲಪತಿಗಳು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.‌

ಇದನ್ನೂ ಓದಿ- ವಿವಿಗಳಿಗೆ ಉಪಕುಲಪತಿ ನೇಮಕ; ರಾಜ್ಯಗಳ ಅಧಿಕಾರ ಕಸಿದುಕೊಳ್ಳುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ಖಂಡನೆ

More articles

Latest article