ಇಂದಿನ ಕರ್ನಾಟಕದ ಮುಸ್ಲಿಮರ ಪ್ರಮುಖ ಸಮಸ್ಯೆ /ಬೇಡಿಕೆಗಳನ್ನು ಸೂಕ್ತ ಹಾಗು ಶೀಘ್ರವಾಗಿ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್ ರವರಿಗೆ ಕರ್ನಾಟಕ ಮುಸ್ಲಿಂ ಯೂನಿಯನ್ ಮನವಿ ಮಾಡಿದೆ.
ಮನವಿ ಪತ್ರದಲ್ಲಿ, ನಮ್ಮ ಕರ್ನಾಟಕ ರಾಜ್ಯ ಸೂಫಿ ಶರಣರು ದಾಸರ ನೆಲೆಯಬೀಡು, ನ್ಯಾಯ, ಸೌಹಾರ್ದ ಸಹಬಾಳ್ವೆಯ ಕನ್ನಡನಾಡಾಗಿದೆ. ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಹಾಗು ಸಮ ಸಮಾಜದ ಗುರಿಯೊಂದಿಗೆ ಬಸವಣ್ಣ, ಟಿಪ್ಪುಸುಲ್ತಾನರು, ದಿ.ದೇವರಾಜ ಅರಸರಂತಹ ನೂರಾರು ಹುತಾತ್ಮ ಮಹನೀಯರು ದಂತಕಥೆಗಳಾಗಿ ಬದುಕಿದ, ಪರಿವರ್ತನೆಯ ಸಾಮಾಜಿಕ ನ್ಯಾಯ ಬುನಾದಿಯ ಸಮಾಜ ನಿರ್ಮಾಣದ ನಾಡಿಗೆ ಜೀವತುಂಬಿದವರು ಎಂದು ಹೇಳಿದ್ದಾರೆ.
ಆದರೆ, ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆಯುಳ್ಳ ಮುಸ್ಲಿಮರ ಸಾಮಾಜಿಕ ನ್ಯಾಯ ಮರೀಚಿಕೆಯೇ ಆಗಿ ಉಳಿದಿದೆ.ಮುಸ್ಲಿಮರು ಸಾಮಾಜಿಕ, ಆರ್ಥಿಕ, ಶಿಕ್ಷಣ, ಉದ್ಯೋಗ, ರಾಜಕೀಯವಾಗಿ ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ. ಎಲ್ಲಾ ಹಂತಗಳ ಸರಕಾರಗಳು ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುತ್ತಿಲ್ಲ, ಇವುಗಳ ಅನುಷ್ಠಾನ ಜಾರಿಗಳಿಗಾಗಿ ತಕ್ಕ ಬಜೆಟ್ ಗಳನ್ನು ಘೋಷಣೆ ಮಾಡುತ್ತಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಿದರು ಅಯಾ ಪಕ್ಷಗಳ ಯೋಗ್ಯತೆಗೆ ತಕ್ಕಂತೆ ಮುಸ್ಲಿಂರನ್ನು ಅಭಿವೃದ್ಧಿಯಿಂದ ಹೊರಗಿಡುವ ಅಥವಾ ತಾರತಮ್ಯಮಾಡುವ ಯೋಚನೆಗಳು ಮಾತ್ರ ಬದಲಾಗುತ್ತಿಲ್ಲ. ಇದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಭಾರತ ದೇಶ ಸ್ವತಂತ್ರಗೊಂಡು ಇಂದಿಗೆ 78 ವರ್ಷಗಳ ಸಂಭ್ರಮ. ಆದರೆ ಭಾರತೀಯ ಮುಸ್ಲಿಮರು ವಿಶೇಷವಾಗಿ ಕರ್ನಾಟಕದ ಅತಿಹೆಚ್ಚು ಮುಸ್ಲಿಮರು ಬಡತನ, ನಿರುದ್ಯೋಗ, ಅನಕ್ಷರತೆಯಲ್ಲಿ ನಲುಗುತ್ತಿರುವುದು, ಕೋಮು ದೌರ್ಜನ್ಯಗಳಿಂದ ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕಳೆದು ಕೊಳ್ಳುತ್ತಿರುವುದು ಶೋಚನಿಯ.
