ಮಂಗಳೂರು: ಡಿಸೆಂಬರ್ 16, ನಾಳೆ ಬೆಳ್ತಂಗಡಿಯಲ್ಲಿ “ಕೊಂದವರು ಯಾರು”ಸಂಘಟನೆಯಆಶ್ರಯದಲ್ಲಿ ‘ಮಹಿಳಾ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶʼ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಅಂಗವಾಗಿ ಮೆರವಣಿಗೆ ಮತ್ತು ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಧರ್ಮಸ್ಥಳ ಗ್ರಾಮದ ಪ್ರಕರಣಗಳನ್ನು ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದೆ. ಆದರೆ ಮಾಧ್ಯಮಗಳಲ್ಲಿ ಇದುವರೆಗೂ ಕೇವಲ ಶವಗಳನ್ನು ಹೂತು ಹಾಕಿರುವ ಪ್ರಕಣಗಳ ತನಿಖೆ ಮಾತ್ರ ನಡೆಯುತ್ತಿದೆ ಎಂದು ವರದಿಯಾಗುತ್ತಿದೆ. ಇಲ್ಲಿ ದಶಕಗಳಿಂದ ಕಾಣೆಯಾಗಿರುವ ಎಲ್ಲ ಹೆಣ್ಣುಮಕ್ಕಳನ್ನು ಕುರಿತೂ ತನಿಖೆ ನಡೆಯಬೇಕು ಎನ್ನುವುದು ಕೊಂದವರು ಯಾರು ಸಂಘಟನೆಯ ಪ್ರಮುಖ ಆಗ್ರಹವಾಗಿದೆ.
1979 ರಲ್ಲಿ ನಡೆದ ವೇದವಲ್ಲಿ ಹತ್ಯೆ, 1986 ರಲ್ಲಿ ನಡೆದ ಪದ್ಮಲತಾ ಕೊಲೆ, 2012 ರಲ್ಲಿ ನಡೆದ ಯಮುನಾ ಮತ್ತು ನಾರಾಯಣ ಕೊಲೆ ಮತ್ತು ಇದೇ ವರ್ಷ ನಡೆದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯ ಅತ್ಯಾಚಾರ ಕೊಲೆ ನಡೆದಿದೆ. ಆದರೆ ಈ ಎಲ್ಲ ಪ್ರಕರಣಗಳಲ್ಲಿ ಇದುವರೆಗೆ ನ್ಯಾಯ ಒದಗಿಸಲಾಗಿಲ್ಲ. ನಿಜವಾದ ಅರೋಪಿಗಳನ್ನು ಪತ್ತೆಹಚ್ಚಲಾಗಿಲ್ಲ. ಆದ್ದರಿಂದ ನ್ಯಾಯ ಒದಗಿಸುವ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಂಡಿದೆ.
ನಿರ್ಭಯ ಪ್ರಕರಣ ಡಿಸೆಂಬರ್ 16 ದೆಹಲಿಯಲ್ಲಿ ನಡೆದಿದ್ದು, ಕಳೆದ13 ವರ್ಷಗಳಿಂದಲೂ ದೇಶದಾದ್ಯಂತ ಮಹಿಳಾ ಸಂಘಟನೆಗಳು ಅದನ್ನು‘ಅತ್ಯಾಚಾರ ವಿರೋಧಿ ದಿನʼವನ್ನಾ ಗಿ ಆಚರಿಸುತ್ತಾ ಬಂದಿದ್ದು ಈ ಹೋರಾಟಕ್ಕೆ ಈ ದಿನವನ್ನೇ ಆರಸಿಕೊಳ್ಳಲಾಗಿದೆ ಸಂಘಟಕರು ತಿಳಿಸಿದ್ದಾರೆ.
ಈಗಲೂ ಧ್ವನಿ ಎತ್ತದಿದ್ದರೆ ಇಂತಹ ಪ್ರಕರಣಗಳು ಮರುಕಳಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದೂ ಸಂಘಟನೆ ತಿಳಿಸಿದೆ.
ಈ ಪೊಲೀಸ್ ಅಧಿಕಾರಿಗಳನ್ನು ಕುರಿತೂ ವಿಚಾರಣೆ ಮಾಡಬೇಕಲ್ಲವೇ?:
ಮಹಿಳೆಯರ ಮತ್ತು ಯುವತಿಯರ ಸೇರಿದಂತೆ ನೂರಾರು ಜನರ ಅಸಹಜ ಸಾವುಗಳು ಧರ್ಮಸ್ಥಳ ಮತ್ತದರ ಸುತ್ತಲೂ ನಡೆದಿವೆ ಎಂದು ಪೊಲೀಸರೇ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ ವರದಿ ನೀಡಲು ಸರ್ಕಾರವೇ 2016ರಲ್ಲಿ ರಚಿಸಿದ್ದ ವಿ. ಎಸ್. ಉಗ್ರಪ್ಪ ಸಮಿತಿಯ ಮುಂದೆ ತಿಳಿಸಿದ್ದರು. ಪ್ರತಿ ವರ್ಷ ಕನಿಷ್ಠ 100 ಅಸಹಜ ಸಾವುಗಳು ಸಂಭವಿಸುತ್ತಿವೆ ಎಂದೂ ಅವರೇ ಒಪ್ಪಿಕೊಂಡಿದ್ದರು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾದರೂ ಅಪರಾಧಿಗಳೇ ಪತ್ತೆಯಾಗದ ಮಹಿಳೆಯರ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳು ಸಂಭವಿಸಿವೆ. ಆದ್ದರಿಂದ ಕಳೆದ ಹಲವು ದಶಕಗಳಲ್ಲಿ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನೂ ವಿಚಾರಣೆ ಮಾಡಿ ಸತ್ಯ ಹೊರತರುವ ಜವಾಬ್ದಾರಿಯನ್ನು ಎಸ್ ಐಟಿ ನಿರ್ವಹಿಸಬೇಕು ಎಂದೂ ಆಗ್ರಹಪಡಿಸಿದೆ.
