ಶಿವಮೊಗ್ಗ: ಇಂದು ಪ್ರಪಂಚದೆಲ್ಲೆಡೆ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದು ಬಿದ್ದಿದೆ. ಅಸಮಾನತೆ ಹಿಂದೆಂದೂ ಇಲ್ಲದ ರೀತಿಯಲ್ಲಿ ವ್ಯಾಪಿಸಿಕೊಂಡಿದೆ ಎಂದು ಪ್ರಸಿದ್ಧ ವಿದ್ವಾಂಸರಾದ ಜಿ ಎನ್ ದೇವಿ ಹೇಳಿದರು. ಅವರು ಇಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ “ನಾಲೆಜ್ ಡಯಲಾಗ್ಸ್” ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತಾಡಿದರು.
ಎಗ್ಗಿಲ್ಲದ ಅನುಭೋಗಿ ಸಂಸ್ಕೃತಿ, ಹೊಣೆಗೇಡಿ ವ್ಯಕ್ತಿವಾದಗಳು ಇಡೀ ಮನುಕುಲವನ್ನು ವಿನಾಶಕ್ಕೆ ತಳ್ಳಿವೆ. ಇಂದು ಎಲ್ಲವನ್ನೂ ವ್ಯಾಪಿಸಿಕೊಂಡಿರುವ ಕೃತಕ ಬುದ್ದಿಮತ್ತೆ ಎಂಬುದು ಮಿಲಿಯಾಂತರ ವರ್ಷಗಳಿಂದ ಮಾನವ ಸಂತತಿ ಕಾಪಿಟ್ಟುಕೊಂಡು ಬಂದಿರುವ ನೆನಪಿನ ಜ್ಞಾನವನ್ನು ಅಪ್ರಸ್ತುತಗೊಳಿಸುತ್ತಿದೆ. 1369 ತಾಯ್ನುಡಿಗಳಿರುವ ಭಾರತದಂತಹ ದೇಶದಲ್ಲಿ ಐದು ಸಾವಿರ ಬಗೆಯಲ್ಲಿ ಸಮುದಾಯಗಳು ತಮ್ಮ ಜ್ಞಾನವನ್ನು ನೆನಪಿಟ್ಟುಕೊಂಡು ಮುಂದಿನ ಪೀಳಿಗೆಗಳಿಗೆ ದಾಟಿಸುವ ಪದ್ಧತಿಗಳಿವೆ. ಆದರೆ ಇಂದು ಜಾಗತಿಕವಾಗಿ ಮನುಷ್ಯನ ನೆನಪುಗಳೆಲ್ಲವೂ ಕ್ಷೀಣಿಸಿ ಯಂತ್ರಭಾಷೆಯ ಪ್ರಾಬಲ್ಯ ಹೆಚ್ಚುತ್ತಿದೆ. ಜ್ಞಾನ ಎನ್ನುವುದು ಮನುಷ್ಯರನ್ನು ಬಿಡುಗಡೆಗೊಳಿಸುತ್ತದೆ. ಆದರೆ ರಾಜಕೀಯವು ಜ್ಞಾನದ ಮೇಲೆ ಪ್ರಾಬಲ್ಯ ಸಾಧಿಸಿ ಜ್ಞಾನದ ಸಾಮರ್ಥ್ಯವನ್ನು ಕುಂದಿಸುತ್ತದೆ” ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಾರಣಾಸಿಯ ವಿದ್ಯಾ ಆಶ್ರಮದ ಸುನಿಲ್ ಸಹಸ್ರಬುದ್ಧೆ ಮಾತನಾಡಿ, ಲೋಕಸ್ತ ವಿದ್ಯೆ ಮತ್ತು ಲೋಕಸ್ಯ ವಿದ್ಯೆಗಳು ಬೇರೆ ಬೇರೆ. ಜನ ಮತ್ತು ಸಮುದಾಯಗಳನ್ನು ಒಳಗೊಂಡ ಸಮಾಜದ ಗತಿಶೀಲತೆಯೊಂದಿಗೆ ಲೋಕಸ್ತ ವಿದ್ಯೆ ಸಂಬಂಧ ಹೊಂದಿದೆ ಎಂದರು. ರೈತ ನಾಯಕ ಎನ್ ಡಿ ಸುಂದರೇಶ್ ಅವರನ್ನು ನೆನಪಿಸಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪಕುಲಪತಿ ಶರತ್ ಅನಂತಮೂರ್ತಿ ಮಾತನಾಡಿ, ಇಂದು ನಮಗೆ ಬೇಕಾಗಿರುವ ಇಸಂ ಯಾವುದೆಂದರೆ ಅದು ಪ್ಲೂರಲಿಸಂ ಎಂದರಲ್ಲದೆ, ಈ ನಿಟ್ಟಿನಲ್ಲಿ ಮುಕ್ತ ಚಿಂತನೆಗೆ ಈ ವಿಚಾರ ಸಂಕಿರಣವು ಮುನ್ನುಡಿ ಬರೆದಿದೆ ಎಂದರು.
ಕಾರ್ಯಕ್ರಮ ಮೊದಲಿಗೆ ಪ್ರೊ. ಮೇಟಿ ಮಲ್ಲಿಕಾರ್ಜುನ ಅವರು ಎಲ್ಲರನ್ನೂ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ವಿವಿಯ ಕುಲಸಚಿವರಾದ ಎ ಎಲ್ ಮಂಜುನಾಥ್, ಗೋಪಿನಾಥ್ ಮತ್ತು ಹಣಕಾಸು ಅಧಿಕಾರಿ ರಮೇಶ್ ಅವರು ಉಪಸ್ಥಿತಿರಿದ್ದರು.