ಮುಸ್ಲಿಮರು ಎಲ್ಲಾ ಕ್ಷೆತ್ರ ಗಳಲ್ಲೂ ಹಿಂದುಳಿದಿದ್ದಾರೆ ಎಂಬ ನಗ್ನ ಸತ್ಯವನ್ನು ಡಾ. ಗೋಪಾಲ್ ಸಿಂಗ್ ವರದಿ, ಜಸ್ಟಿಸ್ ರಾಜೇಂದ್ರ ಸಾಚಾರ್ ಸಮಿತಿಯ ವರದಿ, ಜಸ್ಟಿಸ್ ರಂಗನಾಥ್ ಮಿಶ್ರ ವರದಿ, ಪ್ರೊಫೆಸರ್ ಕುಂಡು ಮುಂತಾದ ಕೇಂದ್ರ ಸರಕಾರಗಳು ನೇಮಿಸಿದ ಸಮಿತಿ-ಆಯೋಗಗಳೇ ಮುಸ್ಲಿಮರ ಈ ಚಿಂತಾಜನಕ ದುಸ್ಥಿತಿಗಳನ್ನು ಬಹಿರಂಗ ಪಡೆಸಿವೆ. ಅಲ್ಲದೆ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ರ ಹಲವಾರು ಆಯೋಗಗಳೂ ಸಹ ಮುಸ್ಲಿಮರು ಹಿಂದುಳಿದಿದ್ದಾರೆ ಅಷ್ಟೇ ಅಲ್ಲದೆ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಿವೆ. ಇಷ್ಟಲ್ಲದೆ, ಮುಸ್ಲಿಮರಿಗಾಗಿ ಸಂವಿಧಾನಬದ್ದವಾಗಿ ಜಾರಿಗೊಂಡಿದ್ದ ಮೀಸಲಾತಿಯನ್ನು ಸಹ ಕಿತ್ತುಕೊಳ್ಳಲಾಗಿದೆ.
ರಾಜ್ಯದಲ್ಲಿ OBC ಯ ಹಾವನೂರು, ಪ್ರೊ.ರವಿವರ್ಮ ಕುಮಾರ್ ಆಯೋಗಗಳಿಂದ ಹಿಡಿದು ಡಾ.ಸಿ.ಎಸ್.ದ್ವಾರಕನಾಥ್ ಆಯೋಗದವರೆಗೆ ಸ್ವತಂತ್ರ ನಂತರ ಕಳೆದ 78 ವರ್ಷಗಳಲ್ಲಿ ಬಂದಿರುವ ಎಲ್ಲ ಕೇಂದ್ರ, ರಾಜ್ಯ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ಅಧ್ಯಯನದ ಪೂರ್ಣವರದಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಶೇ 4 ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿತ್ತು. ವೀರಪ್ಪ ಮೊಯಿಲಿಯರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿ ಅಂದಿನ ಅಧ್ಯಕ್ಷರಾಗಿದ್ದ ಕೆ.ರೆಹಮಾನ್ ಖಾನ್ ನೇತೃತ್ವದಲ್ಲಿ ಕರ್ನಾಟಕದ ಮುಸ್ಲಿಮರ ಸಾಮಾಜಿಕ, ಆರ್ಥಿಕ ವರದಿಯ ಆಧಾರದ ಮೇಲೆ ಮೊದಲ ಬಾರಿಗೆ ಶೇ.6 ರಷ್ಟು ಮೀಸಲಾತಿ ಕಲ್ಪಿಸಲಾಯಿತು. ನಂತರ ರಾಜ್ಯದ ಮೀಸಲಾತಿ ಮಿತಿ ಶೇ. 50ಕ್ಕೂ ಮೀರಿ ಹೆಚ್ಚಳವಾದ ಕಾರಣ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾದ ನಂತರ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು. ಮುಸ್ಲಿಮರ ಅಭಿವೃದ್ಧಿಗೆ ಒಂದಷ್ಟು ಆಸರೆ ಯಾಗಿದ್ದ ಮೀಸಲಾತಿಯನ್ನು ಸಹ ಇಂದು ಕಿತ್ತುಕೊಳ್ಳಲಾಗಿದೆ.