ಮೌನ ಮುರಿಯಲು ಇದು ಸಕಾಲ; ಕೊಂದವರು ಯಾರು ಎತ್ತಿರುವ ಪ್ರಶ್ನೆಗಳು:
* ಆ ಹೆಣ್ಣುಮಕ್ಕಳು ಅದೆಷ್ಟು ಸಂಕಟಪಟ್ಟು, ನರಳಿ ಮಣ್ಣಾಗಿದ್ದಾರೋ ಅಲ್ಲವೇ?
* ಇಂತಹ ಸನ್ನಿವೇಶದಲ್ಲೂ ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚದೆ ಪ್ರಕರಣಗಳನ್ನು ಮುಚ್ಚಿಹಾಕಿರುವುದು ಏಕೆ?
* ಮಹಿಳೆಯರ ಮೇಲೆ ಅತ್ಯಾಚಾರವಾದಾಗ, ಪೊಲೀಸರು ವೈದ್ಯಕೀಯ ವರದಿಯ ಸಾಕ್ಷ್ಯವನ್ನು ರಕ್ಷಿಸಲಿಲ್ಲವೇಕೆ?
* ಈ ಸಾವುಗಳಿಗೆ ಕಾರಣ ಯಾರು? ಆರೋಪಿಗಳ ವಿಚಾರಣೆ ಯಾಕಿಲ್ಲ? ಅಪರಾಧಿಗಳನ್ನು ನಮ್ಮ ಪೋಲಿಸ್ ಇಲಾಖೆ ಪತ್ತೆಹಚ್ಚಲಾರದೇ? ಇಡೀ
* ಪೊಲೀಸ್ ವ್ಯವಸ್ಥೆಗೆ ಇದರಿಂದ ಕಪ್ಪುಚುಕ್ಕೆಯಾಗಿಲ್ಲವೆ?
* ಇದರ ಹಿಂದೆ ಯಾವ ಕಾಣದ ಶಕ್ತಿಗಳ ಕೈವಾಡವಿದೆ?
* ನೇತ್ರಾವತಿ ಸ್ನಾನಘಟ್ಟದಲ್ಲಿ ಆಸಹಜ ಸಾವುಗಳಾಗುತ್ತವೆ ಎಂದಾಗ, ಅಲ್ಲಿ ಈ ವರೆಗೆ ಪೊಲೀಸ್ ಭದ್ರತೆ ಯಾಕಿಲ್ಲ?
* ಬೆಳ್ತಂಗಡಿ ಪೊಲೀಸ್ ಠಾಣೆಯ ಬೇರೆಡೆಗಳಿಗೆ ಹೋಲಿಸಿದರೆ ಧರ್ಮಸ್ಥಳ ವ್ಯಾಪ್ತಿಯಲ್ಲೇ ಆತ್ಮಹತ್ಯೆಗಳು ದಾಖಲಾಗಿರುವುದು ಏಕೆ?
* ಹೆಣ್ಣುಮಕ್ಕಳ ಜೀವ ಎಂದರೆ ನಮ್ಮ ವ್ಯವಸ್ಥೆಗೆ ಇಷ್ಟೊಂದು ಅಗ್ಗವೇ? ಆಮಾಯಕರ ಸಾವುಗಳಿಗೆ ನ್ಯಾಯ ಬೇಡವೇ?
* ಹೆಣ್ಣುಮಕ್ಕಳ ಸಾವುಗಳನ್ನು ರಾಜಕೀಯಕ್ಕೆ ಗುರಿಮಾಡುವುದು ಏಕೆ?
* ಮನುಷ್ಯತ್ವ ಇಲ್ಲದೇ ಹೆಣ್ಣುಮಕ್ಕಳನ್ನು ಕ್ರೂರವಾಗಿ ಹಿಂಸಿಸಿ ಕೊಂದವರು ಯಾರು?
* ಈ ಎಲ್ಲಾ ಸಾವುಗಳಿಗೆ ಕಾರಣ ಯಾರು ಎಂದು ನ್ಯಾಯ ಕೇಳಿದವರು ಧರ್ಮದ್ರೋಹಿಗಳೆ?
* ದೂರುದಾರರನ್ನು, ಸಾಕ್ಷಿದಾರರನ್ನು ಬೆದರಿಸುವ ಪೊಲೀಸರು SITಯಲ್ಲಿದ್ದರೆ ನೊಂದವರಿಗೆ ನ್ಯಾಯ ಸಿಗುವುದೇ?
* SITಯಲ್ಲಿ ಯಾರದೇ, ಯಾವುದೇ ಬಗೆಯ ಒತ್ತಡಕ್ಕೆ ಮಣಿಯದ ಕರ್ತವ್ಯನಿಷ್ಠ, ಪ್ರಾಮಾಣಿಕ ಪೊಲೀಸರು ಮಾತ್ರ ಇರಬೇಕಲ್ಲವೆ?
* ಯಾವ ಬಲಾಡ್ಯರೂ SITಯ ಮೇಲೆ ಪ್ರಭಾವ ಬೀರದಂತೆ ನಿಷ್ಪಕ್ಷಪಾತ ತನಿಖೆ ಆಗಬೇಕಲ್ಲವೆ?
* ಸೌಜನ್ಯ ಪ್ರಕರಣದಲ್ಲಿ ಸಿಬಿಐ ಕೋರ್ಟಿನ ಆದೇಶದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲವೆ?

