ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕರ್ನಾಟಕದಲ್ಲಿ ಭರ್ಜರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, ಮಂಡ್ಯ ಮತ್ತು ಕೋಲಾರಗಳಲ್ಲಿ ಬೃಹತ್ ಸಮಾವೇಶಗಳು ನಡೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿ ಮೈಸೂರಿನಲ್ಲಿ ಸಮಾವೇಶ, ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ವರಿಷ್ಠರು ಇದೇ ಮೊದಲ ಬಾರಿ ಕರ್ನಾಟಕದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಕಾಣಿಸಿಕೊಂಡಿದೆ.
ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಲಿರುವ ರಾಹುಲ್ ಗಾಂಧಿ ಮಧ್ಯಾಹ್ನ 1.30ಕ್ಕೆ ಮಂಡ್ಯದ ಪಿ.ಇ.ಎಸ್ ಕಾಲೇಜು ಮೈದಾನ ತಲುಪಲಿದ್ದಾರೆ. ಅಲ್ಲಿಂದ ರಾಹುಲ್ ಗಾಂಧಿಯವರ ರೋಡ್ ಶೋ ಆರಂಭವಾಗಲಿದ್ದು, ರೋಡ್ ಶೋ ಮೂಲಕ ಮಧ್ಯಾಹ್ನ ಮಂಡ್ಯ ವಿಶ್ವವಿದ್ಯಾಲಯದ ಮೈದಾನಕ್ಕೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಾಧ್ಯತೆ ಇದೆ.
ಮಂಡ್ಯದಿಂದ ಮತ್ತೆ ವಿಶೇಷ ವಿಮಾನದ ಮೂಲಕ ಕೋಲಾರ ತಲುಪಲಿರುವ ರಾಹುಲ್ ಗಾಂಧಿ 4 ಗಂಟೆಗೆ ಅಲ್ಲಿ ಭಾರೀ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ.
ರಾಹುಲ್ ಗಾಂಧಿ ಇಂದು ಪ್ರಚಾರ ನಡೆಸಲಿರುವ ಮಂಡ್ಯ ಮತ್ತು ಕೋಲಾರ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಮತ್ತು ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ರಾಹುಲ್ ಗಾಂಧಿ ಮತ ಯಾಚಿಸಲಿದ್ದಾರೆ.