ಇಂತಹ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದ, ತಾರತಮ್ಯಕ್ಕೆ ಒಳಗಾದ, ಅಭಿವೃದ್ಧಿಯಿಂದ ವಂಚನೆಗೆ ಒಳಗಾದ, ಕೋಮುವಾದಿಗಳ ದೌರ್ಜನ್ಯಕ್ಕೆ ಒಳಗಾದ, ರಾಜಕೀಯವಾಗಿ ಸಮಾನ ಪಾಲುಸಿಗದ ನಾವು ಮುಸ್ಲಿಮರು ಇಂದು ಒಂದಾಗಬೇಕಿದೆ. ಐಕ್ಯತೆಯ ಕೂಗಿನೊಂದಿಗೆ ನಮ್ಮ ಹಕ್ಕುಗಳಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಸರಕಾರಕ್ಕೆ ಆಗ್ರಹಿಸಬೇಕಿದೆ.
ಸರಕಾರಕ್ಕೆ ನಮ್ಮ ಹಕ್ಕೋತ್ತಾಯಗಳು
- ಒಬಿಸಿ ಮುಸ್ಲಿಂ 2B ಮೀಸಲಾತಿಯನ್ನು ಮರುಸ್ಥಾಪಿಸಬೇಕು
- ಇರುವ ಶೇ.4 ರ 2B ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಸಬೇಕು
- ಸ್ಥಳೀಯ ಚುನಾವಣೆಗಳ ಒಬಿಸಿ ಮೀಸಲಾತಿಯಲ್ಲಿ ಪ್ರಬಲ ಜಾತಿಗಳಿಂದ ಮುಸ್ಲಿಮರು ಅವಕಾಶ ವಂಚಿತರಾಗುತ್ತಿದ್ದು, ಇದಕ್ಕೆ ಪರಿಹಾರವಾಗಿ ಈ ಮೀಸಲಿನಲ್ಲಿ ಒಳಮೀಸಲು ತಂದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಜಾರಿಗೊಳಿಸಬೇಕು
- ಅತಿಹಿಂದುಳಿದ ನದಾಫ್ – ಪಿಂಜಾರ ಸಮುದಾಯಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ /ಸಕ್ರಿಯಗೊಳಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು
- ವಖ್ಫ್ ಮಂಡಳಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಖ್ಫ್ ನ ಹಕ್ಕು ಮತ್ತು ಸ್ವತಂತ್ರವನ್ನು ಮೋಟುಕುಗೊಳಿಸುವ ಕೇಂದ್ರಸರಕಾರದ ಹೊಸ ವಖ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯಸರಕಾರ ನಿರ್ಣಯವನ್ನು ಕೈಗೊಳ್ಳಬೇಕು.
- ರಾಜ್ಯದ ಮುಸ್ಲಿಮ್ ಲೈಸನ್ಸ್ ಗುತ್ತಿಗೆದಾರರಿಗೆ ಆಧ್ಯತೆ ಹಾಗು ವಿಶೇಷ ಅವಕಾಶಗಳನ್ನು ನೀಡ ಬೇಕು.
ಕರ್ನಾಟಕ ಮುಸ್ಲಿಂ ಯೂನಿಯನ್ನ ಜಬ್ಬಾರ್ ಕಲ್ಬುರ್ಗಿ, ರಾಜ್ಯ ಅಧ್ಯಕ್ಷರು , ಡಾ. ಖಾಸಿಂ ಸಾಬ್, ರಾಜ್ಯ ಪ್ರಧಾನಕಾರ್ಯದರ್ಶಿ, M L ಸರಕಾವಸ, ಸಂಚಾಲಕರು, ಕಿತ್ತೂರು ಕರ್ನಾಟಕ ವಿಭಾಗ ಉಪಸ್ಥಿತಿ ಇದ್ದರು.
ಡಾ. ಖಾಸಿಂ ಸಾಬ್, ರಾಜ್ಯ ಪ್ರಧಾನಕಾರ್ಯದರ್ಶಿ