ಕನ್ನಡವೆನ್ನುಸಿರು
ಕನ್ನಡ ನುಡಿಯನು
ನನ್ನೆದೆ ಗುಡಿಯಲಿ
ಹೊನ್ನಿನ ರೂಪದಿ ಪೊರೆದಿರುವೆ
ಅನ್ನವ ನೀಡುವ
ಚಿನ್ನದ ನುಡಿಯಿದು
ಎನ್ನುತ ಹಾಡುತ ಮೆರೆದಿರುವೆ
ಕನ್ನಡ ನೆಲದಲಿ
ಅನ್ನವ ತಿನ್ನುತ
ಕನ್ನಡವ ನುಡಿಯದಿರಬೇಕೆ?
ಕನ್ನಡ ನುಡಿದರೆ
ಅನ್ನವ ನೀವುದು
ಎನ್ನುವ ಶಾಸನ ತರಬೇಕೆ?
ಕನ್ನಡ ಕನ್ನಡ
ಎನ್ನದಿರೆನ್ನಡ
ಮನ್ನಿಸನೆಂದೂ ಕನ್ನಡಿಗ
ಅನ್ನವ ತಿನ್ನುತ
ಕನ್ನವ ಹಾಕಿರೆ
ಇನ್ನಿರದಿಲ್ಲಿ ನೆಲವು ನಿಮಗ
ಕನ್ನಡ ಬೆಳೆಯಲಿ
ಕನ್ನಡ ಬೆಳಗಲಿ
ಕನ್ನಡ ನಾಡಲಿ ಚಿರವಾಗಿ
ಕನ್ನಡ ಹೊನ್ನುಡಿ
ಎನ್ನುವ ಜೀವಕೆ
ಕನ್ನಡ ಒಲಿಯಲಿ ವರವಾಗಿ.
ಎದ್ದೇಳು ಕನ್ನಡಿಗ
ಎದ್ದೇಳು ಕನ್ನಡಿಗ
ಎದ್ದೇಳು ಕಾವಲಿಗ
ಮದ್ದಾನೆಯಾಗಿ ನುಡಿ ಕಾಯಲೇಳು
ಮುದ್ದಾದ ಈ ನುಡಿಯ
ಖುದ್ದಾಗಿ ಕಲಿಯದಿರೆ
ಒದ್ದಾದರೂ ನುಡಿಯ ಕಲಿಸಲೇಳು
ನಂದುತಿದೆ ನುಡಿದೀಪ
ಚಂದನದ ನಾಡಿನಲಿ
ಅಂದಗೆಡುತಿದೆ ನಾಡ ನುಡಿಯಲಿಂದು
ಬಂಧನ ಬೆಸೆದು ನಾಡ
ಮಂದಿಯೊಳು ಅಭಿಮಾನ
ದಿಂದ ಕಟ್ಟಬೇಕಿದೆ ನಾಡನಿಂದು
ಕನ್ನಡತನ ಬೆಳೆಯಲಿ
ಕನ್ನಡತನ ಬೆಳಗಲಿ
ಎನ್ನುತ ಬೊಗಳೆಯ ಭಾಷಣ ಬಿಗಿವರು
ಕನ್ನಡದ ನೆಲದಲ್ಲಿ
ಕನ್ನಡಿಗ ನುಡಿಯದಿರೆ
ಮನ್ನಣೆಯನಿನ್ನಾರು ನೀಡುವವರು
ಮಕ್ಕಳು ನುಡಿದರೆ ಸಿಹಿ
ಸಕ್ಕರೆ ನುಡಿಯಿದು ಸವಿ
ಅಕ್ಕರೆಯಲಿದನು ಪೊರೆಯಲೇಬೇಕು
ನಕ್ಕರೆ ನಗುವಲು ನುಡಿ
ಯಕ್ಕರ ಹೊಳೆವುದು ಎದೆ
ಯೊಕ್ಕಿಸಿದನು ನುಡಿದುಳಿಸಲೇಬೇಕು
ಪಂಪ ಪೊನ್ನ ರನ್ನರ
ಪೆಂಪಿನ ಹಳಗನ್ನಡ
ಕಂಪೊಗೆವ ನಾರಣಪ್ಪನ ಕನ್ನಡ
ಸೊಂಪಿನ ನಡುಗನ್ನಡ
ಜೊಂಪಿನ ತಿಳಿಗನ್ನಡ
ಇಂಪಿನಲಿ ಕುವೆಂಪಿನ ಹೊಸಗನ್ನಡ
ಪಡೆದಿಹುದು ಕೀರ್ತಿಯನು
ನುಡಿಯ ರಾಣಿಯೆಂದು
ಅಡಿಗಡಿಗು ನುಡಿಯಬೇಕು ನಾವಿಂದು
ಒಡಲೊಳಗರಿಯಬೇಕು
ನುಡಿಭಾವ ಕಡಲಾಗಿ
ತಡೆಯಿರದೆ ಸಕಲ ದಿಕ್ಕಿಗೂ ಮೊರೆದು.

ದೇವರಾಜು. ಕೆ ಮಲಾರ
ಸಹಾಯಕ ಪ್ರಾಧ್ಯಾಪಕರು


