ಉಡುಪಿ ಜಿಲೆಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಏಕಾಏಕಿ ಸಂಭವಿಸಿದ ಪ್ರವಾಹದಿಂದಾಗಿ ನೀರಿನಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಅತ್ಯಲ್ಪ ಅವಧಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮೇಘ ಸ್ಪೋಟವಾಗಿರಬಹುದು ಹೇಳಲಾಗುತ್ತಿದೆ. ಮಧ್ಯಾಹ್ನ 2.30ರ ವೇಳೆಗೆ ಸಿಡಿಲಬ್ಬರ ಹಾಗೂ ಭಾರೀ ಗಾಳಿಯಿಂದ ಕೂಡಿದ ಮಳೆ ಸುರಿದಿದೆ. ಇದರಿಂದಾಗಿ ನದಿಯಲ್ಲಿ ಹಠಾತ್ ಆಗಿ ಕೆಸರು ಮಿಶ್ರಿತ ನೀರು ಏರಿಕೆಯಾಗಿದೆ. ಕಬ್ಬಿನಾಲೆ ತಿಂಗಳಮಕ್ಕಿ ಪ್ರದೇಶಗಳಲ್ಲಿ ಮೇಘ ಸ್ಫೋಟವಾಗಿದೆಯೇ ಅಥವಾ ಗುಡ್ಡ ಜರಿದಿದೆಯೇ ಎಂಬ ಕುರಿತು ಖಚಿತ ಮಾಹಿತಿ ಲಭಿಸಿಲ್ಲ.
ಭೀಕರ ಜಲ ಪ್ರವಾಹದಿಂದಾಗಿ ಹಲವು ಮನೆಗಳು, ಕಾರು ಬೈಕ್ ಗಳು ಕೊಚ್ಚಿ ಹೋಗಿದೆ. ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿದ್ದರಿಂದ ಭೀಕರ ಪ್ರವಾಹ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಮುದ್ರಾಡಿಯ ಹೊಸ ಕಂಬದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3 ಮನೆಗಳು ಅರ್ಧದಷ್ಟು ಮುಳುಗಿದ್ದು, ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಗ್ಗ ಕಟ್ಟಿ ಮನೆ ಮಂದಿಯನ್ನು ರಕ್ಷಿಸಿದ್ದಾರೆ.
ಮುದ್ರಾಡಿ ಆಸುಪಾಸಿನಲ್ಲಿ ಎಂಟು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಬದಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ಇನ್ನೆರಡು ದಿನ ಭಾರೀ ಮಳೆ ಸೂಚನೆ
ಪ್ರವಾಹದ ಕುರಿತು ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ‘ಅ.9ರ ವರೆಗೆ ಇದೇ ರೀತಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಹೆಬ್ರಿ ತಾಲೂಕಿನ ಬಲ್ಲಾಡಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು, ನೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.