ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆಯದ್ದೇ ಕಾರುಬಾರು. ಗುಡುಗು, ಮಿಂಚು ಸಮೇತ ಬಿದ್ದ ಮಹಾಮಳೆಗೆ ಹಲವೆಡೆ ಮರಗಳು ಧರೆಗುರುಳಿದವು. ಟೊಂಬೆಗಳು ಮುರಿದು ಬಿದ್ದವು. ಅಂಡರ್ ಪಾಸ್ ಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು.
ನಿನ್ನೆ ಸಂಜೆ ಆರಂಭವಾದ ಮಳೆ ತಡರಾತ್ರಿಯವರೆಗೆ ಮುಂದುವರೆಯಿತು. ಹೆಬ್ಬಾಳ, ದಾಸರಹಳ್ಳಿ, ಮಾಗಡಿ ರಸ್ತೆ, ಶೇಶಾದ್ರಿಪುರಂ, ವಿವಿಧೆಡೆ ಅಂಡರ್ ಪಾಸ್ ಗಳಲ್ಲಿ ನೀರು ತುಂಬಿಕೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಯಿತು.
ನೆಲಮಂಗಲ, ಯಶವಂತಪುರ, ರಾಜಾಜಿನಗರ, ಶಿವಾಜಿನಗರ ಸೇರಿ ಹಲವೆಡೆ ಮಳೆ ಅಬ್ಬರಕ್ಕೆ ಮರಗಳು ನೆಲಕ್ಕೆ ಉರುಳಿದವು. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರಕ್ಕೆ ಒಳಚರಂಡಿಗಳು ತುಂಬಿ ರಸ್ತೆಗೆ ಕೊಳಕು ನೀರು ಚೆಲ್ಲಾಡಿಹೋಯಿತು.
ಜಯನಗರ, ಹನುಮಂತ ನಗರ, ಗಿರಿನಗರ, ಹೊಸಕೆರೆಹಳ್ಳಿ, ಇಟ್ಟಮಡು, ಕಾಟನ್ ಪೇಟೆ, ಹೆಬ್ಬಾಳ, ಮೆಜೆಸ್ಟಿಕ್, ಯಲಹಂಕ, ಸಹಕಾರನಗರ, ಲಗ್ಗೆರೆ, ಕುರುಬರಹಳ್ಳಿ, ಬೊಮ್ಮನಹಳ್ಳಿ, ಹೊರಮಾವು, ಕೆಂಗೇರಿ, ಗೊಟ್ಟಿಗೆರೆ. ಯಲಹಂಕ, ಕಮ್ಮನಹಳ್ಳಿ, ಬಾಣಸವಾಡಿ, ಕೋರಮಂಗಲ, ರಾಜಮಹಲ್ ಸೇರಿ ಬೆಂಗಳೂರು ನಗರದ ಹಲವೆಡೆ ಮಳೆಯಾಯಿತು. ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿತು.
ರಾಜ್ಯದಲ್ಲೆಡೆ ಮುಂದಿನ ಒಂದು ವಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ. 15 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ರಾಜಧಾನಿಯ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಇನ್ನೊಂದೆಡೆ ರಾಜ್ಯದ ನಾನಾ ಭಾಗಗಳಲ್ಲಿ ನಿನ್ನೆ ಭರ್ಜರಿ ಮುಂಗಾರುಪೂರ್ವ ಮಳೆಯಾಗಿದೆ. ಈ ವರ್ಷ ಅತಿಹೆಚ್ಚು ತಾಪಮಾನ ಕಂಡಿದ್ದ ರಾಯಚೂರು ಜಿಲ್ಲೆಯಲ್ಲಿ ಗುಡುಗು ಸಿಡಿಲಿನ ಸಹಿತ ಭರ್ಜರಿ ಮಳೆಯಾಗಿದೆ. ಬಿಸಿಲಲ್ಲಿ ಬೇಯುತ್ತಿದ್ದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಕಂಡುಬಂದಿದೆ. ಮಳೆಗಾಳಿಗೆ ಹಲವೆಡೆ ಭತ್ತದ ಬೆಳೆ ನೆಲಕಚ್ಚಿದ್ದು, ಮಾವಿನ ಕಾಯಿಗಳು ಉದುರಿವೆ.