ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ನ ಎಡಕುಮೇರಿ ಕಡಗರವಳ್ಳಿ ಮಧ್ಯೆ ರೈಲ್ವೆ ಹಳಿ ಇರುವ ಜಾಗದಲ್ಲೇ ಭೂಕುಸಿತದಿಂದಾಗಿ 14 ರೈಲುಗಳ ಸಂಚಾರ ರದ್ದಾಗಿದೆ. ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ಪುನಃಸ್ಥಾಪನೆ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಆಗಸ್ಟ್ 10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಸಾಧ್ಯವಿಲ್ಲ ಎಂದು ರೈಲ್ವ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ರೈಲ್ವೆ ಹಳಿಯ ಕೆಳಭಾಗದಲ್ಲಿ ಭಾರಿ ಮಣ್ಣು ಕುಸಿತವಾಗಿದ್ದು, ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ದಿನವಿಡೀ ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ.
ಶುಕ್ರವಾರ ಸಂಜೆ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳನ್ನು ಮಾರ್ಗ ಬದಲಾಯಿಸಿ ಕಳುಹಿಸಲಾಗಿವೆ.
ಹಗಲಿರುಳು ಶ್ರಮಿಸಿದರು ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರಲು ಇನ್ನೂ 15 ದಿನಗಳು ಬೇಕಾಗಿದ್ದು, 15 ದಿನಗಳ ಕಾಲ ಈ ಮಾರ್ಗದಲ್ಲಿ ಯಾವುದೇ ರೈಲು ಸಂಚರಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಟ್ರ್ಯಾಕ್ ಮರುಸ್ಥಾಪಿಸಲು ಪ್ರಗತಿ ಸಾಧಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.